
ನವದೆಹಲಿ: ಬೇಹುಗಾರಿಕೆಯ ಆರೋಪದಡಿ ಗಲ್ಲು ಶಿಕ್ಷೆಗೆ ಗುರಿಯಾಗಿ ಕಳೆದೊಂದು ವರ್ಷದಿಂದ ಕತಾರ್ ಜೈಲಿನಲ್ಲಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಕತಾರ್ ಸರ್ಕಾರ ಬಿಡುಗಡೆಗೊಳಿಸಿದ್ದು, 7 ಜನ ಈಗಾಗಲೇ ಭಾರತಕ್ಕೆ ಬಂದು ತಲುಪಿದ್ದಾರೆ. ಸಾವಿನ ದವಡೆಯಿಂದ ಪಾರಾಗಿ ಬಂದ ಈ ಅಧಿಕಾರಿಗಳ ಮೊದಲ ರಿಯಾಕ್ಷನ್ ಹೇಗಿತ್ತು? ಯಾರು ಏನು ಹೇಳಿದರು ಇಲ್ಲಿದೆ ನೋಡಿ ಡಿಟೇಲ್ಡ್ ಸ್ಟೋರಿ..
ಕತಾರ್‌ನಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಬಂದಿಳಿದ ಈ ನೇವಿ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಖುಷಿಯಿಂದ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದಾರೆ. ಜೊತೆಗೆ ತಮ್ಮನ್ನು ಬಿಡುಗಡೆಗೊಳಿಸುವುದಕ್ಕೆ ರಾಜತಾಂತ್ರಿಕವಾಗಿ ಹಾಗೂ ವೈಯಕ್ತಿಕವಾಗಿಯೂ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಲೇ ದೆಹಲಿ ವಿಮಾನ ನಿಲ್ದಾಣದಿಂದ ಹೊರ ನಡೆದಿದ್ದಾರೆ.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಓರ್ವ ಅಧಿಕಾರಿ, ನಾವು ಮರಳಿ ಭಾರತಕ್ಕೆ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾವು ಇದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಬೇಕು. ಅವರಿಗೆ ನಾವು ಕೃತಜ್ಞತೆ ಸಲ್ಲಿಸಲೇಬೇಕು. ಅವರ ವೈಯಕ್ತಿಕ ಮಧ್ಯಪ್ರವೇಶದಿಂದಲೇ ಇದು ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಲ್ಲದೇ ಇದ್ದರೆ ಇಂದು ನಾವು ಇಲ್ಲಿ ನಿಂತು ಮಾತನಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ, ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ ಇದು ಸಾಧ್ಯವಾಯ್ತು ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ರಾಜತಾಂತ್ರಿಕ ಗೆಲುವು, ನೌಕಾಸೇನೆ ಮಾಜಿ ಅಧಿಕಾರಿಗಳ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್!
ಮತ್ತೊಬ್ಬರು ಹಿರಿಯ ಅಧಿಕಾರಿ ಮಾತನಾಡಿ, ನಾವು ಭಾರತಕ್ಕೆ ಮರಳಲು 18 ತಿಂಗಳು ಕಾಯಬೇಕಾಯ್ತು, ನಾವು ಪ್ರಧಾನಿ ಮೋದಿಯವರಿಗೆ ಈ ವಿಚಾರದಲ್ಲಿ ನಾವು ಹೃದಯದಾಳದಿಂದ ಅಭಾರಿಯಾಗಿದ್ದೇವೆ. ಕತಾರ್ ದೇಶದೊಂದಿಗೆ ಅವರ ಒಳ್ಳೆಯ ಒಡನಾಟ ಹಾಗೂ ಅವರ ವೈಯಕ್ತಿಕ ಮಧ್ಯಪ್ರವೇಶವಿಲ್ಲದಿದ್ದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ, ಹೀಗಾಗಿ ಭಾರತ ಸರ್ಕಾರಕ್ಕೆ ಹಾಗೂ ಅವರು ಈ ವಿಚಾರದಲ್ಲಿ ಪಟ್ಟ ಶ್ರಮಕ್ಕೆ ನಮ್ಮ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ಪರಿಶ್ರಮವಿಲ್ಲದೇ ಇದು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.
ಬೇಹುಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಈ ಮಾಜಿ ನೇವಿ ಅಧಿಕಾರಿಗಳ ಬಿಡುಗಡೆ ವಿಚಾರವನ್ನು ಇಂದು ಮುಂಜಾನೆಯಷ್ಟೇ ಭಾರತ ಸರ್ಕಾರ ಘೋಷಣೆ ಮಾಡಿತ್ತು, ಕತಾರ್ ಅಧ್ಯಕ್ಷರಿಗೆ ಈ 8 ಜನರ ಬಿಡುಗಡೆಗಾಗಿ ಧನ್ಯವಾದ ಸಲ್ಲಿಸುವ ಮೂಲಕ ಭಾರತ ಸರ್ಕಾರ ಈ ವಿಚಾರವನ್ನು ಘೋಷಣೆ ಮಾಡಿತ್ತು. ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಬರಲು ಅನುವು ಮಾಡಿಕೊಡುವ ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ