ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು: ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ

Published : Apr 29, 2026, 05:34 AM IST
Tamil Nadu Assembly Election 2026

ಸಾರಾಂಶ

ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನದೊಂದಿಗೆ ಪಂಚರಾಜ್ಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೇ 4 ರ ಅಧಿಕೃತ ಫಲಿತಾಂಶಕ್ಕೂ ಮುನ್ನ, ಇಂದು ಸಂಜೆ ಪ್ರಕಟವಾಗಲಿರುವ ಮತದಾನೋತ್ತರ ಸಮೀಕ್ಷೆಗಳು ಸಂಭವನೀಯ ಗೆಲುವಿನ ಸುಳಿವು ನೀಡಲಿವೆ.

ಕೋಲ್ಕತಾ: ಪಂಚರಾಜ್ಯ ಚುನಾವಣೆ ನಡೆದ ರಾಜ್ಯಗಳ ಪೈಕಿ ಒಂದಾದ ಪಶ್ಚಿಮ ಬಂಗಾಳದಲ್ಲಿ 2ನೇ ಹಾಗೂ ಕೊನೆ ಹಂತದ ಚುನಾವಣೆ ಬುಧವಾರ ನಡೆಯಲಿದೆ. ಇದರೊಂದಿಗೆ ಎಲ್ಲ 5 ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಸಂಜೆ 6 ಗಂಟೆಯ ಬಳಿಕ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಲಿವೆ.

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಮೇ 4ಕ್ಕೆ ಪ್ರಕಟವಾಗಲಿದೆಯಾದರೂ, ಸಮೀಕ್ಷೆಗಳು ಅದರ ಸುಳಿವು ನೀಡುವ ಕಾರಣ ಎಲ್ಲರ ಗಮನ ಸಮೀಕ್ಷೆಗಳ ಮೇಲೆ ನಿಟ್ಟಿದೆ.ಹಾಲಿ ಅಸ್ಸಾಂನಲ್ಲಿ ಬಿಜೆಪಿ, ತಮಿಳ್ನಾಡಲ್ಲಿ ಡಿಎಂಕೆ ಕೂಟ, ಕೇರಳದಲ್ಲಿ ಎಲ್‌ಡಿಎಫ್‌, ಬಂಗಾಲದಲ್ಲಿ ಟಿಎಂಸಿ ಮತ್ತು ಪುದುಚೇರಿಯಲ್ಲಿ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಅಧಿಕಾರದಲ್ಲಿವೆ.

ಬಂಗಾಳ 2ನೇ ಹಂತ:

ಏ.23ರಂದು ಬಂಗಾಳದ 152 ಸ್ಥಾನಗಳಿಗೆ ಮತದಾನ ನಡೆದಿದ್ದು, 2ನೇ ಹಂತದಲ್ಲಿ 142 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಹಂತದ ಚುನಾವಣೆ ನಡೆದ ರಾಜ್ಯದ ಉತ್ತರ ಭಾಗಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ದಕ್ಷಿಣದಲ್ಲಿ ಟಿಎಂಸಿ ಪ್ರಾಬಲ್ಯವಿದೆ. ಒಂದು ವೇಳೆ ದಕ್ಷಿಣದಲ್ಲಿನ ದೀದಿ ಭದ್ರ ಕೋಟೆ ಒಡೆಯಲು ಬಿಜೆಪಿ ಸಫಲವಾದರೆ ಮೊದಲ ಸಲ ಅಧಿಕಾರ ಸಿಕ್ಕಲಿದೆ. ಇಲ್ಲವಾದಲ್ಲಿ ಸತತ 4ನೇ ಸಲ ಮಮತಾಗೆ ಸಿಎಂ ಗಾದಿ ಒಲಿಯಲಿದೆ.

ಮೊದಲ ಹಂತದ ಚುನಾವಣೆಯಲ್ಲಿ ಬಂಗಾಳದಲ್ಲಿ ದಾಖಲೆಯ ಶೇ.93.19ರಷ್ಟು ಮತ ಚಲಾವಣೆಯಾಗಿತ್ತು.

ಬಂಗಾಳದಲ್ಲೀಗ ಸಿಂಗಂ ವರ್ಸಸ್‌ ಪುಷ್ಪಾ!

ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಮತದಾನಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಚುನಾವಣಾ ಆಯೋಗವು ‘ಎನ್‌ಕೌಂಟರ್‌ ಸ್ಪೆಷಲಿಸ್ಟ್‌’ ಎಂದೇ ಖ್ಯಾತರಾಗಿರುವ ಯುಪಿಯ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್‌ ಶರ್ಮ ಅವರನ್ನು ಪೊಲೀಸ್‌ ವೀಕ್ಷಕರಾಗಿ ನೇಮಿಸಿರುವುದು ಟಿಎಂಸಿ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.

ಫಾಲ್ಟಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಎಂಸಿಯ ಜೆಹಾಂಗಿರ್‌ ಖಾನ್‌ ಅವರ ಬಗ್ಗೆ ಜನರ ದೂರನ್ನು ಆಲಿಸಿದ ಶರ್ಮ ಸೀದಾ ಅವರ ಮನೆಗೆ ತೆರಳಿ, ‘ಅವರ(ಖಾನ್‌) ಕಡೆಯವರು ಜನರನ್ನು ಬೆದರಿಸುವುದನ್ನು ಮುಂದುವರೆಸಿದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ. ಆಮೇಲೆ ಅಳಬೇಡಿ’ ಎಂದು ಖಾನ್‌ರ ಪರಿವಾರವನ್ನುದ್ದೇಶಿಸಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ, ‘ಬಿಜೆಪಿಗೆ ಚುನಾವಣೆಯಲ್ಲಿ ಸಹಾಯವಾಗಲಿ ಎಂದು ಇವರು ಹೀಗೆ ಮಾಡುತ್ತಿದ್ದಾರೆ. ಕಾರಣ ಅವರಿಗೆ ಸೋಲಿನ ಭಯ ಕಾಡುತ್ತಿದೆ’ ಎಂದು ಆರೋಪಿಸಿರುವ ಖಾನ್‌, ‘ಅವರು ಸಿಂಗಂ ಆದರೆ ನಾನು ಪುಷ್ಟ’ ಎಂದು ಅಲ್ಲು ಅರ್ಜುನ್‌ ಚಿತ್ರವೊಂದರಲ್ಲಿ ನಟಿಸಿದ್ದ ಪಾತ್ರವನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.

2011ನೇ ಬ್ಯಾಚ್‌ನ ಉತ್ತರಪ್ರದೇಶದ ಐಪಿಎಸ್‌ ಅಧಿಕಾರಿಯಾಗಿರುವ ಶರ್ಮ, 500ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ. 22 ತಿಂಗಳಲ್ಲಿ 136 ಎನ್‌ಕೌಂಟರ್‌ಗಳನ್ನು ಇವರು ಮಾಡಿದ್ದರು ಎಂಬುದು ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು - ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ
ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ