ಚಂಡೀಗಢ(ಸೆ.23): ತಮ್ಮ ವಿರುದ್ಧ ಹಲ್ಲು ಮಸೆಯುತ್ತಿರುವ ರಾಜ್ಯ ಕಾಂಗ್ರೆಸ್(Congress) ಘಟಕದ ಅಧ್ಯಕ್ಷ ನವಜೋತ್‌ಸಿಂಗ್(Navjot Sidhu) ವಿರುದ್ಧ ನೇರ ಯುದ್ಧ ಸಾರಿರುವ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್‌ಸಿಂಗ್(Amarinder Singh), ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಅವರನ್ನು ಸೋಲಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತೊಮ್ಮೆ ಪಕ್ಷದ ಹೈಕಮಾಂಡ್ ವಿರುದ್ಧ ಕಿಡಿಕಾರಿರುವ ಸಿಂಗ್, ರಾಹುಲ್ ಮತ್ತು ಪ್ರಿಯಾಂಕಾ ಇನ್ನು ಅನನುಭವಿಗಳು. ಅವರ ಆಪ್ತರು ಇಬ್ಬರನ್ನೂ ದಾರಿತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಅಮರೀಂದರ್ ‘ಸಿಧು ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಮಾಡಿದುದರ ವಿರುದ್ಧ ನಾನು ನನ್ನೆಲ್ಲಾ ಸಾಮರ್ಥ್ಯ ಬಳಸಿ ಹೋರಾಡುವೆ. ಅಪಾಯಕಾರಿ ವ್ಯಕ್ತಿಯಿಂದ ದೇಶವನ್ನು ಕಾಪಾಡಲು ನಾನು ಯಾವುದೇ ತ್ಯಾಗಕ್ಕೂ ಸಿದ್ಧ. 2022 ವಿಧಾನಸಭಾ ಚುನಾವಣೆಯಲ್ಲಿ ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಅವರ ಸೋಲನ್ನು ಖಚಿತಪಡಿಸುವೆ’ ಎಂದು ಘೋಷಿಸಿದ್ದಾರೆ.
ಜೊತೆಗೆ ‘ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ನಾನು ಹುದ್ದೆಯಿಂದ ಕೆಳಗಿಳಿಯುವೆ ಎಂದು ಸ್ವತಃ ಸೋನಿಯಾಗೆ ತಿಳಿಸಿದ್ದೆ. ಆದರೆ ನನ್ನ ಮನವಿ ಕೈಗೂಡಲಿಲ್ಲ. ಹೀಗಾಗಿ ನನಗೆ ಹೋರಾಟ ಅನಿವಾರ್ಯ’ ಎಂದು ಪರೋಕ್ಷವಾಗಿ ಸೋನಿಯಾ ವಿರುದ್ಧವೂ ಮುನಿಸು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ನನ್ನ ರಾಜಕೀಯ ಭವಿಷ್ಯವನ್ನು ನಾನು ಇನ್ನೂ ಮುಕ್ತವಾಗಿ ಇರಿಸಿಕೊಂಡಿದ್ದೇನೆ. ಆಪ್ತರು, ಸ್ನೇಹಿತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ. ನೀವು 40 ವರ್ಷದಲ್ಲೂ ವೃದ್ಧರಾಗಬಹುದು, 80ನೇ ವಯಸ್ಸಿನಲ್ಲೂ ಯುವಕರಾಗಿರಬಹುದು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಇನ್ನೂ ತಮ್ಮ ಆಟ ಮುಗಿದಿಲ್ಲ ಎಂದು ಕೇಂದ್ರ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ