ಮಸೂದೆ ಏಕೆ ಪಾಸು ಮಾಡಲು ಬಿಡ್ತಿಲ್ಲ ಎಂದು ಕೇಳಿದ್ದ ಮೋದಿ!

By Kannadaprabha NewsFirst Published Feb 1, 2021, 7:47 AM IST
Highlights

ಮಸೂದೆ ಏಕೆ ಪಾಸು ಮಾಡಲು ಬಿಡ್ತಿಲ್ಲ ಎಂದು ಕೇಳಿದ್ದ ಮೋದಿ| ಪುಸ್ತಕದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಉಲ್ಲೇಖ

ನವದೆಹಲಿ(ಫೆ.01): ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ, ತಮ್ಮ ಇತ್ತೀಚಿನ ಹೊಸ ಪುಸ್ತಕದಲ್ಲಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಕೆಲವು ಟೀಕೆ-ಟಿಪ್ಪಣಿಗಳನ್ನು ಮಾಡಿದ್ದಾರೆ.

‘ಬೈ ಮೆನಿ ಎ ಹ್ಯಾಪಿ ಆ್ಯಕ್ಸಿಡೆಂಟ್‌’ ಎಂಬ ಪುಸ್ತಕವನ್ನು ಅನ್ಸಾರಿ ಬರೆದಿದ್ದು, ತಾವು ರಾಜತಾಂತ್ರಿಕ ಆಗಿದ್ದಾಗಿನಿಂದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ಆಗಿರುವರೆಗಿನ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಇಂಥದ್ದೇ ಒಂದು ಪ್ರಸಂಗದಲ್ಲಿ ಮೋದಿ ಬಗ್ಗೆ ಆಕ್ಷೇಪ ಎತ್ತಿದ್ದಾರೆ.

‘ರಾಜ್ಯಸಭೆಯಲ್ಲಿ ಗದ್ದಲದ ನಡುವೆ ಯಾವುದೇ ಮಸೂದೆ ಪಾಸು ಮಾಡಬಾರದು ಎಂಬುದು ನನ್ನ ನಿಲುವಾಗಿತ್ತು. ಯುಪಿಎ ಸರ್ಕಾರ ಇದ್ದಾಗ ನಾನು ಹೊಂದಿದ್ದ ಈ ನಿಲುವಿಗೆ ಪ್ರತಿಪಕ್ಷ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಬಂದಾಗ ನನ್ನ ಈ ನಿಲುವಿಗೆ ಅದು ಆಕ್ಷೇಪ ಎತ್ತಿತು. ರಾಜ್ಯಸಭೆಯಲ್ಲಿ ತನಗೆ ಬಹುಮತ ಇರದೇ ಇದ್ದರೂ ಮಸೂದೆ ಪಾಸು ಮಾಡಿಸಬೇಕು ಎಂಬ ಬೇಡಿಕೆ ಇಟ್ಟಿತ್ತು. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ಒಮ್ಮೆ ನನ್ನ ಕಚೇರಿಗೆ ಬಂದು, ‘ರಾಜ್ಯಸಭೆಯಲ್ಲಿ ಮಸೂದೆ ಏಕೆ ಪಾಸು ಮಾಡಲು ಬಿಡುತ್ತಿಲ್ಲ?’ ಎಂದು ಕೇಳಿದರು. ಆಗ ನಿಯಮಾನುಸಾರ ನಾನು ನಡೆದುಕೊಂಡಿದ್ದೇನೆ. ವಿಪಕ್ಷದಲ್ಲಿದ್ದಾಗ ನೀವೇ ನನ್ನ ಈ ನಿಲುವನ್ನು ಮೆಚ್ಚಿದ್ದಿರಿ ಎಂದು ಉತ್ತರಿಸಿದೆ’ ಎಂದು ಅನ್ಸಾರಿ ಹೇಳಿದ್ದಾರೆ.

click me!