
ಕೋಲ್ಕತಾ: 2022-23ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಬಳಿ ಇದ್ದ ಠೇವಣಿ ಕೇವಲ 75 ರುಪಾಯಿ. ಬಳಿಕ ಎನ್‌ಸಿಪಿಐಗೆ 1,13,075 ರು. ದೇಣಿಗೆ ಬಂದಿತ್ತು. ಆದರೆ ಇದೀಗ 20 ಟಿಎಂಸಿ ಸಂಸದರ ಸೇರ್ಪಡೆಯೊಂದಿಗೆ ಬಂಗಾಳದ ದೊಡ್ಡ ಹಾಗೂ ಸಂಸತ್ತಿನ 5ನೇ ಅತಿದೊಡ್ಡ ಸಂಸದೀಯ ಪಕ್ಷವಾಗಿ ಹೊರಹೊಮ್ಮಿದೆ.
ಎನ್‌ಸಿಪಿಐ ಜನವರಿ 2023 ರಲ್ಲಿ ತನ್ನನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿಕೊಂಡಿದ್ದು, ಚುನಾವಣಾ ಆಯೋಗದ ದಾಖಲೆಗಳಲ್ಲಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ವಿಳಾಸ ಹೊಂದಿದೆ. ಆದರೂ ಬಂಗಾಳ ವಿಧಾನಸಭೆ ಬದಲು ಈ ಪಕ್ಷ 2023ರಲ್ಲಿ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷ 4 ಸ್ಥಾನದಲ್ಲಿ ಸ್ಪರ್ಧಿಸಿ ಕೇವಲ 822 ಮತ ಪಡೆದಿತ್ತು. ಅಂಥ ಪಕ್ಷಕ್ಕೀಗ ಅದೃಷ್ಟ ಒಲಿದುಬಂದಿದೆ.
ಟಿಎಂಸಿ ಸಂಸದರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಎನ್‌ಸಿಪಿಐ ಅಧ್ಯಕ್ಷ ಉತಿಯಾ ಕುಂದು ಹಾಗೂ ಪ್ರಧಾನ ಕಾರ್ಯದರ್ಶಿ ಶಂತನು ಡೇ ನಡುವೆ ಭಿನ್ನಮತ ಏರ್ಪಟ್ಟ ಪ್ರಸಂಗ ನಡೆದಿದೆ. ಆದರೆ ಕೊನೆಗೆ ಭಿನ್ನಮತ ಶಮನವಾಗಿದೆ.
ಭಾನುವಾರ ಮಾತನಾಡಿದ್ದ ಡೇ, ’ನಾವು ಟಿಎಂಸಿ ವಿರೋಧಿಗಳು. ಆದರೂ ಅವರನ್ನು ಕುಂದು ಸೇರಿಸಿಕೊಂಡಿದ್ದಾರೆ. ಇದಕ್ಕಾಗಿ ಹಣ ಪಡೆದಿದ್ದಾರೆ’ ಎಂದಿದ್ದರು. ಆದರೆ ಸೋಮವಾರ ಉಲ್ಟಾ ಹೊಡೆದು, ‘ಟಿಎಂಸಿ ಸಂಸದರ ಸೇರ್ಪಡೆ ನಮ್ಮೆಲ್ಲರ ಸರ್ವಸಮ್ಮತ ನಿರ್ಧಾರ’ ಎಂದಿದ್ದಾರೆ.
ಈ ನಡುವೆ ಎನ್‌ಸಿಪಿಐ ಸೇರಿದ್ದರೂ ಟಿಎಂಸಿ ಚಿಹ್ನೆಗೆ ಭವಿಷ್ಯದಲ್ಲಿ ನಾವು ಹೋರಾಡುತ್ತೇವೆ ಎಂದು ನಿರ್ಗಮಿತ ಟಿಎಂಸಿ ಸಂಸದ ಆರೂಪ್ ಚಕ್ರವರ್ತಿ ಹೇಳಿದ್ದಾರೆ.
ಟಿಎಂಸಿ ಬಂಡಾಯ ಬಣಕ್ಕೆ ಮಾನ್ಯತೆ: ಕಾನೂನು ಸಲಹೆಗೆ ಬಿರ್ಲಾ ಚಿಂತನೆ
ನವದೆಹಲಿ: ಟಿಎಂಸಿಯಿಂದ ಬಂಡಾಯವೆದ್ದು, ಎನ್‌ಸಿಪಿಐ ಪಕ್ಷದೊಡನೆ ವಿಲೀನರಾಗಲು ಮುಂದಾಗಿರುವ ಬಂಡಾಯ ಗುಂಪಿನ ಬೇಡಿಕೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾನೂನು ಅಭಿಪ್ರಾಯ ಪಡೆಯುವ ಸಾಧ್ಯತೆಯಿದೆ ಎಂದು ಸಂಸದೀಯ ಮೂಲಗಳು ಸೋಮವಾರ ತಿಳಿಸಿವೆ.
ಟಿಎಂಸಿಯಿಂದ ಬಂಡಾಯವೆದ್ದಿರುವ 20 ಸಂಸದರು ಎನ್‌ಸಿಪಿಐ ಜೊತೆ ವಿಲೀನವಾಗಿ ಎನ್‌ಡಿಎಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಮಾನ್ಯತೆ ಕೋರಿ ಸ್ಪೀಕರ್ ಬಿರ್ಲಾಗೆ ಪತ್ರ ಬರೆದಿದ್ದಾರೆ. ಸಂವಿಧಾನದ 10ನೇ ಅನುಸೂಚಿಯ ಪ್ರಕಾರ ಒಂದು ಪಕ್ಷವನ್ನು ಮತ್ತೊಂದು ಪಕ್ಷದಲ್ಲಿ ವಿಲೀನಗೊಳಿಸಬಹುದು. ಆದರೆ ಸಂಸದರು ಅಥವಾ ಶಾಸಕರು ಮಾತ್ರ ತಮ್ಮಷ್ಟಕ್ಕೆ ತಾವು ಮತ್ತೊಂದು ಪಕ್ಷಕ್ಕೆ ವಿಲೀನವಾಗುವಂತಿಲ್ಲ ಎಂದು ಸಂವಿಧಾನ ತಜ್ಞರು ಸ್ಪಷ್ಟಪಡಿಸಿದ್ದಾರೆ.
ಈ ಕಗ್ಗಂಟನ್ನು ಬಿಡಿಸಲು ಬಿರ್ಲಾ ಕೇಂದ್ರ ಕಾನೂನು ಸಚಿವಾಲಯದಿಂದ ಅಭಿಪ್ರಾಯ ಪಡೆಯಲಿದ್ದಾರೆ. ಮುಂಗಾರು ಅಧಿವೇಶನಕ್ಕೂ ಮುನ್ನ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ