ಈ ಬಾರಿ ಭಾರೀ ಚಳಿ, ಮೂರು ರಾಜ್ಯಗಳಿಗೆ ಅಪಾಯ!

By Kannadaprabha NewsFirst Published Oct 15, 2020, 7:57 AM IST
Highlights

ಈ ಬಾರಿ ಭಯಂಕರ ಚಳಿ| ಲಾ ನೀನಾ ಹವಾಮಾನ ವೈಪರೀತ್ಯದ ಪರಿಣಾಮ| 3 ರಾಜ್ಯಗಳಲ್ಲಿ ಅಧಿಕ ಸಾವು ಸಂಭವ: ಐಎಂಡಿ

ನವದೆಹಲಿ(ಅ.15): ಧಾರಾಕಾರ ಮಳೆಯಿಂದ ದೇಶದ ಜನರು ತತ್ತರಿಸಿರುವಾಗಲೇ, ಈ ವರ್ಷ ವಿಪರೀತ ಎನಿಸುವಷ್ಟರ ಮಟ್ಟಿಗೆ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭವಿಷ್ಯ ನುಡಿದಿದೆ. ಈ ಬಾರಿ ಅಧಿಕ ಪ್ರಮಾಣದ ಚಳಿ ಇರುವ ಕಾರಣ ರಾಜಸ್ಥಾನ, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಚಳಿಯಿಂದ ಅಧಿಕ ಸಾವುಗಳು ಸಂಭವಿಸಬಹುದು ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿದೆ.

ಈ ಸಲ ಅಧಿಕ ಚಳಿ ಕಂಡುಬರುವುದಕ್ಕೆ ಮುಖ್ಯ ಕಾರಣ ‘ಲಾ ನಿನಾ’ ಎಂಬ ಹವಾಮಾನ ವೈಪರೀತ್ಯ ಪರಿಣಾಮ ಎಂದು ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ. ಸಾಮಾನ್ಯವಾಗಿ ಹವಾಮಾನದಲ್ಲಿ ಬದಲಾವಣೆಯಾದಾಗ ವಾತಾವರಣದಲ್ಲಿನ ತಾಪಮಾನ ಏರಿಕೆಯಾಗುತ್ತದೆ ಎಂಬ ಭಾವನೆ ಇದೆ. ಆದರೆ ವಾಸ್ತವದಲ್ಲಿ ಪ್ರತಿಕೂಲ ಹವಾಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಇರುವ ಚಳಿಗಾಲದ ತೀವ್ರತೆ ಕುರಿತ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಪ್ರತಿ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡುತ್ತದೆ.

ಏನಿದು ಲಾ ನೀನಾ?:

ಪೆಸಿಫಿಕ್‌ ಸಾಗರದ ಮೇಲ್ಮೈ ಬಿಸಿಯಾಗುವುದನ್ನು ಎಲ್‌ ನಿನೋ ಎನ್ನಲಾಗುತ್ತದೆ. ಆದರೆ ಅದೇ ಸಾಗರದ ಮೇಲ್ಮೈ ತಣ್ಣಗಾದರೆ ಅದನ್ನು ಲಾ ನೀನಾ ಎನ್ನಲಾಗುತ್ತದೆ. ಮುಂಗಾರು ಮಾರುತಗಳ ಮೇಲೆ ಇವೆರಡೂ ಪರಿಣಾಮ ಬೀರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

click me!