ಮಾಜಿ ಅಗ್ನಿವೀರರಿಗೆ ಮದುವೆ ಅನುಮಾನ ಭೀತಿ!

By Suvarna NewsFirst Published Jun 29, 2022, 1:45 PM IST
Highlights

* ನಿವೃತ್ತ ಅಗ್ನಿವೀರರ ಬಗ್ಗೆ ಜನರಲ್ಲಿ ತಾತ್ಸಾರ ಭಾವ ಸಂಭವ

* ಹೆಣ್ಣು ಕೊಡಲು ವಧು ಕಡೆಯವರು ಹಿಂದೇಟು ಹಾಕುವ ಸಾಧ್ಯತೆ

* ಬಿಹಾರದ ಕುಟುಂಬಗಳಲ್ಲಿ ಮನೆಮಾಡಿದ ಆತಂಕ

* ಪಿಂಚಣಿ ಇಲ್ದೇ ಹೋದ್ರೆ ಅವರನ್ಯಾರು ಮದುವೆ ಆಗ್ತಾರೆ: ಮೇಘಾಲಯ ರಾಜ್ಯಪಾಲ

ಪಟನಾ(ಜೂ.29): ಸೇನೆಯಲ್ಲಿ 4 ವರ್ಷ ಅವಧಿಗೆ ಸೃಷ್ಟಿಸಲಾಗಿರುವ ‘ಅಗ್ನಿವೀರ ಯೋಧರ’ ನೇಮಕಾತಿ ವಿರೋಧಿಸಿ ಬಿಹಾರದಲ್ಲಿ ಇತ್ತೀಚೆಗೆ ಕಂಡು ಕೇಳರಿಯದ ಪ್ರತಿಭಟನೆ ನಡೆದಿತ್ತು. ಏಕೆಂದರೆ ಕಾಯಂ ಅಲ್ಲದ ಈ ಅಗ್ನಿವೀರ ಹುದ್ದೆ, ಬಿಹಾರದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮ ಬೀರುವ ಸಂಭವವಿದೆ. ಕೇವಲ 4 ವರ್ಷ ದುಡಿದು ಅಗ್ನವೀರ ಹುದ್ದೆಯಿಂದ ನಿವೃತ್ತರಾದವರಿಗೆ ವಧುವಿನ ಕಡೆಯವರು ಹುಡುಗಿ ಕೊಡಲು ಮುಂದಾಗುವುದು ಅನುಮಾನ ಎಂಬ ಅಭಿಪ್ರಾಯಗಳು ಬಿಹಾರದಲ್ಲಿ ಕೇಳಿಬಂದಿವೆ.

‘ಸೇನೆಯಲ್ಲಿ ಈವರೆಗೆ ಕಾಯಂ ಹುದ್ದೆಯಲ್ಲಿದ್ದು ಯೋಧರು ಗೌರವ ಗಿಟ್ಟಿಸಿಕೊಂಡಿದ್ದರು. ಆದರೆ 4 ವರ್ಷ ಕೆಲಸ ಮಾಡಿದ ಬಳಿಕ ಅಗ್ನಿವೀರರು ಸೇನೆಯಿಂದ ಹೊರಬೀಳುತ್ತಾರೆ. ಇವರನ್ನು ತಿರಸ್ಕೃತಗೊಂಡ ಯೋಧ ಹಾಗೂ ಪಿಂಚಣಿ ಇಲ್ಲದವ ಎಂದು ಜನತೆ ನೋಡುತ್ತಾರೆ. ಹೀಗಾಗಿ ‘ಈತನಿಗೆ ನಮ್ಮ ಹುಡುಗಿಯನ್ನು ಮದುವೆ ಮಾಡಿಕೊಡುವುದು ಬೇಡ’ ಎಂಬ ಭಾವನೆ ವಧುವಿನ ಕಡೆಯವರಿಗೆ ಮೂಡುತ್ತದೆ. ಸೇನೆಯಲ್ಲಿ ಅಧಿಕ ಯೋಧರನ್ನು ಹೊಂದಿರುವ ಬಿಹಾರದಲ್ಲಿ ಹೀಗೆ ಆಗುವ ಸಾಧ್ಯತೆ ಹೆಚ್ಚು’ ಎಂದು ರಾಜಕೀಯ ಮುಖಂಡರೊಬ್ಬರು ಹೇಳಿದ್ದಾರೆ.

ಇದಕ್ಕೆ ತಕ್ಕಂತೆ ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ್‌ ಮಾತನಾಡಿ, ‘ಪಿಂಚಣಿ ಇಲ್ಲದೇ ಹೋದ್ರೆ ಅಗ್ನವೀರರನ್ನು ಯಾರು ಮದುವೆ ಆಗ್ತಾರೆ? ಅಗ್ನಿವೀರ ಯೋಜನೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದಿದ್ದಾರೆ.

ಅಗ್ನಿಪಥ ಯೋಜನೆ ಯುವಕರ ಭವಿಷ್ಯಕ್ಕೆ ಮಾರಕ

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಯುವಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆ ಆಧಾರದಲ್ಲಿ 4 ವರ್ಷ ಅಗ್ನಿವೀರರೆಂದು ಕೆಲಸ ಮಾಡಿಸಿಕೊಂಡು ಕೈಬಿಟ್ಟರೆ, ನಂತರ ಅವರ ಬದುಕು ಅತಂತ್ರ ಸ್ಥಿತಿಗೆ ತಲುಪಲಿದೆ. ಮಹೇಂದ್ರ ಕಂಪನಿ ಒಂದೇ ಅಲ್ಲ, ಸಾವಿರಾರು ಸಂಖ್ಯೆಯಲ್ಲಿರುವ ಎಲ್ಲ ಖಾಸಗಿ ಕಂಪನಿಗಳು ಅಗ್ನಿವೀರರಿಗೆ ಕೆಲಸ ಕೊಡುತ್ತೇವೆಂದು ಬಹಿರಂಗವಾಗಿ ಘೋಷಿಸಲಿ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸದೆ, ಜಾತಿ, ಧರ್ಮ ಮತ್ತು ನಕಲಿ ದೇಶಭಕ್ತಿ ಹೆಸರಿನಲ್ಲಿ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮನೆಯಲ್ಲಿ ಮೂವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮನೆಯಲ್ಲಿ ಮೂವರು, ಸಿಎಂ ಉದಾಸಿ, ಸತೀಶ್‌ ಜಾರಕಿಹೊಳೆ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆದಾಗ್ಯೂ ಕೇವಲ ದೇವೇಗೌಡರ ಕುಟುಂಬವನ್ನು ಮಾತ್ರ ದೂಷಿಸುವುದು ಸರಿಯಲ್ಲ. ಡಾಕ್ಟರ್‌ ಮಕ್ಕಳು ಡಾಕ್ಟರ್‌ ಆಗುತ್ತಿಲ್ಲವೇ, ಹಾಗೆಯೇ ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು ಆಗುವುದರಲ್ಲಿ ತಪ್ಪೇನಿದೆ.? ಕುಟುಂಬ ರಾಜಕಾರಣದ ವಿಷಯವನ್ನೇ ದೊಡ್ಡದಾಗಿ ಚರ್ಚಿಸುವುದು ಬಿಟ್ಟು, ಅಭಿವೃದ್ಧಿ ಪರವಾಗಿ ರಾಜಕಾರಣ ಮಾಡೋಣ ಎಂದರು.

ದಲಿತ ಸಿಎಂಗೆ ಕಾಂಗ್ರೆಸ್‌ ಅಡ್ಡಗಾಲು:

ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡೋಕೆ ಈ ಹಿಂದೆಯೇ ದೇವೇಗೌಡರು ತೀರ್ಮಾನಿಸಿದ್ದರು. ಆದರೆ ಕಾಂಗ್ರೆಸ್‌ ಪಕ್ಷದವರೇ ಅವರಿಗೆ ಅಡ್ಡಗಾಲು ಹಾಕಿದರು. ದಲಿತರು ಸಿಎಂ ಆಗೋದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದು, ಕುಮಾರಣ್ಣ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು. ಅಕ್ರಮ ಆಸ್ತಿ ಪ್ರಕರಣ ಕುರಿತ ಪ್ರಶ್ನೆಗೆ ಸ್ಪಂದಿಸಿದ ಪ್ರಜ್ವಲ್‌ ರೇವಣ್ಣ, ಯಾವ ಕೇಸ್‌ ಆಗಿಲ್ಲ, ಕೋರ್ಚ್‌ನಲ್ಲಿ ವಿಚಾರಣೆ ನಡೆದಿದೆ, ಹೈಕೋರ್ಚ್‌ನಲ್ಲಿ ನಮ್ಮ ಪರ ತೀರ್ಪು ಬಂದಿತ್ತು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿದ್ದು, ಅಲ್ಲಿ ಅಫಿಡವಿಟ್‌ ತಪ್ಪಾಗಿದೆ ಇದರ ಕುರಿತು ಅರ್ಜಿ ಹಾಕಲಾಗಿದ್ದು, ಪುನರ್‌ ಅವಕಾಶ ನೀಡಲು ಕೋರ್ಚ್‌ಗೆ ಮನವಿ ಮಾಡಿ, ಮತ್ತೊಂದು ಪಿಟಿಶನ್‌ ಮೂಲಕ ಕೇಸ್‌ ನಡೆಸಿ ಎಂದು ಹೇಳಿದ್ದಾರೆ. ಅಷ್ಟಕ್ಕೆ ನಾವು ಗೆದ್ದಿದ್ದೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.

click me!