'ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ, ಸುಪ್ರೀಂ ಕಣ್ಗಾವಲಿನ ತನಿಖೆಯಾಗಲಿ'

By Suvarna NewsFirst Published Oct 4, 2020, 10:40 AM IST
Highlights

ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ| ಸುಪ್ರೀಂ ಕಣ್ಗಾವಲಿನ ತನಿಖೆಯಾಗಲಿ: ಸಂತ್ರಸ್ತೆ ಕುಟುಂಬ

ಹಾಥ್ರಸ್‌ (ಅ.04.): ಇಲ್ಲಿನ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. 3 ದಿನಗಳ ಹಿಂದೆ ಅಂತಿಮ ಸಂಸ್ಕಾರಕ್ಕೆ ಒಳಪಟ್ಟಶವ ತಮ್ಮ ಮಗಳದ್ದಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ಎಸ್‌ಐಟಿ ಅಥವಾ ಸಿಬಿಐ ತನಿಖೆ ಬಗ್ಗೆ ತಮಗೆ ವಿಶ್ವಾಸವಿಲ್ಲ, ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

2 ದಿನಗಳಿಂದ ಮಾಧ್ಯಮ ಸಿಬ್ಬಂದಿ ಹಾಥ್ರಸ್‌ಗೆ ತೆರಳದಂತೆ ತಡೆದು ತೀವ್ರ ಟೀಕೆಗೆ ಗುರಿಯಾಗಿದ್ದ ಯೋಗಿ ಆದಿ​ತ್ಯ​ನಾ​ಥ್‌ ​ಸ​ರ್ಕಾ​ರ​ವು ಶನಿವಾರ ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರ ಜೊತೆ ಮಾಧ್ಯಮ ಸಿಬ್ಬಂದಿಗೆ ಮಾತನಾಡಲು ಅವಕಾಶ ಕಲ್ಪಿಸಿತ್ತು.

"

ಈ ವೇಳೆ ಮಾತನಾಡಿದ ಯುವತಿಯ ಪೋಷಕರು, ‘ಕೈಮುಗಿದು ಕೋರಿಕೊಂಡರೂ, ಅಂತ್ಯಸಂಸ್ಕಾರಕ್ಕೂ ಮುನ್ನ ನಮಗೆ ಮಗಳ ಮುಖ ತೋರಿಸಲಿಲ್ಲ. ಹೀಗಾಗಿ ಆ ಶವದ ಬಗ್ಗೆಯೇ ನಮಗೆ ಅನುಮಾನವಿದೆ. ಅದು ನಮ್ಮ ಮಗಳ ಶವ ಆಗಿರಲಿಕ್ಕಿಲ್ಲ’ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಎಸ್‌ಐಟಿ ಅಧಿಕಾರಿಗಳು, ರೇಪ್‌ ಆರೋಪಿಗಳ ಜೊತೆ ಕೈಜೋಡಿಸಿರುವ ಕಾರಣ, ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲೇ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ನಡುವೆ ಪದೇ ಪದೇ ಹೇಳಿಕೆ ಬದಲಿಸುತ್ತಿರುವ ಆರೋಪಕ್ಕಾಗಿ ತಮ್ಮನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂಬ ಅಧಿಕಾರಿಗಳ ವಾದವನ್ನು ತಿರಸ್ಕರಿಸಿರುವ ಪೋಷಕರು, ‘ವಾಸ್ತವವಾಗಿ ಇಂಥದ್ದೊಂದು ಪರೀಕ್ಷೆಯನ್ನು ದಿನಕ್ಕೊಂದು ಸುಳ್ಳು ಹೇಳುತ್ತಿರುವ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಮಾಡಬೇಕು’ ಎಂದು ತಿರುಗೇಟು ನೀಡಿದ್ದಾರೆ.

‘ಅಂತ್ಯಸಂಸ್ಕಾರ ನಡೆದ ವೇಳೆ ಯುವತಿಯ ಅಜ್ಜ ಜೊತೆಯಲ್ಲಿದ್ದರು ಎಂಬ ಪೊಲೀಸರ ವಾದ ಸಂಪೂರ್ಣ ಸುಳ್ಳು’ ಎಂದಿರುವ ಕುಟುಂಬ ಸದಸ್ಯರು, ‘ಆಕೆಯ ಅಜ್ಜ 2006ರಲ್ಲೇ ಸಾವನ್ನಪ್ಪಿದ್ದರು’ ಎಂದು ಹೇಳಿದ್ದಾರೆ.

click me!