
ನವದೆಹಲಿ(ಜೂ.01): 2019ರ ಪುಲ್ವಾಮಾ ದಾಳಿಯ ಬಳಿಕ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಚರಣೆಯ ವೇಳೆ ತನ್ನ ಪತಿಯನ್ನು ಕಳೆದುಕೊಂಡಿದ್ದ 29 ವರ್ಷದ ನಿಕಿತಾ ಕೌಲ್ ಶನಿವಾರ ಸೇನೆಗೆ ಸೇರ್ಪಡೆ ಆಗಿದ್ದಾರೆ. ನಿಕಿತಾರವರು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ತೇರ್ಗಡೆಯಾದ ಬೆನ್ನಲ್ಲೇ ಉಧಂಪುರ ರಕ್ಷಣಾ ಇಲಾಖೆ ಪಿಆರ್‌ಒ ಅಧಿಕೃತ ಟ್ವಿಟ್ಟರ್ ನಲ್ಲಿ ಅವರ ವಿಡಿಯೋ ಶೇರ್ ಮಾಡಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ದೌಂಡಿಯಾಲ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು. ಈಗ ಅವರ ಪತ್ನಿ ನಿಕಿತಾ ಕೌಲ್ ಸೇನಾ ಸಮವಸ್ತ್ರ ಧರಿಸಿದ್ದಾರೆ, ತನ್ನ ಗಂಡನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ ಎಂದು ಟ್ವೀಟ್ ಮಾಡಿದ್ದರು.
ಪುಲ್ವಾಮಾ ಹುತಾತ್ಮ ಮೇ| ದೌಂಡಿಯಾಲ್ ಪತ್ನಿ ನಿಖಿತಾ ಭಾರತೀಯ ಸೇನೆಗೆ ಸೇರ್ಪಡೆ!
ಇನ್ನು ಸೇನೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಲೆಫ್ಟಿನೆಂಟ್ ನಿಕಿತಾ ಕೌಲ್ ಭಾಷಣವೊಂದನ್ನು ಮಾಡಿದ್ದು, ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. 'ಇದೊಂದು ಅದ್ಭುತ ಪ್‌ರಯಾಣ ಹಾಗೂ ಈ ಪ್ರಯಾಣ ಈಗಷ್ಟೇ ಆರಂಭಗೊಂಡಿದೆ. ಕಳೆದ ಹನ್ನೊಂದು ತಿಂಗಳು ಜೀವನದಲ್ಲಿ ನಾನು ಹಲವಾರು ವಿಚಾರಗಳನ್ನು ಕಲಿಯುವಂತೆ ಮಾಡಿದೆ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು. ಇದೇ ವೇಳೆ ನಿಮ್ಮ ಮೇಲೆ ನೀವು ನಂಬಿಕೆ ಇರಿಸಿ ಎಂದು ಕೇಳಿಕೊಳ್ಳುತ್ತೇನೆ. ಹೀಗಿರುವಾಗ ನೀವು ಸಾಧಿಸಬೇಕಾದ ಗುರಿಯಿಂದ ನಿಮ್ಮನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಮೇಲೆ ನೀವು ವಿಶ್ವಾಸವಿಡಿ. ಜೈ ಹಿಂದ್' ಎಂದು ನಿಕಿತಾರವರು ಹೇಳಿದ್ದಾರೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು ಅನೇಕ ಗಣ್ಯರು ಇವರ ಧೈರ್ಯ ಹಾಗೂ ಸಾಹಸವನ್ನು ಹಾಡಿ ಹೊಗಳಿದ್ದಾರೆ. ಇನ್ನು ಇವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಹಾಘೂ ಬಿಜೆಪಿ ಸಂಸದ ಗೌತಮ್ ಗಂಭೀರ್ 'ನಟರು ಅಥವಾ ಕ್ರಿಕೆಟಗರಲ್ಲ, ಈ ಮಹಿಳೆಯೇ ನಿಜವಾದ ಹೀರೋ. ಇದೇ ಕಾರಣದಿಂದ ಭಾರತವನ್ನು ತಾಯ್ನಾಡು ಎನ್ನಲಾಗುತ್ತದೆ, ಫಾದರ್‌ಲ್ಯಾಂಡ್(ತಂದೆನಾಡು) ಅಲ್ಲ. ಜೈ ಹಿಂದ್ ಎಂದು ಬರೆದಿದ್ದಾರೆ.
ಪತಿಯಂತೆ ದೇಶಸೇವೆ ಮಾಡುವ ಛಲ
ಪತಿಯ ರೀತಿಯೇ ದೇಶಸೇವೆ ಮಾಡಬೇಕೆಂಬ ಛಲ ನಿಕಿತಾಗೆ ಇತ್ತು. ಹೀಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಶನ್ (ಎಸ್‌ಎಸ್‌ಸಿ) ಪರೀಕ್ಷೆ ಪಾಸಾಗಿ ತಮಿಳುನಾಡಿನಲ್ಲಿ ಒಂದು ವರ್ಷಗಳ ಸೇನಾ ತರಬೇತಿಯನ್ನು ಪೂರ್ಣಗೊಳಿಸಿರುವ ನಿಕಿತಾ ಕೌಲ್, ಚೆನ್ನೈ ಅಧಿಕಾರಿಗಳ ತರಬೇತಿ ಅಕಾಡೆಮಿ (ಒಟಿಎ)ಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದ ವೇಳೆ ಲೆಫ್ಟಿನೆಂಟ್ ಅಧಿಕಾರಿಯಾಗಿ ಸೇನೆಗೆ ಸೇರ್ಪಡೆ ಆದರು. ಈ ವೇಳೆ ಲೆ| ಜ| ವೈ.ಕೆ. ಜೋಶಿ ಸೇನಾ ಸಮವಸ್ತ್ರದ ಭುಜದ ಪಟ್ಟಿಗೆ ಮೂರು ಸ್ಟಾರ್ಗಳನ್ನು ಜೋಡಿಸುವ ಮೂಲಕ ಶುಭಹಾರೈಸಿದರು.
ಮೂಲತಃ ಕಾಶ್ಮೀರದವರಾದ ಕೌಲ್, ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರನ್ನು ವಿವಾಹ ಆದ 9 ತಿಂಗಳ ಅಂತರದಲ್ಲೇ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. 2019 ಫೆ.18ರಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿಗೆ ಕಾರಣರಾದ ಜೈಷ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರ ವಿರುದ್ಧ ನಡೆಸಲಾದ ಎನ್ಕೌಂಟರ್ ವೇಳೆ ಮೇಜರ್ ಧೌಂಡಿಯಾಲ್ ಸೇರಿ ಐವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಧೌಂಡಿಯಾಲ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ