ಏಕ್‌ನಾಥ್‌ ಶಿಂಧೆ-ದೇವೇಂದ್ರ ಫಡ್ನವಿಸ್‌, ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ?

By Santosh Naik  |  First Published Nov 23, 2024, 1:00 PM IST

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಗೆಲುವು ಸಾಧಿಸಿದೆ. ಏಕನಾಥ್ ಶಿಂಧೆ ಅಥವಾ ದೇವೇಂದ್ರ ಫಡ್ನವೀಸ್, ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಕುತೂಹಲ. ಫಲಿತಾಂಶದ ಬಳಿಕ ಮಹಾಯುತಿ ಪಾಲುದಾರರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.


ಮುಂಬೈ (ನ.23): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ನಿರೀಕ್ಷೆಯೇ ಮಾಡದಷ್ಟು ಮುನ್ನಡೆಯನ್ನು ಕಂಡಿದ್ದು ತೋರಿಸಿದೆ. ಆದರೆ, ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದೇ ಸದ್ಯದ ದೊಡ್ಡ ಪ್ರಶ್ನೆ. ಮೂಲಗಳ ಪ್ರಕಾರ ಹೊಸ ಸರ್ಕಾರ ನವೆಂಬರ್‌ 26 ರಂದು ಅಧಿಕಾರ ವಹಿಸಿಕೊಳ್ಳಲಿದೆ. ಮತದಾರರ ಮನಗೆದ್ದಿರುವ ಏಕನಾಥ್ ಶಿಂಧೆ ಅವರನ್ನು ಸಿಎಂ ಆಗಿ ಉಳಿಸಿಕೊಳ್ಳುವುದೇ ಅಥವಾ ಬಿಜೆಪಿಯ ಅಮೋಘ ಸಾಧನೆಗೆ ಕಾರಣರಾದ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಮಾಡಲಿದೆಯೇ ಎನ್ನುವುದು ಮುಂದಿರುವ ಯಕ್ಷ ಪ್ರಶ್ನೆ.

ಕೇವಲ ಐದು ತಿಂಗಳ ಹಿಂದಿನ ಮಾತು. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎನ್‌ಡಿಎ ಮುಗ್ಗರಿಸಿ ಬಿದ್ದಿತ್ತು. ಇದು ರಾಷ್ಟ್ರಮಟ್ಟದಲ್ಲೂ ಬಿಜೆಪಿಯ ಹಿನ್ನಡೆಗೆ ಕಾರಣವಾಯ್ತು. ಈ ಹಂತದಲ್ಲಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಡಿಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದರೊಂದಿಗೆ ಅವರು 'ಮಹಾರಾಷ್ಟ್ರ ರಾಜಕಾರಣದಲ್ಲಿ ಮೂರು ತಿಂಗಳು ಅನ್ನೋದು ಬಹಳ ದೊಡ್ಡ ಸಮಯ' ಎಂದಿದ್ದರು. ಅವರ ಮಾತಿನ ಅರ್ಥ, ವಿಧಾನಸಭೆ ಚುನಾವಣೆಯಲ್ಲಿ ಟ್ರೆಂಡ್‌ ಬದಲಾಗಲಿದೆ ಎನ್ನುವುದಾಗಿತ್ತು. ಅದರಂತೆ, ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್‌ ಮಾಡಲು ಅವರೇ ಮುಖ್ಯ ಕಾರಣರಾಗಿದ್ದಾರೆ. ಇನ್ನೊಂದೆಡೆ ಶಿವಸೇನೆ(ಏಕನಾಥ್‌) ಪಕ್ಷದ ನಾಯಕರಾಗಿದ್ದ ಏಕನಾಥ್‌ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಿದ್ದಾರೆ. ಇವರಿಬ್ಬರಲ್ಲಿ ಮಹಾರಾಷ್ಟ್ರದ ಸಿಎಂ ಆಗಿ ಮಹಾಯುತಿ ಯಾರನ್ನು ಆಯ್ಕೆ ಮಾಡ್ತಾರೆ ಅನ್ನೋದೇ ಈಗ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.

ಸದ್ಯದ ಮಟ್ಟಿಗೆ ಬಿಜೆಪಿ ನೇತೃತ್ವದ ಮಹಾಯುತಿ 288 ವಿಧಾನಸಭಾ ಕ್ಷೇತ್ರದ ರಾಜ್ಯದಲ್ಲಿ 220 ಕ್ಷೇತ್ರದಲ್ಲಿ ಮುನ್ನಡೆ ಕಂಡಿದ್ದರೆ, ಮಹಾ ವಿಕಾಸ್‌ ಅಘಾಡಿ 57 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ನಾಗ್ಪುರ ಸೌತ್ ವೆಸ್ಟ್ ನಲ್ಲಿ ಫಡ್ನವಿಸ್ ಗೆಲುವು ಹೆಚ್ಚೂ ಕಡಿಮೆ ಖಚಿತವಾಗಿದ್ದರೆ, ಕೊಪ್ರಿ-ಪಚ್ಪಖಾಡಿ ಕ್ಷೇತ್ರದಲ್ಲಿ ಏಕನಾಥ್ ಶಿಂಧೆ ಮುನ್ನಡೆ ಸಾಧಿಸಿದ್ದಾರೆ. ಮಹಾಯುತಿ ಸ್ವೀಪ್‌ಗೆ ಸಜ್ಜಾಗುತ್ತಿದ್ದಂತೆ, ಬಿಜೆಪಿಯ ದೊಡ್ಡ ಗೆಲುವಿಗೆ ಕಾರಣವಾಗಿರುವ ದೇವೇಂದ್ರ ಫಡ್ನವಿಸ್‌ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲಿದ್ದಾರೆಯೇ ಅನ್ನೋದು ಜನರ ಮುಂದಿರುವ ಪ್ರಶ್ನೆಯಾಗಿದೆ.

Latest Videos

undefined

ದೇವೇಂದ್ರ ಫಡ್ನವಿಸ್‌ ತಳಮಟ್ಟದಲ್ಲಿ ಕ್ಯಾಂಪೇನ್‌ಗೆ ಇಳಿದು ಹಲವು ವರ್ಷಗಳೇ ಆಗಿತ್ತು. ರೆಬಲ್‌ಗಳನ್ನೆಲ್ಲಾ ಶಾಂತ ಮಾಡಿ ಅವರಿಗೆ ಹಿನ್ನಡೆ ನೀಡಿದ್ದರು. ಸೀಟ್‌ ಶೇರಿಂಗ್‌ನಲ್ಲಿ ಬಿಜೆಪಿಗೆ ಬೆಸ್ಟ್‌ ಡೀಲ್‌ ನೀಡಿದ್ದರು. ದೇವೇಂದ್ರ ಫಡ್ನವಿಸ್‌ ಅವರ ಜಾತಿಯ ಬಗ್ಗೆ ವಿರೋಧ ಪಕ್ಷಗಳು ಕ್ಯಾಂಪೇನ್‌ ಮಾಡಿದ್ದವು. ಎರಡು ತಿಂಗಳ ಕಾಲ ಅವರು ಒಂದು ಕ್ಷಣ ಕೂಡ ವಿಶ್ರಾಂತಿ ಪಡೆಯದೇ ಕ್ಯಾಂಪೇನ್‌ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬೆಸ್ಟ್‌ ಫಲಿತಾಂಶ ಇದಾಗಲಿದೆ ಅನ್ನೋದು ದೇವೇಂದ್ರರಿಗೆ ಮೊದಲೇ ಗೊತ್ತಿತ್ತು ಎಂದು ಅಂಕಿತ್‌ ಜೈನ್‌ ಎನ್ನುವವರು ಬರೆದುಕೊಂಡಿದ್ದಾರೆ.

'ಮುಖ್ಯಮಂತ್ರಿ ರೇಸ್‌ಗೆ ದೇವೇಂದ್ರ ಫಡ್ನವಿಸ್‌ ಅವರೇ ಮುಂದಿದ್ದಾರೆ. ಈ ಸ್ಥಿತಿಗೆ ಇದಕ್ಕಿಂತ ಚಂದನೆಯ ಮಾತು ಹೇಳಲು ಸಾಧ್ಯವಿಲ್ಲ' ಎಂದು ಇಂಡಿಯಾ ಟುಡೇಯ ಕನ್ಸಲ್ಟಿಂಗ್‌ ಎಡಿಟರ್‌ ರಾಜ್‌ದೀಪ್‌ ಸರ್ದೇಸಾಯಿ ಮಹಾರಾಷ್ಟ್ರದ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ್ದಾರೆ. ಏಕನಾಥ್‌ ಶಿಂಧೆ ಶಿವಸೇನೆಯಲ್ಲಿ ಮಹಾರಾಷ್ಟ್ರದ ಮುಂದಿನ ಸಿಎಂ ಶಿಂಧೆ ಆಗುತ್ತಾರೆ ಎನ್ನುವ ಅಭಿಪ್ರಾಯ ಇದ್ದರೂ ಬಳಿಕ ಅದು ತಣ್ಣಗಾಗಿದೆ.

ಮಹಾರಾಷ್ಟ್ರ ಚುನಾವಣೆಯ ನಂತರ ಮಹಾಯುತಿ ಪಕ್ಷಗಳೇ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ನಿರ್ಧಾರ ಮಾಡಲಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು. 'ಈಗ ಏಕನಾಥ್‌ ಶಿಂಧೆ ಮುಖ್ಯಮಂತ್ರಿ. ಚುನಾವಣೆ ಆದ ಬಳಿಕ, ಎಲ್ಲಾ ಮೂವರು ಪಾರ್ಟ್‌ನರ್‌ಗಳು ಒಟ್ಟಾಗಿ ಕುಳಿತು ಸಿಎಂ ಪೋಸ್ಟ್‌ ಬಗ್ಗೆ ನಿರ್ಧಾರ ಮಾಡಲಿದ್ದಾರೆ' ಎಂದು ಹೇಳಿದ್ದರು. ಇನ್ನೊಂದೆಡೆ ಮಹಾಯುತಿಯಲ್ಲಿದ್ದ ಶಿವಸೇನೆ, ಬಿಜೆಪಿಯ ನಾಯಕರು ಸಿಎಂ ಆಗೋದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದೂ ಹೇಳಿತ್ತು.

ಶನಿವಾರದ ಫಲಿತಾಂಶದ ಬೆನ್ನಲ್ಲಿಯೇ ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವಿಸ್‌ ಮತ್ತೊಮ್ಮೆ ಸಿಎಂ ಆಗುವ ಸಾಧ್ಯತೆಯೇ ದಟ್ಟವಾಗಿದೆ. ಬಿಜೆಪಿ ಮಹಾರಾಷ್ಟ್ರದಲ್ಲಿ 149 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರೆ, 124 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇದರರ್ಥ ಶೇ.83ರಷ್ಟು ಸ್ಟ್ರೈಕ್‌ ರೇಟ್‌ ಕಾಪಾಡಿಕೊಂಡಿದೆ.

ವರ್ಕ್‌ಔಟ್‌ ಆದ ಬಾಟೇಂಗೇ ತೋ ಕಾಟೇಂಗೆ:  ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬ್ಯಲದ ಕ್ಷೇತ್ರವಾಗಿದ್ದ ಧುಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರ ಮಾಲೆಗಾಂವ್‌ ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ದ ಹಿಂದೂ ಮತಗಳನ್ನು ದೇವೇಂದ್ರ ಕ್ರೋಢಿಕರಿಸಿದ್ದರು. ಇಲ್ಲಿ ಅವರು ಮಾಡಿದ್ದ 'ಬಾಟಂಗೆ ತೋ ಕಾಟೇಂಗೆ’  (ಹಂಚಿಹೋದರೆ ಕೊಚ್ಚಿ ಹೋಗ್ತೀರಿ) ಸ್ಟೇಟ್‌ಮೆಂಟ್‌ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿತು. ಇದು ಈ ಪ್ರದೇಶಲ್ಲಿ ಹಿಂದು ಮತಗಳ ಕ್ರೋಢಿಕರಣಕ್ಕೆ ಕಾರಣವಾಯಿತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮೊದಲಿಗೆ ಹೇಳಿದ್ದ 'ಬಾಟಂಗೆ ತೋ ಕಾಟೇಂಗೆ ಮಹಾರಾಷ್ಟ್ರ ಚುನಾವಣೆಯ ಚರಿಷ್ಮಾವನ್ನೇ ಬದಲಾಯಿಸಿದೆ.

ಏಕನಾಥ್ ಶಿಂಧೆ ಅವರು ಸ್ವತಃ ಪ್ರಬಲ ಮರಾಠ ನಾಯಕರಾಗಿ ಹೊರಹೊಮ್ಮಿದ್ದಾರೆ ಮತ್ತು ಶಿವಸೇನೆಯ ಅಮೋಘ ಪ್ರದರ್ಶನದ ಮೂಲಕ ಅವರು ಬಾಳ್ ಠಾಕ್ರೆ ಅವರ ಪರಂಪರೆಯ ನಿಜವಾದ ವಾರಸುದಾರ  ಎನ್ನುವುದು ಜನರಿಗೂ ತಿಳಿಸಿದೆ. ಶಿಂಧೆ ಅವರ ಸೇನೆ 81 ಸ್ಥಾನಗಳಲ್ಲಿ ಸ್ಪರ್ಧಿಸಿದೆ ಮತ್ತು 55 ರಲ್ಲಿ ಮುನ್ನಡೆ ಸಾಧಿಸಿದೆ, ಈ ಪಕ್ಷ 81% ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದೆ.

'ಇದು ಮಹಾರಾಷ್ಟ್ರ ಜನರ ನಿರ್ಧಾರವಲ್ಲ, ಅದಾನಿ ನಿರ್ಧಾರ..' ಟ್ರೆಂಡ್‌ ನೋಡಿ ಕೆಂಡವಾದ ಸಂಜಯ್‌ ರಾವುತ್‌!

ಶಿಂಧೆಯವರ ಲಡ್ಕಿ ಬಹಿನ್ ಯೋಜನೆಯು ಗೇಮ್ ಚೇಂಜರ್. ಮಹಿಳಾ ಮತದಾರರನ್ನು ಗೆಲ್ಲಲು ಸಹಾಯ ಮಾಡಿದೆ. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಭರವಸೆಯಲ್ಲಿ ರಾಜ್ಯವನ್ನು ಮುಳುಗಿಸಲಿದೆ ಎಂದು ಅವರು ಹೇಳಿದ್ದು ಪ್ರಭಾವ ಬೀರಿದೆ. ಮಹಾವಿಕಾಸ್‌ ಅಘಾಡಿ ಸರ್ಕಾರವನ್ನು ಉರುಳಿಸಿ ಉದ್ಧವ್‌ ಠಾಕ್ರೆಯನ್ನು ಸಿಎಂ ಸ್ಥಾನದಿಂದ ಇಳಿಸಿದ್ದೇ ದೇವೇಂದ್ರ ಫಡ್ನವಿಸ್‌. ಆ ಹಂತದಲ್ಲಿ ತಮ್ಮ ಎದುರಿಗೆ ಇದ್ದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅವರು ಏಕ್‌ನಾಥ್‌ ಶಿಂಧೆಗೆ ಬಿಟ್ಟುಕೊಟ್ಟಿದ್ದರು.

ಮಹಾರಾಷ್ಟ್ರದಲ್ಲಿ ಎನ್‌ಡಿಎ ಡಬಲ್‌ ಸೆಂಚುರಿ, ಜಾರ್ಖಂಡ್‌ನಲ್ಲಿ ಬಹುಮತದತ್ತ ಐಎನ್‌ಡಿಐಎ!

2014 ರಿಂದ 2019ರವರೆಗೆ ಫಡ್ನವಿಸ್‌ ಮಹಾರಾಷ್ಟ್ರದ ಸಿಎಂ ಆಗಿದ್ದರು. ಆದರೆ, ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಏಕ್‌ನಾಥ್‌ ಶಿಂಧೆಗೆ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಕೊನೆಗೆ ತಮ್ಮ ಒಕ್ಕೂಟ ಸೇರಿದ ಅಜಿತ್‌ ಪವಾರ್ ಅವರೊಂದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಂಡಿದ್ದರು. ಆದರೆ ಶನಿವಾರದ ಚುನಾವಣಾ ಫಲಿತಾಂಶದಿಂದ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಬಲಗೊಳ್ಳುತ್ತಿದೆ.

click me!