
ಲಖನೌ: ಯಾವುದೇ ವೀಸಾ ಮತ್ತು ಪಾಸ್‌ಪೋರ್ಟ್ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತ-ನೇಪಾಳ ಗಡಿ ದಾಟಲು ಯತ್ನಿಸುತ್ತಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ 36 ವರ್ಷದ ಜೋರ್ಡಾನ್ ಬ್ರೌನ್ ಎಂಬ ಶಂಕಿತ ವ್ಯಕ್ತಿಯನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ವಿಚಾರಣೆ ವೇಳೆ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ಆತನಿಗೆ ಬೆಂಗಳೂರು ಮತ್ತು ಗೋವಾ ಮೂಲದ ಸಂಪರ್ಕಗಳಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಘಟನೆ ಭಾರತೀಯ ಆಂತರಿಕ ಭದ್ರತಾ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಸೋನೌಲಿ ಕೊಟ್ವಾಲಿ ವ್ಯಾಪ್ತಿಯ ಭಗವಾನ್‌ಪುರ ಪೊಲೀಸ್ ಹೊರಠಾಣೆಯ ಅಡಿಯಲ್ಲಿ ಬರುವ ಅಂತರರಾಷ್ಟ್ರೀಯ ಗಡಿ ಸ್ತಂಭ ಸಂಖ್ಯೆ 516ರ ಬಳಿ ಈ ಘಟನೆ ನಡೆದಿದೆ. ಕೇವಲ ನಿಕ್ಕರ್ ಧರಿಸಿ ಅನಧಿಕೃತ ಪಾದಚಾರಿ ಮಾರ್ಗದ ಮೂಲಕ ನೇಪಾಳಕ್ಕೆ ನುಸುಳಲು ಯತ್ನಿಸುತ್ತಿದ್ದ ಈ ವಿದೇಶಿ ಪ್ರಜೆಯನ್ನು 'ಸಶಸ್ತ್ರ ಸೀಮಾ ಬಲ' (SSB) 22ನೇ ಬೆಟಾಲಿಯನ್ ಯೋಧರು ಗಮನಿಸಿ ತಡೆದಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಆತ ತಪ್ಪಿಸಿಕೊಂಡು ಓಡಲಾರಂಭಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಯೋಧರು ಆತನನ್ನು ಬೆನ್ನಟ್ಟಿ ಹಿಡಿದು, ಕಾಲಿಗೆ ಹಗ್ಗ ಕಟ್ಟಿ ಕರೆದೊಯ್ದಿದ್ದಾರೆ. ಈ ವೇಳೆ ಗ್ರಾಮಸ್ಥರು ಹಿಂಬಾಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ಬಂಧಿತನಿಂದ 2 ಸ್ಮಾರ್ಟ್‌ಫೋನ್‌ಗಳು ಹಾಗೂ 31,460 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಜೋರ್ಡಾನ್ ಬ್ರೌನ್ ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ ಭಾರತದ ಪ್ರಮುಖ ನಗರಗಳಾದ ಗೋವಾ ಮತ್ತು ಬೆಂಗಳೂರಿನಲ್ಲಿ ಬರೋಬ್ಬರಿ 8 ತಿಂಗಳ ಕಾಲ ತಂಗಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಆತ ಜುಲೈ 8 ರಂದು ಬೆಂಗಳೂರಿನಿಂದ ಲಕ್ನೋಗೆ ಬಸ್ ಮೂಲಕ ಪ್ರಯಾಣಿಸಿ, ಅಲ್ಲಿಂದ ಗೋರಖ್‌ಪುರ ತಲುಪಿದ್ದ. ಬಳಿಕ ಅಲ್ಲಿಂದ ಟ್ಯಾಕ್ಸಿ ಮಾಡಿಕೊಂಡು ಸೋನೌಲಿ ಗಡಿಗೆ ಬಂದಿಳಿದಿದ್ದ.
ಸೋನೌಲಿ ಠಾಣೆಯ ಪೊಲೀಸ್ ಅಧಿಕಾರಿ ಮಹೇಂದ್ರ ಮಿಶ್ರಾ ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಜೋರ್ಡಾನ್ ಬ್ರೌನ್ ವಿಚಾರಣೆ ವೇಳೆ ತನಿಖಾ ಸಂಸ್ಥೆಗಳಿಗೆ ಯಾವುದೇ ತೃಪ್ತಿದಾಯಕ ಪ್ರತಿಕ್ರಿಯೆ ನೀಡಿಲ್ಲ. ತನ್ನ ಪ್ರಯಾಣದ ಇತಿಹಾಸ ಮತ್ತು ಭೇಟಿಯ ಉದ್ದೇಶದ ಬಗ್ಗೆ ಪರಸ್ಪರ ಸಂಬಂಧವೇ ಇಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ.
ತಾನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದಿದ್ದು, ಯುಎಸ್ ನೌಕಾಪಡೆ (US Navy) ಮತ್ತು ವಿಶೇಷ ಪಡೆಗಳಲ್ಲಿ (Special Forces) 6 ವರ್ಷಗಳ ಕಾಲ ಸೇವೆ ಸಲ್ಲಿಸಿ 2 ವರ್ಷಗಳ ಹಿಂದೆ ನಿವೃತ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಒಮ್ಮೆ ತಾನು ಪ್ರವಾಸಿ ವೀಸಾದಲ್ಲಿ ಥಾಯ್ಲೆಂಡ್‌ಗೆ ಹೋಗಿದ್ದಾಗ ದಾಖಲೆಗಳು ಕಳುವಾದವು, ನಂತರ ದೋಣಿಯ ಮೂಲಕ ಶ್ರೀಲಂಕಾ ತಲುಪಿ ಅಲ್ಲಿಂದ ಭಾರತಕ್ಕೆ ಬಂದೆ ಎನ್ನುತ್ತಾನೆ. ಮತ್ತೊಮ್ಮೆ, ಮೇ ತಿಂಗಳಲ್ಲಿ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಿ ಅಲ್ಲಿಂದ ಭಾರತಕ್ಕೆ ಬಂದೆ ಎಂದು ಹೇಳುತ್ತಿದ್ದಾನೆ.
ತನ್ನ ಪಾಸ್‌ಪೋರ್ಟ್ ಬೆಂಗಳೂರಿನಲ್ಲಿರುವ ಪರಿಚಯಸ್ಥರೊಬ್ಬರ ಬಳಿ ಇದೆ ಎಂದಿದ್ದಾನೆ. ಆದರೆ ಆ ಪರಿಚಯಸ್ಥರ ವಿಳಾಸ ನೀಡಲು ವಿಫಲನಾಗಿದ್ದಾನೆ. ಗೋವಾದಲ್ಲಿ ಪರಿಚಯವಾಗಿದ್ದ "ನಾಜ್" ಎಂಬ ನೇಪಾಳಿ ಪ್ರಜೆಯನ್ನು ಭೇಟಿ ಮಾಡಲು ನೇಪಾಳಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. 3 ವರ್ಷಗಳ ಹಿಂದೆ ಇಟಲಿಯಲ್ಲಿ ಪರಿಚಯವಾಗಿದ್ದ ಉತ್ತರಾಖಂಡ ಮೂಲದ ಯೋಗ ಶಿಕ್ಷಕಿಯನ್ನು 2024ರ ಅಕ್ಟೋಬರ್‌ನಲ್ಲಿ ವಿವಾಹವಾಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಈ ಸೂಕ್ಷ್ಮ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ರಾಯಭಾರಿ ದೀಪಕ್ ವೋಹ್ರಾ ಅವರು ಇದೊಂದು ಗಂಭೀರ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಂಧಿತ ಅಮೆರಿಕ ಪ್ರಜೆ ಭಾರತದ ಆಂತರಿಕ ಭದ್ರತೆಗೆ ಸಂಬಂಧಿಸಿದ ನಿರ್ಣಾಯಕ ಅಥವಾ ದುರ್ಬಲ ಅಂಶಗಳ ಬಗ್ಗೆ ರಹಸ್ಯ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದ್ದ ಸಾಧ್ಯತೆ ದಟ್ಟವಾಗಿದೆ. ಇತರ ಹಲವು ದೇಶಗಳಂತೆ ಅಮೆರಿಕ ಕೂಡ ಭಾರತದ ಭದ್ರತಾ ವ್ಯವಸ್ಥೆಯ ಸೂಕ್ಷ್ಮ ವಿವರಗಳನ್ನು ತಿಳಿಯಲು ಬಯಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಆದರೆ ನಮ್ಮ ಆಂತರಿಕ ಭದ್ರತಾ ಮೂಲಸೌಕರ್ಯ ಮತ್ತು ಗಡಿ ಕಾವಲು ಅತ್ಯಂತ ಬಲಿಷ್ಠವಾಗಿದೆ ಎಂಬುದಕ್ಕೆ ಈ ಬಂಧನವೇ ಸಾಕ್ಷಿ.
ವಿದೇಶಿ ಪ್ರಜೆ ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವುದರಿಂದ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳು ಆತನ ಗುರುತು ಮತ್ತು ಪ್ರಯಾಣದ ಮಾರ್ಗದ ಪ್ರತಿಯೊಂದು ಹಂತವನ್ನು ತೀವ್ರ ತನಿಖೆಗೆ ಒಳಪಡಿಸಿವೆ. ಸೋನೌಲಿ ಪೊಲೀಸ್ ಠಾಣೆಯಲ್ಲಿ ವಿದೇಶಿಯರ ಕಾಯ್ದೆ ಹಾಗೂ ಅಕ್ರಮ ಪ್ರವೇಶದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ (Embassy) ಈ ಕುರಿತು ಅಧಿಕೃತ ಮಾಹಿತಿ ನೀಡಲಾಗಿದ್ದು, ಸದ್ಯ ಶಂಕಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ