
ನವದೆಹಲಿ(ಅ.05): ‘ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು(Farm law) ಈಗಾಗಲೇ ತಡೆ ಹಿಡಿಯಲಾಗಿದೆ. ಆದರೂ ರೈತರು ಪ್ರತಿಭಟನೆ ನಡೆಸುತ್ತಿರುವುದು ಏಕೆ?’ ಎಂದು ಸುಪ್ರೀಂ ಕೋರ್ಟ್(Supreme Court) ಖಾರವಾಗಿ ಪ್ರಶ್ನಿಸಿದೆ. ಇದೇ ವೇಳೆ, ಲಖೀಂಪುರದಲ್ಲಿ(Lakhimpur) ನಾಲ್ವರು ರೈತರ ಸಾವಿನ ಬಗ್ಗೆಯೂ ಖೇದ ವ್ಯಕ್ತಪಡಿಸಿರುವ ಕೋರ್ಟ್, ‘ಇಂಥ ಸಂದರ್ಭದಲ್ಲಿ ಘಟನೆಯ ಹೊಣೆಯನ್ನು ಯಾರೂ ಹೊರುವುದಿಲ್ಲ’ ಎಂಬ ಎಚ್ಚರಿಕೆಯ ಮಾತನ್ನು ರೈತರಿಗೆ ಹೇಳಿದೆ.
‘ರೈತರಿಗೆ ಮರಣ ಶಾಸನದಂತಿರುವ 3 ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯ ಜಂತರ್ ಮಂತರ್‌ನಲ್ಲಿ(Jantar Mantar) ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು’ ಎಂದು ರೈತ ಸಂಘಟನೆ ಕೋರಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್(Supreme Court) ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ, ‘ಮಾತುಕತೆಗೆ ಕರೆದರೂ ರೈತರು ಬರುತ್ತಿಲ್ಲ’ ಎಂದು ಹರ್ಯಾಣದ ಸರ್ಕಾರ(Haryana Govt) ವಾದಿಸಿತು.
ಇದೇ ವೇಳೆ, ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು, ‘ಕೃಷಿ ಕಾಯ್ದೆ ವಿಚಾರವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿದೆ. ಇಂಥ ಸಂದರ್ಭದಲ್ಲಿ ಯಾರೂ ರಸ್ತೆಗಿಳಿದು ಪ್ರತಿಭಟನೆ ನಡೆಸಬಾರದು. ಈಗ ಲಖೀಂಪುರದಲ್ಲಿ(Lakhimpur) ನಡೆದ ದುರದೃಷ್ಟಕರ ಘಟನೆ ನೋಡಿದ್ದೀರಿ’ ಎಂದರು.
ಆಗ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ಇಂಥ ಘಟನೆ ನಡೆದಾಗ ಯಾರೂ ಹೊಣೆ ಹೊರುವುದಿಲ್ಲ’ ಎಂದಿತಲ್ಲದೆ, ‘ಕಾಯ್ದೆಗೆ ಈಗಾಗಲೇ ತಡೆ ನೀಡಿದ್ದೇವೆ. ಈ ಬಗ್ಗೆ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಾದರೂ ಏನಿದೆ?’ ಎಂದು ಪ್ರಶ್ನಿಸಿತು.
ಇನ್ನು ಹರ್ಯಾಣ ಸರ್ಕಾರ ಆಹ್ವಾನಿಸಿದ ಮಾತುಕತೆಗೆ ಏಕೆ ಹೋಗಲಿಲ್ಲ ಎಂಬುದರ ವಿವರಣೆ ನೀಡುವಂತೆ ರಾಕೇಶ್ ಟಿಕಾಯತ್ ಸೇರಿದಂತೆ 43 ರೈತ ಸಂಘಟನೆಗಳ ಮುಖಂಡರಿಗೆ ಸೂಚಿಸಿತು ಹಾಗೂ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ