
ನವದೆಹಲಿ: ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪಕ್ಕದಲ್ಲೇ ವೇದಿಕೆ ಮೇಲೆ ಆಸೀನರಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೊದಿ ತೋರಿದ ಔದಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಪವಾರ್ ಅವರಿಗೆ ಬಾಯಾರಿಕೆ ಆಗಿದ್ದಾಗ ಅವರ ಗ್ಲಾಸ್ ಖಾಲಿ ಇತ್ತು. ಖುದ್ದು ಮೋದಿ ಅವರು ಬಾಟಲ್ ತೆರೆದು ಅವರ ಗ್ಲಾಸಿಗೆ ನೀರು ಹಾಕಿ, ನೀರು ಕುಡಿಯಲು ನೆರವಾದರು. ಅಲ್ಲದೆ, ಅವರಿಗೆ ಆಸನದ ಮೇಲೆ ಕೂರಲೂ ಸಹಾಯ ಮಾಡಿದರು. ಬಳಿಕ ತಮ್ಮ ಭಾಷಣದಲ್ಲಿ, ‘ಇಂದು ಶರದ್ ಪವಾರ್ ಅವರ ಆಮಂತ್ರಣದ ಮೇರಗೆ ನಾನಿಲ್ಲಿ ಬಂದಿದ್ದೇನೆ’ ಎಂದರು.
ಮಹಾರಾಷ್ಟ್ರದ ಮಹಾನ್ ಭೂಮಿಯಲ್ಲಿ, ಮರಾಠಿ ಭಾಷಿಕ ವ್ಯಕ್ತಿಯೊಬ್ಬರು 100 ವರ್ಷಗಳ ಹಿಂದೆ ಆರೆಸ್ಸೆಸ್‌ನ ಬೀಜ ಬಿತ್ತಿದರು. ಅಂಥ ಆರೆಸ್ಸೆಸ್ ಇಂದು ನನ್ನಂಥ ಲಕ್ಷಾಂತರ ಜನರನ್ನು ದೇಶಕ್ಕಾಗಿ ಬದುಕಲು ಪ್ರೇರೇಪಿಸಿದೆ ಮತ್ತು ಸಂಘದ ಕಾರಣದಿಂದಾಗಿ ಮರಾಠಿ ಭಾಷೆ ಮತ್ತು ಮರಾಠಿ ಸಂಪ್ರದಾಯಗಳೊಂದಿಗೆ ಸಂಪರ್ಕ ಸಾಧಿಸುವ ಸವಲತ್ತು ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮರಾಠಿ ಸಮ್ಮೇಳನದಲ್ಲಿ ಹೇಳಿದರು.
ಭಾಷಾ ದ್ವೇಷ ಹಚ್ಚಬೇಡಿ: ಮೋದಿ ಕರೆ
‘ಭಾರತೀಯ ಭಾಷೆಗಳ ನಡುವೆ ಎಂದಿಗೂ ದ್ವೇಷವಿಲ್ಲ. ಹೀಗಾಗಿ ದ್ವೇಷ ಹಚ್ಚುವ ಯತ್ನ ಮಾಡಬಾರದು. ಭಾಷೆಗಳ ಆಧಾರದ ಮೇಲೆ ತಾರತಮ್ಯ ಮಾಡುವ ಪ್ರಯತ್ನಗಳಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾಷೆಗಳು ಒಂದನ್ನೊಂದು ಶ್ರೀಮಂತಗೊಳಿಸಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ನೋಡಿ ಭಯಗೊಂಡ್ರಾ ಟ್ರಂಪ್, ಅಮೆರಿಕ ಹಿಂದಿಕ್ಕುತ್ತಾ ಇಂಡಿಯಾ?
ಇಲ್ಲಿನ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ 98ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಭಾರತವು ವಿಶ್ವದ ಅತಿದೊಡ್ಡ ಭಾಷಾ ವೈವಿಧ್ಯತೆಯನ್ನು ಹೊಂದಿದ ದೇಶ. ಈ ವೈವಿಧ್ಯತೆಯೇ ನಮ್ಮ ಏಕತೆಯ ಅತ್ಯಂತ ಮೂಲಭೂತ ಆಧಾರವಾಗಿದೆ. ಭಾಷಾ ತಾರತಮ್ಯದ ತಪ್ಪು ಕಲ್ಪನೆಗಳಿಂದ ದೂರವಿದ್ದು, ಎಲ್ಲಾ ಭಾಷೆಗಳನ್ನು ಅಳವಡಿಸಿಕೊಂಡು ಶ್ರೀಮಂತಗೊಳಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ’ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಅನುಷ್ಠಾನವು ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಹೇರುವ ಪ್ರಯತ್ನವಾಗಿದೆ ಎಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಟೀಕಿಸಿದ್ದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ರಾಜ್ಯಾದ್ಯಂತ ಅಭಿಯಾನ ಕೂಡ ಕೈಗೊಂಡಿತ್ತು. ಇದರ ಬೆನ್ನಲ್ಲೆ ಪ್ರಧಾನಿ ಈ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಶಿಂಧೆ ವಾರ್ನಿಂಗ್ ಕೊಟ್ಟಿದ್ಯಾರು? ಮಹಾಯುತಿ ಸರ್ಕಾರದಲ್ಲಿ ಬಿರುಕು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ