ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!

By Precilla Olivia DiasFirst Published Nov 23, 2019, 2:45 PM IST
Highlights

ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಯಾರೂ ಊಹಿಸದ ಬೆಳವಣಿಗೆ| ಸಿಎಂ ಆಗಿ ದೇವೇಂದ್ರ ಫಡ್ನವೀಸ್, ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣವಚನ| ಮಹಾರಾಷ್ಟ್ರ ರಾಜಕೀಯದಲ್ಲಿ ಕೊಂಗ್ ಮೇಕರ್ ಆದ ಅಜಿತ್ ಪವಾರ್ ಯಾರು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ

ಮುಂಬೈ[ನ.23]: ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಯಾರೂ ಊಹಿಸದ ಬೆಳವಣಿಗೆಗಳು ನಡೆದಿವೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತ್ತ NCP ನಾಯಕ ಅಜಿತ್ ಪವಾರ್ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗ್ಗೆ ಸುಮಾರು 8 ಗಂಟೆಗೆ ಮಹಾರಾಷ್ಟ್ರದ ರಾಜಭವನದಲ್ಲಿ ರಾಜ್ಯಪಾಲ ಬಿ. ಎಸ್. ಕೋಶ್ಯಾರಿ ಈ ಇಬ್ಬರೂ ನಾಯಕರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಇಂದು, ಶನಿವಾರ ಮುಂಜಾನೆವರೆಗೂ ಶಿವಸೇನೆ, ಕಾಂಗ್ರೆಸ್ ಹಾಗೂ NCP ಸರ್ಕಾರ ರಚಿಸಲಿದೆ ಎಂದೇ ಭಾವಿಸಲಾಗಿತ್ತು. ಈ ಪಕ್ಷದ ಮುಖಂಡರು ಶಿವಸೇನೆ ನಾಯಕ ಉದ್ಧವ್ ಠಾಕ್ರೆಗೆ ಸಿಎಂ ಆಗಲು ಗ್ರೀನ್ ಸಿಗ್ನಲ್ ನೀಡಿದ್ದವು. ಅಲ್ಲದೇ ಇಂದು ರಾಜ್ಯಪಾರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಅಜಿತ್ ಪವಾರ್ 'ಕಿಂಗ್ ಮೇಕರ್' ಆಗಿ ಹೊರ ಹೊಮ್ಮಿದ್ದು, ಮಹಾರಾಷ್ಟ್ರ ಸರ್ಕಾರ ರಚಿಸುವ ಸಮೀಕರಣವನ್ನೇ ಬುಡಮೇಲು ಮಾಡಿದ್ದಾರೆ.

ನನ್ನನ್ನು ಸೇರಿದಂತೆ ರಾಜಕಾರಣದಲ್ಲಿ ಯಾರೂ ನೈತಿಕತೆ ಉಳಿಸಿಕೊಂಡಿಲ್ಲ: ಎಚ್‌ಡಿಕೆ!

ಅಜಿತ್ ಪವಾರ್, ಶರದ್ ಪವಾರ್ ಹಿರಿಯಣ್ಣ ಅನಂತ್ ರಾವ್ ಪವಾರ್ ಮಗ. 1959ರ ಜುಲೈ 22 ಜನಿಸಿದ ಅಜಿತ್ ಪವಾರ್ ತಂದೆ, ಪ್ರಖ್ಯಾತ ಸಿನಿಮಾ ನಿರ್ದೇಶಕ ವಿ. ಶಾಂತಾರಾಮ್ ಜೊತೆ ಕೆಲಸ ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಅನಂತ್ ರಾವ್ ಪವಾರ್ ತನ್ನ ಮಗ ಅಜಿತ್ ಪವಾರ್ ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಆಸೆ ಹೊಂದಿದ್ದರು. ಆದರೆ ಅಜಿತ್ ಮಾತ್ರ ತನ್ನ ಚಿಕ್ಕಪ್ಪನ ಹಾದಿ ಹಿಡಿದರು. 1982ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅಜಿತ್ ಪವಾರ್, ಕೋ- ಆಪರೇಟಿವ್ ಫ್ಯಾಕ್ಟರಿಯ ಆಡಳಿತ ಮಂಡಳಿಯ ಸದಸ್ಯರಾದರು. ಬಳಿಕ ಪುಣೆ ಜಿಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಚೇರ್ಮನ್ ಆಗಿಯೂ ಆಯ್ಕೆಯಾದರು. ಹೀಗಿರುವಾಗಲೇ ಬಾರಾಮತಿ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿಯೂ ಆಯ್ಕೆಯಾದರು.  ಬಳಿಕ ಅವರು ತನ್ನ ಚಿಕ್ಕಪ್ಪ ಶರದ್ ಪಾವರ್ ಗಾಗಿ ಈ ಕ್ಷೇತ್ರವನ್ನು ಬಿಟ್ಟುಕೊಟ್ಟರು.

7 ಬಾರಿ ಶಾಸಕರಾಗಿ ಆಯ್ಕೆ

ಅಜಿತ್ ಪವಾರ್ ರಾಜಕೀಯ ತವರು ಕ್ಷೇತ್ರ ಬಾರಾಮತಿ, ಶರದ್ ಪವಾರ್ ಕೂಡಾ ಇದೇ ಕ್ಷೇತ್ರದಿಂದ ರಾಜಕೀಯ ವೃತ್ತಿ ಆರಂಭಿಸಿದ್ದರು ಎಂಬುವುದು ಉಲ್ಲೇಖಲನೀಯ. ಅಜಿತ್ ಪವಾರ್ 1991 ರಿಂದ ಈವರೆಗೆ ಒಟ್ಟು 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2010ರಲ್ಲಿ ಕಾಂಗ್ರೆಸ್ ಹಾಗೂ NCP ಮೈತ್ರಿ ಸರ್ಕಾರ ಅಧಿಕಾರಕ್ಕೇರಿದಾಗ ಅಜಿತ್ ಪವಾರ್ ಮೊದಲ ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ 2012ರ ಸಪ್ಟೆಂಬರ್ ನಲ್ಲಿ ಹಗರಣ ಒಂದರಲ್ಲಿ ಹೆಸರು ತಳುಕು ಹಾಕಿದ್ದ ಪರಿಣಾಮ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಯ್ತು. ಬಳಿಕ NCP ಶ್ವೇತಪತ್ರ ಜಾರಿಗೊಳಿಸಿ ಅಜಿತ್ ಪವಾರ್ ಯಾವುದೇ ತಪ್ಪು ಮಾಡಿಲ್ಲ ಎಂದಿತ್ತು.

'ಮಹಾಶಯರು 9 ಗಂಟೆವರೆಗೆ ನಮ್ಮೊಂದಿಗೇ ಇದ್ರು ಬಳಿಕ ನಾಪತ್ತೆ, ಮೊಬೈಲೂ ಸ್ವಿಚ್ ಆಫ್'!

ವಿವಾದಗಳ ಸರಮಾಲೆ

* ಅಜಿತ್ ಪವಾರ್ ಹೆಸರು ಹಲವಾರು ವಿವಾದಗಳಲ್ಲಿ ತಳಕು ಹಾಕಿದೆ. ಮಹಾರಾಷ್ಟ್ರದ 1500 ಕೋಟಿ ಮೊತ್ತದ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಹೆಸರು ಕೇಳಿ ಬಂದಿತ್ತು ಹಾಗೂ ಅವರು ಈ ಪ್ರಕರಣದ ಆರೋಪಿ ಕೂಡಾ ಹೌದು. 

* 2013 ರಲ್ಲಿ ಅಜಿತ್ ಪವಾರ್ ತಮ್ಮ ಹೇಳಿಕೆಯೊಂದರಿಂದ ಚರ್ಚೆಗೀಡಾಗಿದ್ದರು. ಅಂದು ಬರಗಾಲಕ್ಕೆ ಸಂಬಂಧಿಸಿದಂತೆ ನಡೆದ 55 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ ಕಾರ್ಯಕರ್ತನ ವಿರುದ್ಧ ಅಸಂಬದ್ಧ ಹೇಳಿಕೆಯೊಂದನ್ನು ನೀಡಿದ್ದರು. ಬಳಿಕ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದಾಗ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು.

* 2014ರಲ್ಲಿ ಬಾರಾಮತಿ ಕ್ಷೇತ್ರದ ಗ್ರಾಮಸ್ಥರನ್ನು ಬೆದರಿಸಿರುವ ಆರೋಪ ಜಿತ್ ಪವಾರ್ ವಿರುದ್ಧ ಕೇಳಿ ಬಂದಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ತನ್ನ ಚಿಕ್ಕಪ್ಪನ ಮಗಳು ಸುಪ್ರಿಯಾ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದ ಅಜಿತ್ ಅಲ್ಲಿನ ಗ್ರಾಮಸ್ಥರನ್ನು ಬೆದರಿಸಿದ್ದರು ಹಾಗೂ ಸುಪ್ರಿಯಾಗೆ ಮತ ನೀಡದಿದ್ದರೆ ನೀರು ಸರಬರಾಜು ನಿಲ್ಲಿಸುವುದಾಗಿ ಗುಡುಗಿದ್ದರು. 

ಆಪ್ತರು 'ದಾದಾ' ಎಂದೇ ಕರೆಯುತ್ತಾರೆ

ವಾಣಿಜ್ಯ ವಿಭಾಗದಲ್ಲಿ ಪದವಿಧರರಾಗಿರುವ ಅಜಿತ್ ಪವಾರ್ ತನ್ನ ಆಪ್ತ ವಲಯದಲ್ಲಿ 'ದಾದಾ' ಅಂದರೆ ಅಣ್ಣ ಎಂದೇ ಕರೆಸಿಕೊಳ್ಳುತ್ತಾರೆ. ಸುನೇತ್ರರನ್ನು ಮದುವೆಯಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ತೆರೆ ಮರೆಯಲ್ಲಿ  ಅಜಿತ್ ಪವಾರ್ ರವರ ಚುನಾವಣಾ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ಥಾರೆ ಹಾಗೂ ರಣತಂತ್ರವನ್ನು ಹೆಣೆಯುತ್ತಿರುವುದು ಸುನೇತ್ರ ಎಂದೇ ಹೇಳಲಾಗುತ್ತದೆ. ಕೃಷಿ ವಲಯದ ಕುರಿತಾಗಿಯೂ ಬಹಳಷ್ಟು ತಿಳಿದುಕೊಂಡಿರುವ ಅಜಿತ್ ಪವಾರ್ ತಮ್ಮನ್ನು ತಾವು ಓರ್ವ ಕೃಷಿ ತಜ್ಞ ಎಂದು ಕರೆಸಿಕೊಳ್ಳುತ್ತಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಹಲವು ಸುದ್ದಿಗಳು

click me!