* ಒಡಿಶಾ ತೀರಕ್ಕೆ ಇಂದು ಅಪ್ಪಳಿಸಲಿದೆ ಸೈಕ್ಲೋನ್
* 185 ಕಿ.ಮೀ. ಶರವೇಗದಲ್ಲಿ ‘ಯಾಸ್’ ದಾಳಿ
* ಪಶ್ಚಿಮ ಬಂಗಾಳ, ಒಡಿಶಾ ತೀವ್ರ ಕಟ್ಟೆಚ್ಚರ
ಕೋಲ್ಕತಾ(ಮೇ.26): ತೀವ್ರ ಸ್ವರೂಪ ಪಡೆದಿರುವ ‘ಯಾಸ್’ ಚಂಡಮಾರುತ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಕಡಲತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಮಂಗಳವಾರ ಸಂಜೆಯೇ ಇದು ತೀವ್ರ ಸ್ವರೂಪ ಪಡೆದಿದ್ದು, ಭಾರೀ ಪ್ರಾಕೃತಿಕ ವಿನಾಶ ಸೃಷ್ಟಿಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಜಾರ್ಖಂಡ್‌ನಲ್ಲೂ ಚಂಡಮಾರುತದ ಪರಿಣಾಮ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಒಡಿಶಾ, ಬಂಗಾಳಕ್ಕೆ 'ಯಾಸ್': ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ!
ಮಂಗಳವಾರವೇ ಭಾರೀ ಮಳೆಯನ್ನು ಚಂಡಮಾರುತ ಸುರಿಸುತ್ತಿದೆ. ಗಂಟೆಗೆ 80 ಕಿ.ಮೀ. ವೇಗದ ಬಿರುಗಾಳಿ ಕೂಡ ಬೀಸುತ್ತಿದೆ. ಅಪ್ಪಳಿಸುವ ವೇಳೆ 155 ಕಿ.ಮೀ.ನಿಂದ 185 ಕಿ.ಮೀ.ವರೆಗೆ ಬಿರುಗಾಳಿ ಬೀಸಬಹುದು. ಚಂಡಮಾರುತ ಅಪ್ಪಳಿಸಿದ ಬಳಿಕ 6 ತಾಸು ಭಾರಿ ಮಳೆ ಸುರಿಯಲಿದೆ. ಇದರ ಪರಿಣಾಮ ತೀವ್ರತರವಾಗಲಿದೆ. ಸುಮಾರು 4.5 ಅಡಿ ಎತ್ತರದವರೆಗೆ ಸಮುದ್ರದ ಅಲೆಗಳು ಏಳಲಿವೆ. ಭಾರಿ ಮಳೆ ಹಾಗೂ ಬಿರುಗಾಳಿ ಕಾರಣ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಲಿವೆ ಎಂದು ಮುನ್ಸೂಚನೆ ನೀಡಲಾಗಿದೆ.
ಚಂಡಮಾರುತ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 9 ಲಕ್ಷ ಮತ್ತು ಒಡಿಶಾದಲ್ಲಿ 2 ಲಕ್ಷ ಜನರನ್ನು ತಗ್ಗು ಪ್ರದೇಶ, ಕರಾವಳಿ ಪ್ರದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಒಡಿಶಾದ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಎನ್‌ಡಿಆರ್‌ಎಫ್‌ನಿಂದ 112 ತಂಡ- ದಾಖಲೆ:
ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪಡೆ (ಎನ್‌ಡಿಆರ್‌ಎಫ್) ಒಡಿಶಾ, ಅಂಡಮಾನ್-ನಿಕೋಬಾರ್, ಪ.ಬಂಗಾಳ ಸೇರಿದಂತೆ 5 ರಾಜ್ಯಗಳಿಗೆ ರಕ್ಷಣಾ ಕಾರ‍್ಯಕ್ಕೆಂದು 112 ತಂಡಗಳನ್ನು ನಿಯೋಜಿಸಿದೆ. ಇದು ಈವರೆಗಿನ ದಾಖಲೆಯಾಗಿದೆ. ಒಡಿಶಾಗೆ 52 ಹಾಗೂ ಪ.ಬಂಗಾಳಕ್ಕೆ ರವಾನೆಯಾಗಿರುವ 45 ತಂಡಗಳು ಇದರಲ್ಲಿ ಸೇರಿವೆ. ಮತ್ತೊಂದೆಡೆ ಸೇನಾ ಪಡೆಗಳು ಕಟ್ಟೆಚ್ಚರದಿಂದ ಇದ್ದು, ನೌಕಾಪಡೆ ನಾಲ್ಕು ಯುದ್ಧ ನೌಕೆಗಳನ್ನು ನಿಯೋಜಿಸಿದೆ. ವಾಯುಪಡೆ 11 ಸಾಗಣೆ ವಿಮಾನ ಹಾಗೂ 25 ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಇನ್ನು ಸೇನೆ ಪರಿಹಾರ ಕಾರ್ಯಗಳಿಗೆ ನೆರವಾಗಲು 17 ತುಕಡಿಗಳನ್ನು ನಿಯೋಜಿಸಿದೆ.
ರಾಜ್ಯಕ್ಕಿದೆಯಾದ ‘ಯಾಸ್’ಚಂಡಮಾರುತ : ಹವಾಮಾನ ಇಲಾಖೆ ಸ್ಪಷ್ಟನೆ
ಈ ಚಂಡಮಾರುತಕ್ಕೆ ಒಮಾನ್ ದೇಶ ‘ಯಾಸ್’ ಎಂದು ನಾಮಕರಣ ಮಾಡಿದೆ. ಪರ್ಷಿಯಾ ಭಾಷೆಯ ಪದ ಅದಾಗಿದ್ದು, ಮಲ್ಲಿಗೆ ಎಂಬ ಅರ್ಥವಿದೆ.
ಭಾರಿ ಸಿದ್ಧತೆ
- ಬಂಗಾಳದಲ್ಲಿ 9 ಲಕ್ಷ, ಒಡಿಶಾದಲ್ಲಿ 2 ಲಕ್ಷ ಸೇರಿ 11 ಲಕ್ಷ ಜನರ ತೆರವು
- ಒಡಿಶಾ, ಬಂಗಾಳ, ಆಂಧ್ರ ಸೇರಿ 5 ರಾಜ್ಯಕ್ಕೆ 112 ಎನ್ಡಿಆರ್‌ಎಫ್ ತುಕಡಿ
- ವಾಯುಪಡೆಯ 25 ಕಾಪ್ಟರ್, 11 ವಿಮಾನ, 4 ಯುದ್ಧ ನೌಕೆ ಸನ್ನದ್ಧ ಸ್ಥಿತಿ
- ಚಂಡಮಾರುತದಿಂದ 6 ತಾಸು ಧಾರಾಕಾರ ಮಳೆ: ಹವಾಮಾನ ಇಲಾಖೆ