ವಿಜಯವಾಡ ಟು ಬೆಂಗಳೂರು ಜಸ್ಟ್ 6 ಗಂಟೆ: ಶೀಘ್ರದಲ್ಲೇ ಲಭ್ಯವಾಗಲಿದೆ ನೂತನ ಗ್ರೀನ್‌ಫೀಲ್ಡ್ ಹೈವೇ

Published : May 19, 2026, 09:27 PM IST
PM Modi Ganga Expressway Inauguration

ಸಾರಾಂಶ

ಬೆಂಗಳೂರು ಮತ್ತು ವಿಜಯವಾಡ ನಡುವೆ ನಿರ್ಮಾಣವಾಗುತ್ತಿರುವ ಹೊಸ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ (NH-544G) ಕಾಮಗಾರಿ ಅಂತಿಮ ಹಂತದಲ್ಲಿದೆ. ಈ 6 ಪಥದ ಹೆದ್ದಾರಿಯು 2027ರ ವೇಳೆಗೆ ಪೂರ್ಣಗೊಳ್ಳಲಿದ್ದು, ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 6 ಗಂಟೆಗಳಿಗೆ ಇಳಿಸಲಿದೆ.

ಅಮರಾವತಿ/ಬೆಂಗಳೂರು (ಮೇ.19): ಆಂಧ್ರಪ್ರದೇಶ ಮತ್ತು ಕರ್ನಾಟಕದ ಜನತೆಗೆ ಭರ್ಜರಿ ನ್ಯೂಸ್‌ ಸಿಕ್ಕಿದೆ. ಉಭಯ ರಾಜ್ಯಗಳ ನಡುವಿನ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ "ಬೆಂಗಳೂರು-ಕಡಪ-ವಿಜಯವಾಡ" ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ (Greenfield National Highway) ಕಾಮಗಾರಿ ಈಗ ಅಂತಿಮ ಹಂತಕ್ಕೆ ತಲುಪಿದ್ದು, ಶರವೇಗದಲ್ಲಿ ಮುನ್ನುಗ್ಗುತ್ತಿದೆ. ವಿಜಯವಾಡ-ಬೆಂಗಳೂರು ಆರ್ಥಿಕ ಕಾರಿಡಾರ್ (Economic Corridor) ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಹೈಟೆಕ್ ಹೆದ್ದಾರಿಯು ಮುಂದಿನ ವರ್ಷದ (2027) ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಇದು ಲಭ್ಯವಾದರೆ ವಿಜಯವಾಡ ಮತ್ತು ಸಿಲಿಕಾನ್ ಸಿಟಿ ಬೆಂಗಳೂರು ನಡುವಿನ ಪ್ರಯಾಣದ ಅವಧಿ ಕೇವಲ 6 ಗಂಟೆಗಳಿಗೆ ಇಳಿಕೆಯಾಗಲಿದೆ.

6 ಲೇನ್‌ಗಳ ಹೆದ್ದಾರಿ; NH-544G ಎಂದು ನಾಮಕರಣ

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿರುವ ಈ ಗ್ರೀನ್‌ಫೀಲ್ಡ್ ಹೆದ್ದಾರಿಗೆ 'ರಾಷ್ಟ್ರೀಯ ಹೆದ್ದಾರಿ 544ಜಿ' (NH-544G) ಎಂದು ಹೆಸರಿಡಲಾಗಿದೆ. ಒಟ್ಟು 6 ಪಥಗಳ (6-Lane) ಅಗಲದೊಂದಿಗೆ ನಿರ್ಮಾಣವಾಗುತ್ತಿರುವ ಈ ರಸ್ತೆಯ ಒಟ್ಟು ಉದ್ದ 620 ಕಿಲೋಮೀಟರ್ ಆಗಿದೆ. ಈ ಬೃಹತ್ ಯೋಜನೆಗಾಗಿ ಕೇಂದ್ರ ಸರ್ಕಾರ ಸುಮಾರು 19,000 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇಡೀ ಕಾಮಗಾರಿಯನ್ನು ಒಟ್ಟು ಆರು ಪ್ಯಾಕೇಜ್‌ಗಳಾಗಿ ವಿಭಜಿಸಿ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಎಲ್ಲಾ ಪ್ಯಾಕೇಜ್‌ಗಳಲ್ಲಿ ಶೇಕಡಾ 60 ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಇನ್ನುಳಿದ ಶೇ. 40 ರಷ್ಟು ಬಾಕಿ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಮುಗಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಪ್ರಯಾಣದ ಸಮಯ ಕಡಿತ; 120 ಕಿಮೀ ವೇಗದ ಮಿತಿ

ಪ್ರಸ್ತುತ ವಿಜಯವಾಡದಿಂದ ಬೆಂಗಳೂರಿಗೆ ತಲುಪಲು ತೆಗೆದುಕೊಳ್ಳುವ ಸಮಯಕ್ಕೆ ಹೋಲಿಸಿದರೆ, ಈ ಎಕ್ಸ್‌ಪ್ರೆಸ್‌ವೇ ಮುಗಿದ ಬಳಿಕ ಪ್ರಯಾಣದ ಅವಧಿ ಅಕ್ಷರಶಃ ಅರ್ಧದಷ್ಟು ಕಡಿತಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಂತ ಸುಗಮವಾಗಿ ವಿನ್ಯಾಸಗೊಳಿಸಲಾಗಿರುವ ಈ ಹೆದ್ದಾರಿಯಲ್ಲಿ ವಾಹನಗಳು ಗರಿಷ್ಠ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸಲು ಅವಕಾಶವಿರಲಿದೆ.

ಟ್ರಾಕ್ಟರ್, ಆಟೋಗಳಿಗೆ ನೋ ಎಂಟ್ರಿ! ಟೋಲ್ ಸಂಗ್ರಹದಲ್ಲೂ ಡಿಫರೆಂಟ್

ಇದು 'ಲಗೇಜ್ ಮತ್ತು ಸ್ಪೀಡ್' ಕಾರಿಡಾರ್ ಆಗಿರುವುದರಿಂದ ಭದ್ರತೆಯ ದೃಷ್ಟಿಯಿಂದ ಬೈಕ್‌ಗಳು, ಆಟೋರಿಕ್ಷಾಗಳು ಮತ್ತು ಟ್ರಾಕ್ಟರ್‌ಗಳಂತಹ ನಿಧಾನಗತಿಯ ವಾಹನಗಳ ಪ್ರವೇಶವನ್ನು ಈ ಗ್ರೀನ್‌ಫೀಲ್ಡ್ ಹೈವೇಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ವಾಹನಗಳು ಎಲ್ಲೆಂದರಲ್ಲಿ ಹೆದ್ದಾರಿಗೆ ನುಗ್ಗಲು ಸಾಧ್ಯವಿಲ್ಲ. ಕೇವಲ ನಿಗದಿಪಡಿಸಿದ ಎಂಟ್ರಿ (ಪ್ರವೇಶ) ಮತ್ತು ಎಕ್ಸಿಟ್ (ನಿರ್ಗಮನ) ಪಾಯಿಂಟ್‌ಗಳ ಮೂಲಕವೇ ಚಲಿಸಬೇಕಾಗುತ್ತದೆ. ಪ್ರತಿ 40 ಕಿಲೋಮೀಟರ್‌ಗೆ ಒಂದರಂತೆ ಪ್ರಮುಖ ಜಂಕ್ಷನ್‌ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಇಲ್ಲಿ ವಾಹನಗಳು ಹೆದ್ದಾರಿಯಲ್ಲಿ ಚಲಿಸಿದ ಒಟ್ಟು ದೂರವನ್ನು (Distance travelled) ಲೆಕ್ಕಹಾಕಿ ಅದಕ್ಕೆ ತಕ್ಕಂತೆ ಮಾತ್ರ ಟೋಲ್ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ.

ಉಭಯ ರಾಜ್ಯಗಳ 11 ಜಿಲ್ಲೆಗಳ ಮೇಲೆ ಹೈವೇ ಪಾಸ್

ಈ ರಾಷ್ಟ್ರೀಯ ಹೆದ್ದಾರಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಟ್ಟು 11 ಜಿಲ್ಲೆಗಳನ್ನು ಕವರ್ ಮಾಡಲಿದ್ದು, ಈ ಪೈಕಿ ಆಂಧ್ರಪ್ರದೇಶದ ಒಂದರಲ್ಲೇ 8 ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಆಂಧ್ರಪ್ರದೇಶ ವ್ಯಾಪ್ತಿಯಲ್ಲೇ ಸುಮಾರು 450 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣವಾಗುತ್ತಿದೆ.

ಪ್ರಕಾಶಂ ಜಿಲ್ಲೆಯೊಂದರಲ್ಲೇ ಭರ್ಜರಿ ನೆಟ್‌ವರ್ಕ್

ಈ ಹೆದ್ದಾರಿಯು ಆಂಧ್ರದ ಪ್ರಕಾಶಂ ಜಿಲ್ಲೆಯಲ್ಲಿಯೇ ಸುಮಾರು 110 ಕಿಲೋಮೀಟರ್ ವ್ಯಾಪಿಸಿದ್ದು, ಒಟ್ಟು 43 ಹಳ್ಳಿಗಳ ನಡುವೆ ಸಾಗಲಿದೆ. ಸುಗಮ ಸಂಚಾರಕ್ಕಾಗಿ ಈ ಜಿಲ್ಲೆಯೊಂದರಲ್ಲೇ 10 ದೊಡ್ಡ ಮೇಲ್ಸೇತುವೆಗಳು, 48 ಸಣ್ಣ ಸೇತುವೆಗಳು, 28 ಅಂಡರ್‌ಪಾಸ್‌ಗಳು ಹಾಗೂ ಒಂದು ಬೃಹತ್ ರೈಲ್ವೆ ಓವರ್ ಬ್ರಿಡ್ಜ್ (ROB) ಅನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ, ಹೆದ್ದಾರಿಯ ಪಕ್ಕದ ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ 127 ಬಾಕ್ಸ್ ಮಾದರಿಯ ಅಂಡರ್‌ಪಾಸ್‌ಗಳನ್ನು (Box-type underpasses) ಸಿದ್ಧಪಡಿಸಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಗ ಡಾಕ್ಟರ್‌ ಆಗ್ಲಿ ಎಂದು ಅಪ್ಪ 10 ಲಕ್ಷ ಲಂಚ ಕೊಟ್ಟು ನೀಟ್‌ ಪೇಪರ್‌ ತಗೊಂಡ: ಮಗ ಡುಮ್ಕಿ ಹೊಡೆದ
ರಕ್ಷಣಾ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು, ಮೊದಲ ಸ್ವದೇಶಿ ಸೇನಾ ವಿಮಾನ ವಡೋದರದಲ್ಲಿ ಹಾರಾಟಕ್ಕೆ ರೆಡಿ