ಘಟನೆ ಬಳಿಕ ಭದ್ರತಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರಾದರೂ ನಿವಾಸದ ಕಾವಲಿಗಿದ್ದ 22 ಭದ್ರತಾ ಸಿಬ್ಬಂದಿಗಳು 1,000ಕ್ಕೂ ಹೆಚ್ಚು ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪರದಾಡಿದ್ದಾರೆ. ಈ ವೇಳೆ ಜನರು ಮತ್ತು ಸಿಬ್ಬಂದಿ ಮಧ್ಯೆ ಭಾರೀ ಘರ್ಷಣೆ ನಡೆದಿದೆ.
ಇಂಫಾಲ್ (ಜೂನ್ 17, 2023): ಮೀಸಲು ವಿಚಾರಕ್ಕೆ ಆಂತರಿಕ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಇದೀಗ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಆರ್. ಕೆ ರಂಜನ್ ಸಿಂಗ್ ಮನೆ ಮೇಲೆ ದಾಳಿ ನಡೆಸಲಾಗಿದೆ. 1,200ಕ್ಕೂ ಹೆಚ್ಚು ಜನರ ಗುಂಪೊಂದು ಗುರುವಾರ ಸಂಜೆ ಪೆಟ್ರೋಲ್ ಬಾಂಬ್ ಎಸೆದು ಸಚಿವರ ಮನೆಗೆ ಬೆಂಕಿ ಹಚ್ಚಿದೆ.
ಘಟನೆ ಬಳಿಕ ಭದ್ರತಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರಾದರೂ ನಿವಾಸದ ಕಾವಲಿಗಿದ್ದ 22 ಭದ್ರತಾ ಸಿಬ್ಬಂದಿಗಳು 1,000ಕ್ಕೂ ಹೆಚ್ಚು ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಪರದಾಡಿದ್ದಾರೆ. ಈ ವೇಳೆ ಜನರು ಮತ್ತು ಸಿಬ್ಬಂದಿ ಮಧ್ಯೆ ಭಾರೀ ಘರ್ಷಣೆ ನಡೆದಿದೆ. ಇಂಫಾಲ್‌ನಲ್ಲಿ ಕರ್ಫ್ಯೂ ಇದ್ದರೂ ಇಷ್ಟೊಂದು ಜನರ ಗುಂಪು ಸಚಿವರ ಮನೆಗೆ ಏಕಾಏಕಿ ಬರಲು ಹೇಗೆ ಸಾಧ್ಯವಾಯಿತು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ಮನೆಯಲ್ಲಿದ್ದ ಹಲವಾರು ಬೆಲೆಬಾಳುವ ವಸ್ತುಗಳು ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಇದನ್ನು ಓದಿ: ಮಣಿಪುರದಲ್ಲಿ ಅಮಿತ್ ಶಾ ಶಾಂತಿ ಮಂತ್ರ: ಮೀಟಿ, ಕುಕಿ ಸಮುದಾಯದ ನಾಯಕರ ಜತೆ ಶಾಂತಿ ಸಭೆ
ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಂಜನ್ ಕೇರಳಕ್ಕೆ ಭೇಟಿ ನೀಡಿದ್ದ ವೇಳೆ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಕಾರ್ಯಕ್ರಮ ರದ್ದು ಮಾಡಿರುವ ಸಚಿವ ಮಣಿಪುರಕ್ಕೆ ಮರಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಂಜನ್ ‘ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ನಾನು ಶಾಂತಿ ತರುವಲ್ಲಿ ಪ್ರಯತ್ನಿಸುತ್ತಿದ್ದೇನೆ. ಗುರುವಾರ ರಾತ್ರಿ ಮಣಿಪುರದ ನನ್ನ ನಿವಾಸದಲ್ಲಿ ಘಟನೆ ನಡೆದಿದೆ. ಅದು ನನ್ನ ಸ್ವಂತ ದುಡಿಮೆಯ ಹಣದ ಮನೆ. ನಾನು ಭ್ರಷ್ಟನಲ್ಲ. ನಾನೂ ಹಿಂದೂ, ಮತ್ತು ದಾಳಿಕೋರರು ಹಿಂದೂ. ಹೀಗಾಗಿ ಇದು ಧಾರ್ಮಿಕ ದ್ವೇಷವಲ್ಲ. ಸಮುದಾಯಗಳ ನಡುವಿನ ತಪ್ಪು ತಿಳುವಳಿಕೆ’ ಎಂದಿದ್ದಾರೆ.
ಇದನ್ನೂ ಓದಿ: 4 ದಿನ ಮಣಿಪುರ ಪ್ರವಾಸದಲ್ಲಿ ಅಮಿತ್ ಶಾ: ಶಾಂತವಾಯ್ತು ಜನಾಂಗೀಯ ಸಂಘರ್ಷ
ಮೈತೇಯಿ ಸಮುದಾಯವನ್ನು ಪರಿಶಿಷ್ಠ ಪಂಗಡ ಸಮುದಾಯಕ್ಕೆ ಸೇರಿಸುವುದನ್ನು ವಿರೋಧಿಸಿ ಕುಕಿ ಸಮುದಾಯ ಹಿಂಸಾಚಾರ ನಡೆಸಲು ಪ್ರಾರಂಭಿಸಿತ್ತು. ಇದೀಗ ಎರಡೂ ಸಮುದಾಯಗಳು ದ್ವೇಷದಿಂದ ಪರಸ್ಪರ ದಾಳಿ ನಡೆಸುತ್ತಿದ್ದು ಬುಧವಾರವಷ್ಟೇ ರಾಜ್ಯದಲ್ಲಿ 9 ಜನರು ಮೃತಪಟ್ಟಿದ್ದಾರೆ. ಜೊತೆಗೆ ರಾಜ್ಯದ ಏಕೈಕ ಮಹಿಳಾ ಸಚಿವೆಯ ಮನೆಗೆ ಬೆಂಕಿ ಹಚ್ಚಲಾಗಿತ್ತು. ಕಳೆದ ಕೆಲ ತಿಂಗಳಿನಿಂದ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಇಬ್ಬರು ಬಲಿ; ಸೇನೆಯಿಂದ 40 ಕ್ಕೂ ಹೆಚ್ಚು ಉಗ್ರರ ಹತ್ಯೆ!