ಶೀಘ್ರದಲ್ಲೇ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ WHO ಅಸ್ತು?

By Suvarna NewsFirst Published Jul 10, 2021, 7:42 PM IST
Highlights
  • ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ
  • 4-6 ವಾರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಪ್ರಕಟಿಸುವ ಸಾಧ್ಯತೆ
  • ಈವರೆಗೆ  6 ಲಸಿಕೆಗಳ ತುರ್ತು ಬಳಕೆಗೆ ಮಾತ್ರ WHO ಅನುಮತಿ 

ನವದೆಹಲಿ (ಜು.10): ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಶೀಘ್ರದಲ್ಲೇ  ಅನುಮತಿ ನೀಡುವ ಸಾಧ್ಯತೆಗಳಿವೆ.

ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆ (Emergency Use Listing -EUL) ಬಗ್ಗೆ WHO ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಹಾಗೂ 4-6 ವಾರಗಳಲ್ಲಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. 

ಇದನ್ನೂ ಓದಿ: ಡೆಲ್ಟಾವೈರಸ್‌ ವಿರುದ್ಧ ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ? ಅಂತಿಮ ವರದಿ ಬಹಿರಂಗ!...

ಸೆಂಟರ್‌ ಫಾರ್ ಸೈನ್ಸ್‌ & ಎನ್ವೈರಾನ್‌ಮೆಂಟ್‌ (CSE) ಆಯೋಜಿಸಿದ್ದ ವೆಬಿನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ ಸೌಮ್ಯ ಸ್ವಾಮಿನಾಥನ್‌  ಕೋವ್ಯಾಕ್ಸಿನ್‌ ತುರ್ತು ಬಳಕೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ಯಾವುದೇ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಸಿಗಬೇಕಾದರೆ ಅದು ನಿರ್ದಿಷ್ಟ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.  ಲಸಿಕೆಯು ಮೂರನೇ ಹಂತದ ಟ್ರಯಲ್‌ಗೊಳಪಡಬೇಕು. ಬಳಿಕ ಅದರ ಸಂಪೂರ್ಣ ಫಲಿತಾಂಶಗಳನ್ನು WHO ತಜ್ಞರ ಸಮಿತಿಯು ಪರಿಶೀಲಿಸುತ್ತದೆ. 

ಮಾಹಿತಿ, ಸುರಕ್ಷತೆ, ಪರಿಣಾಮ ಹಾಗೂ ಉತ್ಪಾದನ  ಗುಣಮಟ್ಟ ಮುಂತಾದ ಮಾನದಂಡಗಳನ್ನು ಮುಂದಿಟ್ಟುಕೊಂಡು ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಕೈಗೊಳ್ಳುತ್ತದೆ.

ಭಾರತ್‌ ಬಯೋಟೆಕ್ ಕಂಪನಿಯು ಈಗಾಗಲೇ ಸಮಗ್ರ ಮಾಹಿತಿಯನ್ನು ಸಲ್ಲಿಸಿದ್ದು, ಮುಂದಿನ 4-6 ವಾರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರ ಕೈಗೊಳ್ಳಲಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆಗೆ ಅನುಮತಿ; 9 ಯುರೋಪಿಯನ್ ರಾಷ್ಟ್ರಗಳ ರಾಷ್ಟ್ರೀಯ ಪ್ರಯಾಣ ಪಟ್ಟಿಗೆ ಸೇರ್ಪಡೆ!...

ಈವರೆಗೆ  6 ಲಸಿಕೆಗಳ  (ಫೈಝರ್/ಬಯಾಂಟೆಕ್, ಆಸ್ಟ್ರಾಝೆನಿಕಾ-ಎಸ್‌ಕೆ ಬಯೋ/ ಸೀರಂ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ, ಆಸ್ಟ್ರಾಝೆನಿಕಾ ಇ.ಯು, ಜಾನ್ಸೆನ್‌, ಮಾಡರ್ನಾ ಹಾಗೂ ಸಿನೋಫಾರ್ಮ್‌) ತುರ್ತು ಬಳಕೆಗೆ WHO ಅನುಮತಿಸಿದೆ. 

ಕೋವ್ಯಾಕ್ಸಿನ್‌ ಲಸಿಕೆಗೆ ಅನುಮೋದನೆ ಸಿಕ್ಕಿದರೆ, ವಿದೇಶಗಳಿಗೂ ಪೂರೈಕೆ ಮಾಡಬಹುದಾಗಿದೆ.

click me!