ಪಾಂಡಿಯನ್ ಒಡಿಶಾ ಸಿಎಂ ನವೀನ್ ಉತ್ತರಾಧಿಕಾರಿ. ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ತಕ್ಷಣವೇ ಮಹತ್ವದ ಹುದ್ದೆ. ಮುಂದಿನ ಚುನಾವಣೆಯಲ್ಲಿ ಬಿಜೆಡಿ ಸಿಎಂ ಅಭ್ಯರ್ಥಿ ಗುಸುಗುಸು
ಭುವನೇಶ್ವರ (ಅ.25): ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅತ್ಯಾಪ್ತ ಐಎಎಸ್ ಅಧಿಕಾರಿ ವಿ.ಕೆ.ಪಾಂಡಿಯನ್ ತಮ್ಮ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಮೂರೇ ದಿನದಲ್ಲಿ ಅದು ಅಂಗೀಕಾರಗೊಂಡು, ಅವರನ್ನು ಇದೀಗ ಒಡಿಶಾ ಸರ್ಕಾರದ 5ಟಿ (ಪರಿವರ್ತನಕಾರಿ ಯೋಜನೆಗಳು) ಯೋಜನೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಜೊತೆಗೆ ಅವರಿಗೆ ಸಂಪುಟ ದರ್ಜೆ ನೀಡಲಾಗಿದೆ.
ಈ ದಿಢೀರ್ ಬೆಳವಣಿಗೆ ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಲೇ ಪರೋಕ್ಷವಾಗಿ ನವೀನ್ ಪಟ್ನಾಯಕ್ (71) ತಮ್ಮ ಉತ್ತರಾಧಿಕಾರಿ ಆಯ್ಕೆ ಮಾಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ವೈಯಕ್ತಿಕ ಬಿಕ್ಕಟ್ಟು, ಪಕ್ಷದ ಬೆಂಬಲವಿಲ್ಲವೆಂದು ಆರೋಪಿಸಿ 25 ವರ್ಷಗಳ ಬಿಜೆಪಿ ಸಂಬಂಧಕ್ಕೆ ನಟಿ ಗೌತಮಿ ಗುಡ್‌ಬೈ
2011ರಿಂದಲೂ ನವೀನ್ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಾಂಡಿಯನ್ ವಿರುದ್ಧ ವಿಪಕ್ಷಗಳು, ವಿವಿಧ ಸರ್ಕಾರಿ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಮಾಡಿದ್ದವು. ಆದರೆ ಸರ್ಕಾರದ ಹಲವು ಮಹತ್ವಕಾಂಕ್ಷಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಪೂರ್ಣಗೊಳಿಸಿದ ಹಿರಿಮೆ ಪಾಂಡಿಯನ್‌ಗಿದೆ.
ಈ ಹಿನ್ನೆಲೆಯಲ್ಲಿ ಇದೀಗ 5ಟಿ ಯೋಜನೆಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಜೊತೆಗೆ ‘ಅಮ ಒಡಿಶಾ, ನಬಿನ್ ಒಡಿಶಾ’ (ನಮ್ಮ ಒಡಿಶಾ, ಹೊಸ ಒಡಿಶಾ) ಎಂಬ ಹೊಸ ಯೋಜನೆಯ ಹೊಣೆಯನ್ನೂ ವಹಿಸಲಾಗಿದೆ. ಶೀಘ್ರವೇ ಪಾಂಡಿಯನ್ ಬಿಜೆಡಿ ಸೇರಲಿದ್ದಾರೆ ಎನ್ನಲಾಗಿದೆ.
ಕೇವಲ 1 ರೂ ನಲ್ಲಿದ್ದ ಅನಿಲ್ ಅಂಬಾನಿ ಷೇರುಗಳ ಬೆಲೆ ಬಾರೀ ಜಿಗಿತ, 6 ತಿಂಗಳಲ್ಲಿ ಡಬಲ್!
ಸಿಎಂ ಆದರೂ ಅಚ್ಚರಿ ಇಲ್ಲ- ಕಾಂಗ್ರೆಸ್: ಈ ನಡುವೆ ಹೊಸ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಸಪ್ತಗಿರಿ ಉಲ್ಕಾ, ‘ರಾಜ್ಯದಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ, ಆದರೆ ಯಾರು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೂರು ದಿನಗಳ ರಜೆಯ ಅವಧಿಯಲ್ಲೇ ವಿಆರ್‌ಎಸ್ ಅಂಗೀಕಾರಗೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಪಾಂಡಿಯನ್ ರಾಜ್ಯದ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡರೂ ಅಚ್ಚರಿ ಇಲ್ಲ’ ಎಂದಿದ್ದಾರೆ.
ಇನ್ನು ಬಿಜೆಪಿ ಮುಖ್ಯ ಸಚೇತಕ ಮೋಹನ್ ಮಾಝಿ ಪ್ರತಿಕ್ರಿಯೆ ನೀಡಿ, ‘ಈಗ ಅವರ (ಪಾಂಡಿಯನ್) ಅಧಿಕಾರಿ ಮುಖವಾಡ ಕಳಚಿರುವ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ರಾಜಕೀಯ ಮಾಡಬಹುದು. ಆದರೆ ಅವರನ್ನು ರಾಜ್ಯದ ಜನತೆ ಒಪ್ಪುವುದಿಲ್ಲ’ ಎಂದಿದ್ದಾರೆ.