
ನವದೆಹಲಿ (ಮೇ 18, 2023): ಕಂಪ್ಯೂಟರ್, ಲ್ಯಾಪ್‌ಟಾಪ್‌ನಂಥ ಐಟಿ ಹಾರ್ಡ್‌ವೇರ್ ಉತ್ಪಾದನೆಗೆ ಸಹಾಯಧನ ಒದಗಿಸುವ ‘ಉತ್ಪಾದನೆ ಆಧರಿತ ಸಹಾಯಧನ’ (ಪಿಎಲ್‌ಐ) ಯೋಜನೆ 2ನೇ ಕಂತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಸಹಾಯ ಧನಕ್ಕೆಂದು 17 ಸಾವಿರ ಕೋಟಿ ರೂ. ನೀಡಲಿದೆ.
ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಹಾರ್ಡ್‌ವೇರ್‌ಗಳು ವಾರ್ಷಿಕ ಶೇ.17ರಷ್ಟು ಬೆಳವಣಿಗೆಯೊಂದಿಗೆ ಸ್ಥಿರವಾಗಿ ಬೆಳವಣಿಗೆ ಹೊಂದುತ್ತಿದೆ. 9 ಲಕ್ಷ ಕೋಟಿ ರೂ.ನಷ್ಟು ಪ್ರಗತಿಯನ್ನು ಸಾಧಿಸಿದೆ. ಹೀಗಾಗಿ ಇದು ಇನ್ನಷ್ಟು ಮುಂದುವರೆಯುವಂತೆ ನೋಡಿಕೊಳ್ಳಲು 17 ಸಾವಿರ ಕೋಟಿ ರೂ. ಸಹಾಯಧನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಮುಂದಿನ 6 ವರ್ಷ ಅವಧಿಗೆ ಕಂಪನಿಗಳಿಗೆ ಉತ್ಪಾದನೆ ಆಧರಿತ ಸಹಾಯಧನ ಲಭಿಸಲಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನು ಓದಿ: ಮೇ 28ಕ್ಕೆ ನೂತನ ಸಂಸತ್ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ
ಏನು ಸೌಲಭ್ಯ?:
‘ಪಿಎಲ್‌ಐ ಯೋಜನೆ ಲ್ಯಾಪ್‌ಟಾಪ್, ಆಲ್‌ಇನ್ ಒನ್ ಪಿಸಿ, ಸರ್ವರ್ ಮತ್ತು ಸೂಕ್ಷ್ಮ ಕಂಪ್ಯೂಟರ್ ಯಂತ್ರಗಳನ್ನು ಹೊಂದಿರಲಿದೆ. ಅಂದರೆ ಇವುಗಳನ್ನು ಉತ್ಪಾದಿಸಿದವರಿಗೆ ಉತ್ಪಾದನೆ ಆಧರಿತ ಸಹಾಯಧನ ದೊರಕಲಿದೆ. ಅಂದರೆ ತೆರಿಗೆ ವಿನಾಯ್ತಿಗಳು, ಸಬ್ಸಿಡಿ ಇತ್ಯಾದಿ ಸವಲತ್ತು ದೊರಕಲಿವೆ. ಇದರಿಂದ ಉತ್ಪಾದನಾ ಮೌಲ್ಯ 3.35 ಲಕ್ಷ ಕೋಟಿ ರೂ.ಗೆ ಹೆಚ್ಚಲಿದ್ದು, 2430 ಕೋಟಿ ರೂ. ಹೆಚ್ಚುವರಿ ಬಂಡವಾಳ ಹರಿದುಬರಲಿದೆ. 75 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ’ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
‘2021ರಲ್ಲಿ ಮೊದಲ ಪಿಎಲ್‌ಐ ಘೋಷಣೆ ಆಗಿ 7500 ಕೋಟಿ ರೂ. ನೀಡಲಾಗಿತ್ತು. ಆದರೆ ಇನ್ನಷ್ಟು ಹೆಚ್ಚು ಸಹಾಯಧನಕ್ಕೆ ಐಟಿ ಹಾರ್ಡ್‌ವೇರ್ ವಲಯದಿಂದ ಕೇಳಿಬಂದಿತ್ತು. ಹೀಗಾಗಿ ಪಿಎಲ್‌ಐ ಅವಧಿ ವಿಸ್ತರಿಸಿ 17 ಸಾವಿರ ಕೋಟಿ ರೂ. ಹೆಚ್ಚಿನ ಸಹಾಯಧನವನ್ನೂ ಪ್ರಕಟಿಸಲಾಗಿದೆ’ ಎಂದಿದೆ.
ಇದನ್ನೂ ಓದಿ: ಎಲ್ಲ ವೈದ್ಯರಿಗಿನ್ನು ವಿಶಿಷ್ಟ ಗುರುತು ಸಂಖ್ಯೆ ಕಡ್ಡಾಯ: ನಕಲಿ ವೈದ್ಯರ ಹಾವಳಿ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ
ಗೊಬ್ಬರಕ್ಕೆ 38 ಸಾವಿರ ಕೋಟಿ ರೂ. ಸಬ್ಸಿಡಿ
ಫಾಸ್ಪೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳಿಗೆ 38 ಸಾವಿರ ರು. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಈ ಮೂಲಕ 2023-24ನೇ ಸಾಲಿನಲ್ಲಿ ರಸಗೊಬ್ಬರದ ಸಹಾಯಧನ ಮೊತ್ತ ಒಟ್ಟಾರೆ 1.08 ಲಕ್ಷ ಕೋಟಿ ರೂ.ಗೆ ಏರಿದಂತಾಗಿದೆ.
ಯೂರಿಯಾ ರಸಗೊಬ್ಬರದ ಸಹಾಯಧನಕ್ಕಾಗಿ 2023-24ರ ಬಜೆಟ್‌ನಲ್ಲಿ 70 ಸಾವಿರ ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 38 ಸಾವಿರ ಕೋಟಿ ರೂ. ಸಹಾಯಧನ ಘೋಷಣೆ ಮಾಡಲಾಗಿದೆ. ಅಲ್ಲದೇ ಈ ಬಾರಿ ರಸಗೊಬ್ಬರಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದೂ ಸಹ ಕೇಂದ್ರ ಸರ್ಕಾರ ತಿಳಿಸಿದೆ. ಪ್ರಸ್ತುತ ಯೂರಿಯಾ ಬೆಲೆ ಪ್ರತಿ ಬ್ಯಾಗ್‌ಗೆ 276 ರು. ಹಾಗೂ ಡಿಎಪಿಗೆ 1,350 ರೂ. ಇದೆ. ಈ ಸಹಾಯಧನದಿಂದ 12 ಕೋಟಿ ರೈತರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: ರೋಗಿಗಳಿಗೆ ಜೆನೆರಿಕ್ ಔಷಧ ಶಿಫಾರಸು ಮಾಡಿ, ಇಲ್ಲದಿದ್ರೆ ಕ್ರಮ ಎದುರಿಸಿ: ಕೇಂದ್ರ ಸರ್ಕಾರ ಎಚ್ಚರಿಕೆ
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಹಂಗಾಮಿಗೆ ರಸಗೊಬ್ಬರಕ್ಕೆ ಈ ಬಾರಿ ಒಟ್ಟಾರೆ 1.08 ಲಕ್ಷ ಕೋಟಿ ರೂ. ನೀಡಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೇ ಈ ವರ್ಷ ರಸಗೊಬ್ಬರದ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದು ಸಹ ಸಂಪುಟ ತಿಳಿಸಿದೆ ಎಂದು ಕೇಂದ್ರ ಸಚಿವ ಮನಸುಖ್ ಮಾಂಡವೀಯ ಹೇಳಿದ್ದಾರೆ.
ಈ ಮೂಲಕ 2023-24ರಲ್ಲಿ ರಸಗೊಬ್ಬರಕ್ಕೆ ನೀಡಿರುವ ಸಹಾಯಧನ ಒಟ್ಟಾರೆ 2.25 ಲಕ್ಷ ಕೋಟಿ ರೂ.ಗೆ ತಲುಪಲಿದೆ. ನೈಟ್ರೋಜನ್‌ಗೆ ಪ್ರತಿ ಕೆಜಿಗೆ 76 ರೂ., ಫಾಸ್ಪರಸ್‌ಗೆ 41 ರೂ., ಪೊಟ್ಯಾಶ್‌ಗೆ 15 ರೂ., ಸಲ್ಫರ್‌ಗೆ 2.8 ರೂ. ಸಹಾಯಧನ ನೀಡಲಾಗುತ್ತಿದೆ. ಕಳೆದ 3 ತಿಂಗಳಿನಲ್ಲಿ ಎನ್‌ಪಿಕೆ ಗೊಬ್ಬರದ ಜಾಗತಿಕ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಸಹಾಯಧನದ ಪ್ರಮಾಣವನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ವಿಶ್ವದ ಮೊದಲ ನ್ಯಾನೋ ಡಿಎಪಿ ಗೊಬ್ಬರ ಭಾರತದಲ್ಲಿ ಬಿಡುಗಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ