ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎರಡು ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಕೋಲಾಹಲ| ಮೇಲ್ಮನೆಯಲ್ಲಿ ಗದ್ದಲ ಉಂಟುಮಾಡಿದ ಸಂಸದರ ವಿರುದ್ಧ ಕ್ರಮ| 8 ಸದಸ್ಯರನ್ನು 1 ವಾರ ಅಮಾನತು ಮಾಡಿದ ವೆಂಕಯ್ಯ ನಾಯ್ಡು
ನವದೆಹಲಿ(ಸೆ.21): ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎರಡು ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಭಾನುವಾರ ಉಂಟಾದ ವಾಗ್ವಾದ, ಗದ್ದಲ ಘಟನೆಗೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ರೂಲ್ ಬುಕ್ ಹರಿದು ಸಂಸದರ ಕೋಲಾಹಲ!
ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ 2 ಕೃಷಿ ಮಸೂದೆ ವಿರೋಧಿಸಿ ಭಾನುವಾರ ವಿಪಕ್ಷಗಳು ರಾಜ್ಯಸಭೆಯಲ್ಲಿ ಭಾರೀ ಗದ್ದಲ ಉಂಟುಮಾಡಿ ಉಪ ಸಭಾಪತಿ ಪೀಠದ ಮೈಕನ್ನೇ ಎಳೆದಾಡಿದ್ದರು. ಟಿಎಂಸಿ ಸಂಸದ ಡೆರಿಕ್ ಓಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್, ಡಿಎಂಕೆ ಸಂಸದ ತಿರುಚಿ ಶಿವಾ ಅವರು ಉಪ ಸಭಾಪತಿ ಸಭಾದ್ಯಕ್ಷ ಪೀಠದತ್ತ ನುಗ್ಗಿ ಸದನದ ನಿಯಮ ಪುಸ್ತಕವನ್ನೇ ಹರಿದು ಹಾಕಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಮಾರ್ಷಲ್ಗಳನ್ನು ಕರೆಸಿ, ಕೆಲಕಾಲ ಸದನ ಮುಂದೂಡಲಾಗಿತ್ತು.