
ಕೊಚ್ಚಿ (ಅ.2): ಸಾಮಾನ್ಯವಾಗಿ ರಾಜಕೀಯ ರಂಗದಲ್ಲಿ ನಾಯಕರ ಹೇಳಿಕೆಗಳು, ರಾಜಕೀಯ ನಿಲುವುಗಳು ಹಾಗೂ ತೀಕ್ಷ್ಣ ಮಾತುಗಳು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುತ್ತವೆ. ಆದರೆ, ಸಾರ್ವಜನಿಕ ಜೀವನದಲ್ಲಿರುವ ನಾಯಕರ ವೈಯಕ್ತಿಕ ಜೀವನ, ವಿದೇಶಿ ಪ್ರವಾಸಗಳು ಹಾಗೂ ಅವರು ಧರಿಸುವ ಉಡುಪು, ವಾಚ್ ಸೇರಿದಂತೆ ವಿವಿಧ ಪರಿಕರಗಳು ಸಹ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಾ ವಸ್ತುವಾಗುವುದು ಉಂಟು. ಇದೀಗ ಕೇರಳ ಸಿಎಂ ವಿ.ಡಿ. ಸತೀಶನ್ ಧರಿಸಿರುವ ಐಷಾರಾಮಿ ವಾಚ್ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿತ್ತಿದ್ದು, ಇದು ಕರ್ನಾಟಕದಲ್ಲಿ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಹ್ಯುಬ್ಲೋಟ್ ವಾಚ್ ವಿವಾದದ ರೀತಿಯಲ್ಲೇ ಸಾಗುತ್ತಿದೆ.
ವಿವಿಧ ಮಾದರಿಯ ಕೈಗಡಿಯಾರಗಳ (Watches) ಕುರಿತು ಮಾಹಿತಿ ಹಾಗೂ ವಿಡಿಯೋ ಹಂಚಿಕೊಳ್ಳುವ ಇನ್‌ಸ್ಟಾಗ್ರಾಮ್ ಪ್ರೊಫೈಲ್ 'ಕ್ರೋನೋಗ್ರಾಫ್ 2022' (Chronograph 2022) ನಡೆಸುತ್ತಿರುವ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ 'ಎಮ್. ಲಿಫಿನ್', ವಿ.ಡಿ. ಸತೀಶನ್ ಅವರ ಕೈಯಲ್ಲಿರುವ ಈ ಪ್ರಸಿದ್ಧ ವಾಚ್‌ನ ಸಂಪೂರ್ಣ ವಿವರಗಳನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
ಕೇರಳದ ಕಾಂಗ್ರೆಸ್ ಸಿಎಂ ವಿಡಿ ಸತೀಶನ್ ಅವರು ಧರಿಸಿರುವ ಈ ವಾಚ್ ಜಾಗತಿಕವಾಗಿ ಹೆಸರುವಾಸಿಯಾದ ಸ್ವಿಟ್ಜರ್ಲೆಂಡ್‌ನ 'ಬೋಮ್ ಆಂಡ್ ಮೆರ್ಸಿಯರ್' (Baume & Mercier) ಸಂಸ್ಥೆಯ 'ಕ್ಲಾಸಿಮಾ' (Classima) ಮಾದರಿಯದ್ದಾಗಿದೆ. ಸ್ಟೀಲ್ ಕೇಸ್‌ನೊಂದಿಗೆ ವಿನ್ಯಾಸಗೊಂಡಿರುವ ಈ ಐಷಾರಾಮಿ ವಾಚ್‌ಗೆ ತಯಾರಕ ಕಂಪನಿಯು ಎರಡು ವರ್ಷಗಳ ವಾರಂಟಿ ನೀಡುತ್ತದೆ. ಪ್ರಸ್ತುತ ಆನ್‌ಲೈನ್ ಮಾರುಕಟ್ಟೆಯಲ್ಲಿ ಈ 'ಬೋಮ್ ಆಂಡ್ ಮೆರ್ಸಿಯರ್ ಕ್ಲಾಸಿಮಾ' ಮಾದರಿಯ ವಾಚ್‌ನ ಬೆಲೆ ಸುಮಾರು 1,08,000 ರೂಪಾಯಿ ಆಗಿದೆ. ಇಷ್ಟೊಂದು ಮೌಲ್ಯದ ವಾಚ್ ಕುರಿತು ಲಿಫಿನ್ ಅವರು ಸತೀಶನ್ ಅವರಲ್ಲಿ ಪ್ರಶ್ನಿಸಿದಾಗ, "ಈ ವಾಚ್ ನನಗೆ ಬೇರೊಬ್ಬರಿಂದ ಉಡುಗೊರೆಯಾಗಿ (Gift) ಬಂದಿದ್ದು" ಎಂದು ಅವರು ತಿಳಿಸಿದ್ದಾಗಿ ಲಿಫಿನ್ ತಮ್ಮ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿ.ಡಿ. ಸತೀಶನ್ ಅವರು ತಮ್ಮ ಕೈಯಲ್ಲಿರುವ ಲಕ್ಷ ಮೌಲ್ಯದ ವಾಚ್ ಅನ್ನು 'ಉಡುಗೊರೆ' ಎಂದು ಹೇಳಿರುವುದು ಈಗ ರಾಜಕೀಯ ವಲಯದಲ್ಲಿ ಹಳೆಯ 'ಸ್ಪಾನ್ಸರ್‌ಶಿಪ್ ವಿವಾದ'ವನ್ನು ಮತ್ತೆ ನೆನಪಿಸುವಂತೆ ಮಾಡಿದೆ. ಈ ಹಿಂದೆ ಮಲಪ್ಪುರಂ ಜಿಲ್ಲೆಯಲ್ಲಿ ಉಂಟಾಗಿದ್ದ ಭೀಕರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ವಿ.ಡಿ. ಸತೀಶನ್ ಅವರು ವಿಶೇಷ ಖಾಸಗಿ ವಿಮಾನದಲ್ಲಿ (Private Jet) ಪ್ರಯಾಣ ಬೆಳೆಸಿದ್ದು ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿತ್ತು. ಆ ಸಂದರ್ಭದಲ್ಲಿ ತಮ್ಮ ಖಾಸಗಿ ವಿಮಾನದ ಪ್ರಯಾಣವನ್ನು ಸಮರ್ಥಿಸಿಕೊಂಡಿದ್ದ ಸತೀಶನ್, "ಈ ವಿಮಾನ ಪ್ರಯಾಣವನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ಪಾನ್ಸರ್ ಮಾಡಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಆದರೆ, ಆ ಲಕ್ಷಾಂತರ ರೂಪಾಯಿ ಮೌಲ್ಯದ ವಿಮಾನ ಪ್ರಯಾಣವನ್ನು ಅವರಿಗೆ ಸ್ಪಾನ್ಸರ್ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಅವರು ಇದುವರೆಗೂ ಎಲ್ಲೂ ಬಹಿರಂಗಪಡಿಸಿಲ್ಲ.
ಇದೀಗ 1.08 ಲಕ್ಷ ರೂಪಾಯಿ ಬೆಲೆಯ ಈ ಐಷಾರಾಮಿ ಸ್ವಿಚ್ ವಾಚ್ ಅನ್ನು ಉಡುಗೊರೆಯಾಗಿ ನೀಡಿದ ಶಕ್ತಿ ಯಾವುದು ಎಂಬ ಪ್ರಶ್ನೆಯನ್ನು ನೆಟ್ಟಿಗರು ಹಾಗೂ ರಾಜಕೀಯ ಎದುರಾಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎತ್ತುತ್ತಿದ್ದು, ಈ ವಿಷಯ ಕೇರಳ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ವಿಡಿ ಸತೀಶನ್ ವಾಚ್ ವಿಚಾರ ವೈರಲ್ ಆಗುತ್ತಿದ್ದಂತೆ ಕರ್ನಾಟಕದಲ್ಲಿ 10 ವರ್ಷದ ಹಿಂದೆ ನಡೆದಿದ್ದ ಇಂಥದ್ದೇ ವಿಚಾರ ಕನ್ನಡಿಗರಿಗೆ ನೆನಪಾಗಿದೆ. ಹ್ಯುಬ್ಲೋಟ್ (Hublot) ವಾಚ್ ವಿವಾದ ಕರ್ನಾಟಕ ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ತೀವ್ರ ಚರ್ಚೆಗೆ ಈಡಾಗಿದ್ದ ರಾಜಕೀಯ ವಿದ್ಯಮಾನ. 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಜ್ರಖಚಿತ ಹ್ಯುಬ್ಲೋಟ್ ಕಂಪನಿಯ ಐಷಾರಾಮಿ ಕೈಗಡಿಯಾರವನ್ನು (Watch) ಧರಿಸಿದ್ದರು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಈ ವಾಚ್‌ನ ಮೌಲ್ಯ ಸುಮಾರು ₹70 ಲಕ್ಷ ಎಂದು ಆರೋಪಿಸಿ, ಸಿದ್ದರಾಮಯ್ಯನವರ "ಸಮಾಜವಾದಿ" ತತ್ವವನ್ನು ಪ್ರಶ್ನಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯನವರು, ದುಬೈನಲ್ಲಿ ನೆಲೆಸಿರುವ ತಮ್ಮ ಆಪ್ತ ಸ್ನೇಹಿತ ಹಾಗೂ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ಗಿರೀಶ್ ಚಂದ್ರ ವರ್ಮಾ ಅವರು ಇದನ್ನು ತಮಗೆ ಉಡುಗೊರೆಯಾಗಿ (Gift) ನೀಡಿದ್ದರು ಎಂದು ತಿಳಿಸಿದ್ದರು. ಅಲ್ಲದೆ ಇದರ ಮೌಲ್ಯ ಪ್ರತಿಪಕ್ಷಗಳು ಹೇಳುವಷ್ಟಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ, ಸಿದ್ದರಾಮಯ್ಯನವರು ಅಂದಿನ ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈ ಹ್ಯುಬ್ಲೋಟ್ ವಾಚ್ ಅನ್ನು ಹಸ್ತಾಂತರಿಸಿದರು. ಇದನ್ನು "ರಾಜ್ಯದ ಸಾರ್ವಜನಿಕ ಆಸ್ತಿ" (State Asset) ಎಂದು ಘೋಷಿಸಿ, ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಇಡಲು ಸೂಚಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ