'ಕಾಯಿಸಿ ಅವಮಾನಿಸಿದ್ದು ನಾನಲ್ಲ, ಮೋದಿ'

By Kannadaprabha News  |  First Published May 30, 2021, 8:19 AM IST

* ಕಾಯಿಸಿ ಅವಮಾನಿಸಿದ್ದು ನಾನಲ್ಲ, ಮೋದಿ: ದೀದಿ

* ಬಂಗಾಳಕ್ಕಾಗಿ ಮೋದಿ ಕಾಲಿಗೆ ಬೀಳಲೂ ಸಿದ್ಧ

* ಆದರೆ ಅವಮಾನ ಮಾತ್ರ ಸಹಿಸಲ್ಲ

* ವಿಮಾನ ನಿಲ್ದಾಣದಲ್ಲಿ 20 ನಿಮಿಷ ಕಾದೆ

* ಸಭೆಗೆ ಹೋದರೆ ಹೊರ ನಿಲ್ಲಲು ಹೇಳಿದರು

* ಸೈಕ್ಲೋನ್‌ ಪ್ರದೇಶಕ್ಕೆ ಹೋಗಬೇಕಿತ್ತು, ಮೋದಿಗೆ 3 ಸಲ ಹೇಳಿಯೇ ಬಂದೆ


ಕೋಲ್ಕತಾ(ಮೇ.30): ‘ಚಂಡಮಾರುತ ಹಾನಿ ಪರಿಶೀಲನೆಗೆಂದು ಕೋಲ್ಕತಾಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಭೆಯಲ್ಲಿ 30 ನಿಮಿಷ ಕಾಯಿಸುವ ಮೂಲಕ ಅವಮಾನ ಮಾಡಲಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ಮೋದಿ ಅವರನ್ನು ತಾವು ಕಾಯಿಸಲಿಲ್ಲ. ಮೋದಿ ಅವರೇ ತಮ್ಮನ್ನು ಕಾಯಿಸಿದರು. ಆದಾಗ್ಯೂ ಸುಳ್ಳು, ಏಕಪಕ್ಷೀಯ, ಪಕ್ಷಪಾತದ ಸುದ್ದಿಗಳನ್ನು ಮಾಧ್ಯಮಗಳಿಗೆ ಬಿತ್ತರಿಸಲಾಗುತ್ತಿದೆ. ತನ್ಮೂಲಕ ತಮ್ಮನ್ನು ಅವಮಾನಿಸಲಾಗುತ್ತಿದೆ ಎಂದು ಗುಡುಗಿದ್ದಾರೆ.

‘ಬಂಗಾಳ ಜನರಿಗೆ ಒಳ್ಳೆಯದಾಗುತ್ತದೆ, ನನ್ನ ಕಾಲಿಗೆ ಬೀಳು ಎಂದು ಮೋದಿ ಹೇಳಿದರೆ ಅದಕ್ಕೂ ನಾನು ಸಿದ್ಧ. ಆದರೆ ನನ್ನನ್ನು ಅವಮಾನ ಮಾಡಲು ಬರಬೇಡಿ’ ಎಂದು ಟಾಂಗ್‌ ನೀಡಿದ್ದಾರೆ.

Tap to resize

Latest Videos

‘ಚಂಡಮಾರುತ ಕುರಿತ ಸಭೆ ಪ್ರಧಾನಿ- ಸಿಎಂ ನಡುವೆ ನಡೆಯಬೇಕಿತ್ತು. ಆದರೆ ಆ ಸಭೆಗೆ ಬಿಜೆಪಿ ನಾಯಕರನ್ನೂ ಆಹ್ವಾನಿಸಲಾಗಿತ್ತು. ಆದರೆ ಗುಜರಾತ್‌ ಹಾಗೂ ಒಡಿಶಾದಲ್ಲಿ ಈ ರೀತಿ ವಿಪಕ್ಷಗಳನ್ನು ಆಹ್ವಾನಿಸಿರಲಿಲ್ಲ’ ಎಂದು ಟೀಕಿಸಿದ್ದಾರೆ.

ಕಾಯಿಸಿದರು..:

ಚಂಡಮಾರುತದಿಂದ ತತ್ತರಿಸಿದ್ದ ಸಾಗರ್‌, ದಿಘಾ ಪ್ರದೇಶಕ್ಕೆ ನಾನು ಭೇಟಿ ನೀಡಬೇಕಿತ್ತು. ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಯಾಗಿತ್ತು. ದಿಢೀರನೆ ಪ್ರಧಾನಿ ಬಂಗಾಳಕ್ಕೆ ಬರುತ್ತಾರೆ ಎಂಬ ಮಾಹಿತಿ ಬಂತು. ವಿಮಾನ ನಿಲ್ದಾಣಕ್ಕೆ ಹೋದರೆ 20 ನಿಮಿಷ ಕಾಯಿಸಿದರು. ಅಲ್ಲಿಂದ ಬರುವಷ್ಟರಲ್ಲಿ ಮೋದಿ ಅವರ ಸಭೆ ಆರಂಭವಾಗಿತ್ತು. ಸಭೆ ನಡೆವ ಸ್ಥಳಕ್ಕೆ ತಲುಪಿದಾಗ ಹೊರಗೆ ಕಾಯಲು ಸೂಚಿಸಲಾಯಿತು. ತಾಳ್ಮೆಯಿಂದ ಕಾಯ್ದೆವು. ಮತ್ತೆ ವಿಚಾರಿಸಿದಾಗ ಮುಂದಿನ ಒಂದು ತಾಸು ಯಾರಿಗೂ ಅವಕಾಶವಿಲ್ಲ ಎಂದರು. ನಂತರ ಸಮ್ಮೇಳನ ಸಭಾಂಗಣಕ್ಕೆ ಸಭೆ ಸ್ಥಳಾಂತರವಾಗಿದೆ ಎಂದರು. ಮುಖ್ಯ ಕಾರ್ಯದರ್ಶಿ ಹಾಗೂ ನಾನು ಅಲ್ಲಿಗೆ ಹೋದೆವು. ಪ್ರಧಾನಿ ಅವರು ರಾಜ್ಯಪಾಲರು, ಕೇಂದ್ರ ನಾಯಕರು, ಪ್ರತಿಪಕ್ಷದ ಶಾಸಕರ ಜತೆ ಸಭೆ ನಡೆಸುತ್ತಿದ್ದರು. ನಮಗೆ ನೀಡಿದ್ದ ಮಾಹಿತಿಗೆ ಇದು ತದ್ವಿರುದ್ಧ. ಪ್ರಧಾನಿ- ಸಿಎಂ ಸಭೆ ಅದಾಗಬೇಕಿತ್ತು. ಹೀಗಾಗಿ ಪ್ರಧಾನಿ ಅವರಿಗೆ ನಮ್ಮ ಬೇಡಿಕೆಯ ವರದಿ ಸಲ್ಲಿಸಿ, ಅನುಮತಿ ಪಡೆದೇ ಹೊರಬಂದೆ. ಅನುಮತಿಗಾಗಿ ಮೂರು ಬಾರಿ ಕೇಳಿದ್ದೇನೆ’ ಎಂದು ಮಮತಾ ವಿವರಿಸಿದ್ದಾರೆ.

‘ಬಂಗಾಳ ಚುನಾವಣೆಯಲ್ಲಿ ನಮಗೆ ಭರ್ಜರಿ ಬಹುಮತ ದೊರೆತಿದೆ. ಅದಕ್ಕೇ ಪ್ರಧಾನಿ ಅವರು ಈ ರೀತಿ ವರ್ತಿಸುತ್ತಿದ್ದಾರಾ? ಚುನಾವಣೆಯಲ್ಲಿ ಅವರೂ ಪ್ರಯತ್ನ ಪಟ್ಟಿದ್ದಾರೆ. ಸೋತಿದ್ದಾರೆ. ಅದಕ್ಕೇ ಪ್ರತಿನಿತ್ಯ ಈ ರೀತಿ ಮಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಪ್ರಧಾನಿ ಅವರು ಚಂಡಮಾರುತ ಕುರಿತು ಸಭೆ ಕರೆದರೆ ಮಮತಾ ಗೈರು ಹಾಜರಾದರು ಎಂದು ಬಿಜೆಪಿ ಆರೋಪಿಸಿತ್ತು. ಖಾಲಿ ಕುರ್ಚಿಗಳ ಫೋಟೋ ಬಿಡುಗಡೆ ಮಾಡಿತ್ತು. ಈ ಘಟನೆ ಬಳಿಕ ಮುಖ್ಯ ಕಾರ್ಯದರ್ಶಿಯನ್ನು ಕೇಂದ್ರ ಸರ್ಕಾರ ವಾಪಸ್‌ ಕರೆಸಿಕೊಂಡಿತ್ತು.

click me!