
ಲಕ್ನೋ: ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಎಂಬ ಮಾತಿದೆ. ಆದ್ರೆ ಇಂದು ದೇವರಿಗೆ ವಂಚನೆ ಮಾಡುವ ಕೆಲಸಗಾರರನ್ನು ಸರ್ಕಾರಿ ಇಲಾಖೆ ಹೊಂದಿದೆ. ಉತ್ತರ ಪ್ರದೇಶದ ಬಸ್ತಿ ಮಂಡಲದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂಜಿನಿಯರ್‌ಗಳು AI ಬಳಸಿ ಹಗರಣ ನಡೆಸಿದ್ದಾರೆ. AI ಫೋಟೋ ಬಳಸಿ ಒಳಚರಂಡಿ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಿಕೊಂಡಿದ್ದಾರೆ. ಕಾಲುವೆ ಸ್ವಚ್ಛಗೊಳಿಸೋದು, ಒಡ್ಡು ನಿರ್ಮಾಣ, ದುರಸ್ತಿ ಕಾರ್ಯದಲ್ಲಿ AI ಚಮತ್ಕಾರ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ಕಬಳಿಸಿದ್ದಾರೆ.
ಇಡೀ ಜಿಲ್ಲೆಯಲ್ಲಿ ಒಡ್ಡುಗಳನ್ನು ನಿರ್ಮಾಣ ಮಾಡುವ ಇಲಾಖೆಯಲ್ಲಿ ಬಜೆಟ್‌ನ ಶೇ.26ಕ್ಕಿಂತ ಅಂದ್ರೆ ₹ 1 ಕೋಟಿ 3 ಲಕ್ಷ 81 ಸಾವಿರ 62 ರೂಪಾಯಿ ಮೌಲ್ಯದ ಕಾಮಗಾರಿ ನಡೆಸಲಾಗಿದೆ. ಆದ್ರೆ ಈ ಎಲ್ಲಾ ಕಾಮಗಾರಿಗಳು ದಾಖಲೆಯಲ್ಲಿ ಮಾತ್ರ ದಾಖಲಾಗಿವೆ. ಆದ್ರೆ ನಿಜವಾಗಿ ಯಾವುದೇ ಕಾಮಗರಿ ನಡೆಯದಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಸರ್ಕಾರಕ್ಕೆ ದೂರು ದಾಖಲಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಹಗರಣ ಸಂಬಂಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅಮರ್ ಬಹದ್ದೂರ್ ಸಿಂಗ್ ಎಂಬವರು ಬಸ್ತಿ ವಿಭಾಗೀಯ ಆಯುಕ್ತ ಅಖಿಲೇಶ್ ಸಿಂಗ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಅಮರ್ ಬಹದ್ದೂರ್ ಸಿಂಗ್ ಪತ್ರದಲ್ಲಿ ಆಡಳಿತ ಸಿಬ್ಬಂದಿ ಮತ್ತು ಸರ್ಕಾರವನ್ನು ನೇರವಾಗಿ ಟೀಕಿಸಿದ್ದಾರೆ. ಅಮರ್ ಅವರ ಈ ಪತ್ರ ನೀರಾವರಿ ಇಲಾಖೆಯ ಕಾರಿಡಾರ್‌ಗಳಲ್ಲಿ ಕೋಲಾಹಲ ಉಂಟಾಗಿದೆ.
2025-26ರ ಹಣಕಾಸಿನ ವರ್ಷದಲ್ಲಿ ಅತಿದೊಡ್ಡ ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಲಾಗಿತ್ತು. ಅನುಮೋದನೆಯಾದ ಈ ಹಣವನ್ನು ಜಿಲ್ಲೆಯ ವಿವಿಧ ಉಪವಿಭಾಗಗಳಲ್ಲಿ ಒಡ್ಡು ದುರಸ್ತಿ ಮತ್ತು ಪ್ರವಾಹ ರಕ್ಷಣಾ ಕಾರ್ಯಗಳಿಗಾಗಿ ಮೀಸಲಿಡಲಾಗಿತ್ತು. ಆದರೆ ಇಲಾಖಾ ಅಧಿಕಾರಿಗಳು ಮತ್ತು ಆಯ್ದ ಗುತ್ತಿಗೆದಾರರ ನಡುವಿನ ಒಪ್ಪಂದದಿಂದಾಗಿ ಈ ಬಜೆಟ್‌ನ ಅತಿದೊಡ್ಡ ಮೊತ್ತವನ್ನು ನಾಲ್ಕನೇ ಉಪವಿಭಾಗದ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಆಗಸ್ಟ್ 19, 2025 ಮತ್ತು ನವೆಂಬರ್ 24, 2025 ರ ಅವಧಿಯಲ್ಲಿ ಪ್ರವಾಹ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬೇರೆ ಬೇರೆ ವೋಚರ್‌ಗಳ ಮೂಲಕ ಹಣವನ್ನು ಡ್ರಾ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾಮಗಾರಿ ಹೆಸರಿನಲ್ಲಿ ಹಣ ನೀರಿನಂತೆ ಹರಿಯುತ್ತಿದ್ರೂ ಕೆಲಸ ಮಾತ್ರ ಪರಿಣಾಮಕಾರಿಯಾಗಿ ನಡೆದಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಇಷ್ಟು ದೊಡ್ಡಮೊತ್ತದ ಬಿಲ್‌ಗಳು ಕ್ಲಿಯರ್ ಆಗುತ್ತಿದ್ರೂ ಮೊದಲ, ಎರಡನೇ ಮತ್ತು ಮೂರನೇ ಉಪವಿಭಾಗಗಳ ಅಡಿಯಲ್ಲಿರುವ ಹಲವಾರು ಪ್ರಮುಖ ಒಡ್ಡುಗಳು ಶಿಥಿಲಾವಸ್ಥೆಯಲ್ಲಿಯೇ ಉಳಿದಿವೆ. ಇವುಗಳ ರಿಪೇರಿ ಕೆಲಸವೇ ನಡೆದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಭ್ರಷ್ಟಾಚಾರದಿಂದಾಗಿ ಮಳೆಗಾಲದಲ್ಲಿ 12ಕ್ಕೂ ಅಧಿಕ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಅಪಾಯಗಳಿವೆ.
ಈ ಭ್ರಷ್ಟಾಚಾರದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಅಮರ್ ಬಹದ್ದೂರ್ ಸಿಂಗ್, ಕೆಲ ಗುತ್ತಿಗೆದಾರರು ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಕೇವಲ ಒಂದೇ ಒಂದು ಉಪವಿಭಾಗಕ್ಕೆ ಮಾತ್ರ ಬಿಲ್ ಕ್ಲಿಯರ್ ಮಾಡಿಕೊಳ್ಳಲು ಆದ್ಯತೆ ನೀಡಿದ್ದಾರೆ. ಹಣ ಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಸರ್ಕಾರ ಈ ಹಗರಣದ ಬಗ್ಗೆ ಉನ್ನತಮಟ್ಟದಲ್ಲಿ ತನಿಖೆ ನಡೆಸಬೇಕು. ಒಂದು ವೇಳೆ ತನಿಖೆ ನಡೆಸದಿದ್ರೆ 12ಕ್ಕೂ ಅಧಿಕ ಗ್ರಾಮಗಳಲ್ಲಿರುವ ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗುತ್ತವೆ. ಇದರಿಂದ ಗ್ರಾಮಸ್ಥರು ಪ್ರವಾಹದಲ್ಲಿ ಸಿಲುಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಸರ್ಕಾರಮಟ್ಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪವನ್ನು ಅಧಿಕಾರಿಗಳ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಆರಂಭದಲ್ಲಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಒಳಚರಂಡಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೃಪಾಶಂಕರ್ ಭಾರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಂತರ ಮುಖ ಮುಚ್ಚಿಕೊಂಡು ಓಡಿ ಹೋಗುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚೆಗೆ ಪ್ರಧಾನ ಕಚೇರಿಯ ನಿರ್ದೇಶನದ ಮೇರೆಗೆ ಈಗಾಗಲೇ ತನಿಖಾ ತಂಡವನ್ನು ರಚಿಸಲಾಗಿತ್ತು. ಕೆಲವು ದಿನಗಳ ಹಿಂದೆ ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ತಂಡವೂ ಸ್ಥಳವನ್ನು ಪರಿಶೀಲಿಸಿತು. ಎಲ್ಲಾ ಕೆಲಸಗಳನ್ನು ಮಾನದಂಡಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಕೆಲಸ ಮಾಡದೇ ಬಿಲ್ ಕ್ಲಿಯರ್ ಮಾಡಿದ್ರೆ, ನಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತವೆ ಎಂದು ಗಂಡಕ್ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ವಿಕಾಸ್ ಸಿಂಗ್ ಹೇಳುತ್ತಾರೆ. ಎಂಜಿನಿಯರ್ ಸುರೇಂದ್ರ ಮೋಹನ್ ವರ್ಮಾ ಎಂಬವರು ಇದೊಂದು ಗಂಭೀರವಾದ ಆರೋಪವಾಗಿದ್ದು, ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ