
ಲಕ್ನೋ(ಜು..27): ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ 10 ಪೊಲೀಸರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಸೋಮವಾರ, ಈ ಯುವಕ ಹಾಗೂ ಕೆಲ ಪೊಲೀಸರ ಮಧ್ಯೆ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಜಗಳವಾಗಿತ್ತು. ಇದಾದ ಬೆನ್ನಲ್ಲೇ ಸೋಮವಾರ ರಾತ್ರಿ ಯುವಕ ತನ್ನ ಗ್ರಾಮದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಪ್ರಕರಣದಲ್ಲಿ ಭಾಗಿಯಾದ 10 ಮಂದಿ ಪೊಲೀಸರಲ್ಲಿ, ಐವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ವರ್ತನೆಯಿಂದ ಆತ ಆತ್ಮಹತ್ಯೆ ಮಾಡುವ ಹೆಜ್ಜೆ ಇಟ್ಟಿದ್ದಾನೆ ಎಂದು ಯುವಕರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ 'ಯಾವುದೇ ಕಾರಣವಿಲ್ಲದೆ' ಪೊಲೀಸರು ಯುವಕನನ್ನು ಥಳಿಸಿದ್ದಾರೆ. ಸಾಲದೆಂಬಂತೆ ಅವರ ಮನೆಗೆ ಬಂದು ತಾಯಿಯನ್ನು ಸಹ ಥಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ನಡೆದ ಘಟನೆಯ 90 ಸೆಕೆಂಡುಗಳ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಕನಿಷ್ಠ ಇಬ್ಬರು ಪೊಲೀಸರು ಯುವಕರನ್ನು ಬಂಧಿಸಲು ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಬ್ಬ ವ್ಯಕ್ತಿ ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಪೊಲೀಸರು ಅವನನ್ನು ದೂರ ತಳ್ಳಿದ್ದಾರೆ. ತನ್ನನ್ನು ಪೊಲೀಸರಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಯುವಕ ಕೇಂದ್ರದಿಂದ ಓಡಿಹೋಗಿದ್ದಾನೆ.
ಪೊಲೀಸರಿಗೆ ಈ ಬಗ್ಗೆ ಮೃತನ ತಂದೆ ದೂರು ನೀಡಿದ್ದು, ಇದರಲ್ಲಿ ವೈದ್ಯಕೀಯ ಸಿಬ್ಬಂದಿ ತನ್ನ ಮಗನ ಹೆಸರನ್ನು ಕರೆದಿದ್ದಾರೆ. ಈ ವೇಳೆ ಒಳ ಹೋಗಲು ತಯಾರಾದಾಗ ಪೊಲೀಸರು ಆತನನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. 'ಪೊಲೀಸರು ನನ್ನ ಮಗನನ್ನು ತಡೆದರು. ಕಾರಣ ಹೇಳಿದಾಗ, ಅವರು ಅವನನ್ನು ಹೊಡೆಯಲು ಪ್ರಾರಂಭಿಸಿದರು. ನಂತರ ಆತನನ್ನು ಬೇರೆ ಕೋಣೆಗೆ ಕರೆದೊಯ್ದು ಕೋಲುಗಳಿಂದ ಹೊಡೆದರು. ನಾವು ಅವನನ್ನು ಹೇಗಾದರೂ ಮಾಡಿ ಅಲ್ಲಿಂದ ಹೊರಟೆವು. ಆದರೆ ಸಂಜೆ ಅನೇಕ ಪೊಲೀಸರು ನಮ್ಮ ಮನೆಗೆ ಬಂದು ನನ್ನ ಹೆಂಡತಿಯನ್ನೂ ಹೊಡೆದರು. ನನ್ನ ಮಗ ಈ ವೇಳೆ ಭಯಬಿದ್ದು ಓಡಿ ಹೋದ, ಬಳಿಕ ಆತನ ಮೃತದೇಹ ಪತ್ತೆಯಾಗಿದೆ ಎಂದಿದ್ದಾರೆ.
ಈ ವಿಷಯದಲ್ಲಿ ಬಾಗಪತ್ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿಕೆ ನೀಡಿದ್ದು, 'ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ ಹಾಗೂ 10 ಪೊಲೀಸರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ವಿಷಯದಲ್ಲಿ ನಾವು ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ