
ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಹುತೇಕ ಖಚಿತವಾಗಿದೆ. ಕೇಸರಿ ಪಕ್ಷವು 45 ಸ್ಥಾನಗಳಲ್ಲಿ ಮುಂದಿದ್ದರೆ, ಆಮ್ ಆದ್ಮಿ ಪಕ್ಷ (ಎಎಪಿ) 25 ಸ್ಥಾನ ಗೆಲ್ಲುವುದು ಕಷ್ಟ ಎಂಬ ಹಂತದಲ್ಲಿದೆ. ಅಂತಿಮ ಘೋಷಣೆ ಇನ್ನೂ ಬಾಕಿ ಇದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದೆ. ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷದ ಆಡಳಿತ ಅಂತ್ಯಗೊಂಡಿದೆ. ಎಕ್ಸಿಟ್ ಪೋಲ್ ಗಳ ಭವಿಷ್ಯ ನಿಜವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕೇಜ್ರಿವಾಲ್ ಸಹ ಸೋಲನ್ನು ಅನುಭವಿಸಿದ್ದಾರೆ. ಹಾಗಾದರೆ ಆಪ್ ಸೋಲಿಗೆ ಕಾರಣಗಳೇನು? ದೆಹಲಿ ಜನರು ಏಕೆ ಆಪ್ ವಿರುದ್ಧ ಮತ ಚಲಾಯಿಸಿದರು?
2015 ರಿಂದ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಮೇಲೆ ಗಮನ ಹರಿಸಿದೆ, ಆದರೆ ಅದು ವಿದ್ಯುತ್ ಮತ್ತು ನೀರಿನ ಮೇಲೆ ಸಬ್ಸಿಡಿ ನೀಡುವುದನ್ನು ಮುಂದುವರೆಸಿದೆ. ಬಿಜೆಪಿ ಶೇಕಡಾ 30 ಕ್ಕಿಂತ ಹೆಚ್ಚಿನ ಮತ ಪಾಲನ್ನು ಕಾಯ್ದುಕೊಂಡಿದೆ, 2020ರ ಚುನಾವಣೆಯಲ್ಲಿ ಬಿಜೆಪಿ ಕೇವಲ 8 ಸ್ಥಾನಗಳನ್ನು ಮತ್ತು 2015 ರಲ್ಲಿ 3 ಸ್ಥಾನಗಳನ್ನು ಗೆದ್ದಿತ್ತು.
Delhi Elections 2025: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಹೀನಾಯ ಸೋಲು
2015ರಲ್ಲಿ 67 ಸ್ಥಾನವನ್ನು ಎಎಪಿ ಗೆದ್ದುಕೊಂಡಿತ್ತು. 2020ರಲ್ಲಿ 62 ಸ್ಥಾನಗಳನ್ನು ಪಡೆದುಕೊಂಡಿತ್ತು. ಈಗ 2025ರ ಎಲೆಕ್ಷನ್ ನಲ್ಲಿ ಮ್ಯಾಜಿಕ್ ನಂಬರ್ ಸಂಖ್ಯೆ 36ನ್ನೂ ದಾಟಿಲ್ಲ. ಮಾತ್ರವಲ್ಲ ಈ ಹಿಂದಿನ ಚುನಾವಣೆಗಳ ಅರ್ಧದಷ್ಟೂ ಕೂಡ ಸೀಟು ಗೆದ್ದಿಲ್ಲ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿನ ಹಿಂದಿರುವ ಕೆಲವು ಪ್ರಮುಖ ಕಾರಣಗಳನ್ನು ಅಂದಾಜು ಹಾಕಲಾಗಿದೆ.
ಭ್ರಷ್ಟಾಚಾರ ಆರೋಪಗಳು:
ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದೇ ಗುರಿ ಎಂದು ರಾಜಕೀಯಕ್ಕೆ ಕಾಲಿಟ್ಟ ಕೇಜ್ರಿವಾಲ್ ಅವರೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವುದು ಈ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ. ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಿರುವುದು, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಜೈಲಿಗೆ ಹೋಗಿರುವುದು ಪಕ್ಷದ ಘನತೆಗೆ ಧಕ್ಕೆ ತಂದಿದೆ.
ಕೇಜ್ರಿವಾಲ್ ಬಂಧನ:
ಕೇಜ್ರಿವಾಲ್ ಬಂಧನ ಆ ಪಕ್ಷಕ್ಕೆ ದೊಡ್ಡ ಹೊಡೆತ ಎನ್ನಬಹುದು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ವ್ಯಕ್ತಿ ಮದ್ಯ ಹಗರಣದಲ್ಲಿ ಜೈಲಿಗೆ ಹೋಗುವುದು, ನಂತರ ಅವರು ರಾಜೀನಾಮೆ ನೀಡುವುದು ನಾಯಕತ್ವದ ಅಸ್ಥಿರತೆಗೆ ಕಾರಣವಾಯಿತು. ಹೊಸ ಮುಖ್ಯಮಂತ್ರಿಯಾಗಿ ಆತಿಶಿಯನ್ನು ನೇಮಿಸುವುದು, ತಕ್ಷಣವೇ ಚುನಾವಣೆಗಳು ಬರುವುದು ಇವೆಲ್ಲವೂ ಆಪ್ ಮೇಲೆ ಪರಿಣಾಮ ಬೀರಿದವು. ಕೇಜ್ರಿವಾಲ್ ವಿಶ್ವಾಸಾರ್ಹತೆಯ ಮೇಲೆ ಜನರ ನಂಬಿಕೆ ಕಡಿಮೆಯಾಗಿದೆ.
ದೆಹಲಿ ಚುನಾವಣಾ ಫಲಿತಾಂಶದ ನಡುವೆ ಇದನ್ನು ತಿಳಿಯಲೇಬೇಕು,1500 ವರ್ಷಗಳ ಕಾಲ ಇತಿಹಾಸವೇ ಕಾಣೆ!
ಕಾಂಗ್ರೆಸ್ ಕೂಡ ಕಾರಣ:
ಒಂದು ರೀತಿಯಲ್ಲಿ ದೆಹಲಿಯಲ್ಲಿ ಆಪ್ ಸೋಲಿಗೆ ಕಾಂಗ್ರೆಸ್ ಕೂಡ ಕಾರಣ ಎನ್ನಬಹುದು. ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸುವುದು, ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದು ಮೈನಸ್ ಆಗಿದೆ. ಕಾಂಗ್ರೆಸ್ ಮತಗಳನ್ನು ಒಡೆಯುವುದರಿಂದ ಆಪ್ ಪಕ್ಷಕ್ಕೆ ಹೊಡೆತ ಬಿದ್ದಿದೆ.
ಆಂತರಿಕ ಕಲಹಗಳು:
ಒಂದೆಡೆ ಭ್ರಷ್ಟಾಚಾರ ಆರೋಪಗಳು, ಮತ್ತೊಂದೆಡೆ ಪಕ್ಷದಲ್ಲಿನ ಆಂತರಿಕ ಕಲಹಗಳು ಕೂಡ ಆಪ್ ಸೋಲಿಗೆ ಕಾರಣ ಎನ್ನಬಹುದು. ಕೈಲಾಶ್ ಗೆಹ್ಲೋಟ್, ರಾಜ್ ಕುಮಾರ್ ಆನಂದ್ ಮುಂತಾದ ಪ್ರಮುಖ ನಾಯಕರ ರಾಜೀನಾಮೆಗಳು ಪಕ್ಷಕ್ಕೆ ಹೊಡೆತ ನೀಡಿವೆ.
ಬೇಡಿಕೆ ಈಡೇರಿಸದಿರುವುದು:
ಆಮ್ ಆದ್ಮಿ ಪಕ್ಷ ನೀಡಿದ ಕೆಲವು ಭರವಸೆಗಳನ್ನು ಈಡೇರಿಸಲಿಲ್ಲ ಎಂಬ ವಾದಗಳಿವೆ. ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ನೀರು ಪೂರೈಸುವುದು ಮುಂತಾದ ಭರವಸೆಗಳನ್ನು ಈಡೇರಿಸದಿರುವುದು ಕೂಡ ಆ ಪಕ್ಷದ ಸೋಲಿಗೆ ಕಾರಣ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಯುವಜನತೆ ದೂರವಾಗುವುದು:
ಆಮ್ ಆದ್ಮಿ ಪಕ್ಷದ ಮೇಲೆ ಬಂದ ಭ್ರಷ್ಟಾಚಾರ ಆರೋಪಗಳನ್ನು ವಿರೋಧ ಪಕ್ಷಗಳು ಚೆನ್ನಾಗಿ ಬಳಸಿಕೊಂಡಿವೆ. ಮದ್ಯ ಹಗರಣ ಆ ಪಕ್ಷದ ಘನತೆಗೆ ಧಕ್ಕೆ ತಂದಿದೆ. ಯುವಕರು, ಮಹಿಳೆಯರು, ಹೊಸ ಮತದಾರರು ಆಮ್ ಆದ್ಮಿಯಿಂದ ದೂರವಾಗಿರುವಂತೆ ಕಾಣುತ್ತಿದೆ.
12 ವರ್ಷಗಳ ಆಡಳಿತ:
ಸ್ವಾಭಾವಿಕವಾಗಿಯೇ ಒಂದು ಪಕ್ಷ 12 ವರ್ಷಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ವಿರೋಧ ವ್ಯಕ್ತವಾಗುತ್ತದೆ, ಜನರು ಹೊಸತನವನ್ನು ಬಯಸುತ್ತಾರೆ. ಅದರಲ್ಲೂ ಆಪ್ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಿರುವುದು, ದೇಶಾದ್ಯಂತ ಮೋದಿ ಅಂಶ ಬಲವಾಗಿರುವುದು ಕೂಡ ದೆಹಲಿಯಲ್ಲಿ ಆಪ್ ಸೋಲಿಗೆ ಕಾರಣ ಎನ್ನಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ