ಉತ್ತರಕಾಶಿಯಲ್ಲಿ ಭೀಕರ ಭೂಕುಸಿತಕ್ಕೆ ಕಾರಣವಾದ ಮೇಘಸ್ಫೋಟ; ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

Published : Aug 05, 2025, 03:05 PM ISTUpdated : Aug 05, 2025, 03:15 PM IST
cloudburst

ಸಾರಾಂಶ

ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವು ಮೇಘಸ್ಫೋಟ ಮತ್ತು ಪ್ರವಾಹದಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಹಲವಾರು ಮನೆಗಳು, ಅಂಗಡಿಗಳು ಕೊಚ್ಚಿಹೋಗಿದ್ದು, ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ.

ಡೆಹ್ರಾಡೂನ್‌ (ಆ.5): ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಮಂಗಳವಾರ ಮೇಘಸ್ಫೋಟದಿಂದ ಉಂಟಾದ ವಿನಾಶಕಾರಿ ಹಠಾತ್ ಪ್ರವಾಹದಿಂದಾಗಿ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ಇದು ಗಂಗೋತ್ರಿ ಧಾಮಕ್ಕೆ ಹೋಗುವ ದಾರಿಯಲ್ಲಿ ಪ್ರಮುಖ ನಿಲ್ದಾಣವಾಗಿದೆ.ಜಿಲ್ಲಾ ಪೊಲೀಸರ ಪ್ರಕಾರ, ಹರ್ಸಿಲ್ ಪ್ರದೇಶದ ಖೀರ್ ಗಢ್ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಯಾಗಿದ್ದು, ಬಹುತೇಕ ಈ ಗ್ರಾಮವೇ ಇರುವುದು ಅನುಮಾನ ಎಂದು ಅಂದಾಜಿಸಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಸೇನೆ ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಧರಾಲಿ ಗ್ರಾಮಕ್ಕೆ ಹರಿದು ಬಂದ ಪ್ರವಾಹದ ನೀರು, ಮನೆಗಳು, ಅಂಗಡಿಗಳು ಮತ್ತು ರಸ್ತೆಗಳನ್ನು ಕೊಚ್ಚಿಹಾಕಿದೆ. ಇಡೀ ಊರಿನ ತುಂಬಾ ಬರೀ ಅವಶೇಷಗಳು ಹಾಗೂ ಮಣ್ಣಿನ ಜಾಡನ್ನು ಮಾತ್ರವೇ ಬಿಟ್ಟಿದೆ. ಇದರ ಭೀಕರತೆ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಲವು ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ನಾಶವಾಗಿವೆ.

10 ರಿಂದ 12 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಇದಲ್ಲದೆ, ಬಾರ್ಕೋಟ್ ತೆಹ್ಸಿಲ್‌ನ ಬನಾಲಾ ಪಟ್ಟಿ ಪ್ರದೇಶದಲ್ಲಿ, ಉಕ್ಕಿ ಹರಿಯುತ್ತಿರುವ ಕುಡ್ ಗಧೇರಾ ಹೊಳೆಯಲ್ಲಿ ಸುಮಾರು 18 ಮೇಕೆಗಳು ಕೊಚ್ಚಿ ಹೋಗಿವೆ.

ಆಗಸ್ಟ್ 10 ರವರೆಗೆ ಉತ್ತರಾಖಂಡದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ. ಹರ್ಸಿಲ್ ಮತ್ತು ಭಟ್ವಾರಿಯಿಂದ ರಕ್ಷಣಾ ತಂಡಗಳನ್ನು ರವಾನಿಸಲಾಗಿದ್ದು, ಸಿಕ್ಕಿಬಿದ್ದಿರುವವರನ್ನು ಪತ್ತೆ ಹಚ್ಚಲು ಮತ್ತು ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ.

ಇಡೀ ಉತ್ತರ ಭಾರತದಲ್ಲಿ ವರುಣಾರ್ಭಟ

ಕಳೆದ 2 ದಿನಗಳಿಂದ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದೆ. ಮಂಗಳವಾರ, ಉತ್ತರಕಾಶಿ ಜಿಲ್ಲೆಯ ಧರಾಲಿಯ ಖೀರ್ ಗಂಗಾದಲ್ಲಿ ಮೇಘಸ್ಫೋಟದಿಂದಾಗಿ, ಇಡೀ ಗ್ರಾಮವು ಪ್ರವಾಹ ಮತ್ತು ಅವಶೇಷಗಳಿಂದ ತುಂಬಿ ಹೋಗಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳ ಜೊತೆಗೆ, ಸೈನ್ಯವನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ.

ಇನ್ನು ಮುಂಗಾರು ಮಳೆಯಿಂದಾಗಿ ಯುಪಿ-ಬಿಹಾರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಇದೆ. ಮುಂಗೇರ್, ಬಕ್ಸಾರ್, ಪೂರ್ಣಿಯಾ, ಭೋಜ್‌ಪುರ, ಪಾಟ್ನಾ ಸೇರಿದಂತೆ ಬಿಹಾರದ ಹಲವು ಜಿಲ್ಲೆಗಳಲ್ಲಿ ನೂರಾರು ಗ್ರಾಮಗಳು ಮುಳುಗಿವೆ. ಬಿಹಾರದ ಪೂರ್ಣಿಯಾದಲ್ಲಿ 38 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ. ಭಾನುವಾರದಿಂದ ಸೋಮವಾರದವರೆಗೆ ಇಲ್ಲಿ 270.6 ಮಿಮೀ ಮಳೆಯಾಗಿದೆ. ಇದಕ್ಕೂ ಮೊದಲು, 1987 ರಲ್ಲಿ 294.9 ಮಿಮೀ ಮಳೆ ದಾಖಲಾಗಿತ್ತು.

ಉತ್ತರ ಪ್ರದೇಶದಲ್ಲಿ, ಪ್ರಯಾಗ್‌ರಾಜ್, ವಾರಣಾಸಿ ಸೇರಿದಂತೆ 17 ಜಿಲ್ಲೆಗಳ 402 ಗ್ರಾಮಗಳು ಪ್ರವಾಹದ ಹಿಡಿತದಲ್ಲಿವೆ. ಇಲ್ಲಿಯವರೆಗೆ, ಮಳೆಯಿಂದಾಗಿ 343 ಮನೆಗಳು ಕುಸಿದಿವೆ. ಕಳೆದ 24 ಗಂಟೆಗಳಲ್ಲಿ, ಪ್ರವಾಹ-ಮಳೆ ಸಂಬಂಧಿತ ಅಪಘಾತಗಳಲ್ಲಿ 16 ಜನರು ಸಾವನ್ನಪ್ಪಿದ್ದಾರೆ. ಜಾನ್‌ಪುರ, ಚಂದೌಲಿ, ಸುಲ್ತಾನ್‌ಪುರ, ಕಾನ್ಪುರ, ಪಿಲಿಭಿತ್ ಮತ್ತು ಸೋನ್‌ಭದ್ರದಲ್ಲಿ ಆಗಸ್ಟ್ 5 ರವರೆಗೆ, ವಾರಣಾಸಿ, ಹಮೀರ್‌ಪುರ ಮತ್ತು ಲಖಿಂಪುರದಲ್ಲಿ ಆಗಸ್ಟ್ 6 ರವರೆಗೆ ಮತ್ತು ಪ್ರಯಾಗ್‌ರಾಜ್ ಮತ್ತು ಮಿರ್ಜಾಪುರದಲ್ಲಿ ಆಗಸ್ಟ್ 7 ರವರೆಗೆ ಶಾಲಾ ರಜೆಗಳನ್ನು ವಿಸ್ತರಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ 310 ರಸ್ತೆಗಳು ಮುಚ್ಚಲ್ಪಟ್ಟಿವೆ. ಸೋಮವಾರ ಮಳೆಯ ನಂತರ ಶಿಮ್ಲಾದಲ್ಲಿ 3 ಮನೆಗಳ ಮೇಲೆ ಭೂಕುಸಿತ ಸಂಭವಿಸಿದೆ. ಒಂದು ದಿನ ಮೊದಲು ಜನರು ತಮ್ಮ ಮನೆಗಳನ್ನು ತೊರೆದಿದ್ದರು. ನಿನ್ನೆ ರಾತ್ರಿ ಭಾರೀ ಮಳೆಯ ನಂತರ ಚಂಡೀಗಢ-ಮನಾಲಿ ನಾಲ್ಕು ಪಥಗಳನ್ನು ಸಹ ಮುಚ್ಚಲಾಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನದಿಯಲ್ಲಿ ಕೊಚ್ಚಿಹೋಗಿ 3 ಜನರು ಸಾವನ್ನಪ್ಪಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್