ನವದೆಹಲಿ: ಇಂದು ಕೇಂದ್ರ ಸರ್ಕಾರದಿಂದ 2026-27ನೇ ಸಾಲಿನ ಆಯವ್ಯಯ ಮಂಡನೆ. ಪ್ರತಿವರ್ಷ ಫೆ.1ರಂದು ಬಜೆಟ್ ಮಂಡಿಸುವುದು ವಾಡಿಕೆ. ಈ ವರ್ಷ ಫೆ.1 ಭಾನುವಾರವಾಗಿದ್ದರೂ ಸಂಸತ್ತು ರಜೆದಿನದಲ್ಲೂ ಕಾರ್ಯನಿರ್ವಹಿಸುತ್ತಿದೆ. ಈ ರೀತಿ ಭಾನುವಾರವೂ ಬಜೆಟ್ ಮಂಡಿಸುತ್ತಿರುವುದು ಇತ್ತೀಚಿನ ವರ್ಷಗಳಲ್ಲೇ ಮೊದಲು. ಭಾರತ ಸಾಗುವ ಹಾದಿಯನ್ನು ತೋರಿಸುವ ಈ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಬಜೆಟ್ ಅಂದರೇನು? ಬಜೆಟ್ ಹೇಗೆ ಸಿದ್ಧವಾಗುತ್ತದೆ? ಬಜೆಟ್ ಹಿಂದಿನ ರೂವಾರಿಗಳು ಯಾರು? ಈವರೆಗೆ ಬಜೆಟ್ ಮಂಡಿಸಿದವರು ಯಾರು ಯಾರು? ಮತ್ತಿತರ ವಿಷಯಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ದೇಶವನ್ನು ಮನೆಯೆಂದು ಪರಿಗಣಿಸಿದರೆ, ಅದನ್ನು ನಡೆಸಲು ವಾರ್ಷಿಕವಾಗಿ ತಯಾರಿಸಲಾಗುವ ಒಟ್ಟು ಆದಾಯ-ವೆಚ್ಚದ ಲೆಕ್ಕಾಚಾರವೇ ಬಜೆಟ್. ಸಾಂವಿಧಾನಿಕ ಭಾಷೆಯಲ್ಲಿ ಇದನ್ನು ‘ವಾರ್ಷಿಕ ಹಣಕಾಸು ಹೇಳಿಕೆ’ ಎಂದು ಉಲ್ಲೇಖಿಸಲಾಗಿದ್ದು, 112ನೇ ವಿಧಿಯ ಪ್ರಕಾರ ಹಣಕಾಸು ವರ್ಷದ ಸರ್ಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಔಪಚಾರಿಕ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿದೆ.
‘ಬಜೆಟ್’ ಎಂದಕೂಡಲೇ ನೆನಪಾಗುವುದು ಹಣ-ಕಾಸು. ಆದರೆ ಅದರ ಮೂಲಾರ್ಥ ಬೇರೆಯೇ ಇದೆ. ಫ್ರೆಂಚ್‌ನಲ್ಲಿ ಚರ್ಮದ ಚೀಲ ಎಂಬರ್ಥ ನೀಡುವ ‘ಬೊಗೆಟ್’ ಎಂಬ ಪದದಿಂದ ಬಜೆಟ್ ಎಂಬ ಪದ ಬಂದಿದೆ. 1733ರಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ರಾಬರ್ಟ್ ವಾಲ್ಪೋಲ್ ತಂಬಾಕು ಮತ್ತು ವೈನ್ ಮೇಲೆ ತೆರಿಗೆ ಹೇರಲು ಮುಂದಾಗಿದ್ದರು ಹಾಗೂ ಇದನ್ನು ಸಮರ್ಥಿಸಿಕೊಳ್ಳಲು ಸಾರ್ವಜನಿಕ ಪತ್ರಗಳನ್ನು ಹಂಚುತ್ತಿದ್ದರು. ಇದನ್ನು ಕೆಲ ಪತ್ರಿಕೆಗಳು, ‘ಕೊನೆಗೂ ಬಜೆಟ್ ಬಯಲಾಯಿತು’ ಎಂದು ಹಾಸ್ಯ ಮಾಡಿದ್ದವು. ಬಳಿಕ ಬಜೆಟ್ ಎಂಬುದು ‘ಆರ್ಥಿಕ ಯೋಜನೆ’ ಎಂಬರ್ಥ ಪಡೆಯಿತು.
ಭಾರತದಲ್ಲಿ ಶುರು ಆಗಿದ್ದು ಯಾವಾಗ?
ಸ್ವತಂತ್ರ ಭಾರತದ ಮೊದಲ ಬಜೆಟ್‌ಅನ್ನು ದೇಶದ ಪಥಮ ವಿತ್ತಸಚಿವರಾಗಿದ್ದ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನ.26ರಂದು ಮಂಡಿಸಿದ್ದರು. ನಂತರದ ವರ್ಷಗಳಲ್ಲಿ ಬಜೆಟ್‌ಅನ್ನು ಫೆಬ್ರವರಿ ತಿಂಗಳ ಕೊನೆಯ ಕೆಲಸದ ದಿನದಂದು(ರಜೆ ಇರದಿದ್ದಲ್ಲಿ 28/29) ಮಂಡಿಸಲಾಗುತ್ತಿತ್ತು. ಆದರೆ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದ 2017ನೇ ಇಸವಿಯಲ್ಲಿ ಈ ಬ್ರಿಟಿಷ್ ಪದ್ಧತಿಗೆ ವಿದಾಯ ಹೇಳಿ, ಬಜೆಟ್ ಮಂಡನೆಗೆ ಫೆ.1ಅನ್ನು ನಿಗದಿ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಇದನ್ನೇ ಪಾಲಿಸಿಕೊಂಡು ಬರಲಾಗುತ್ತಿದೆ. ಅದೇ ವರ್ಷದಿಂದ ರೈಲ್ವೆ ಬಜೆಟ್‌ಅನ್ನು ಸಾಮಾನ್ಯ ಬಜೆಟ್ ಜತೆ ವಿಲೀನಗೊಳಿಸಲಾಯಿತು. ಅಂತೆಯೇ, 1998ರ ವರೆಗೆ ಸಂಜೆ 5 ಗಂಟೆಗೆ(ಬ್ರಿಟನ್‌ನ ಸಮಯಕ್ಕೆ ಅನುಕೂಲವಾಗುವಂತೆ) ಮಂಡಿಸಲಾಗುತ್ತಿದ್ದ ಬಜೆಟ್‌ಅನ್ನು 1999ರಿಂದ ಮಧ್ಯಾಹ್ನ 11ಕ್ಕೆ ಮಂಡಿಸಲು ಆರಂಭ ಮಾಡಲಾಯಿತು.
2 ಅವಧಿಗೆ ವಿತ್ತಸಚಿವರಾಗಿದ್ದ ಮೊರಾರ್ಜಿ ದೇಸಾಯಿಯವರು(1958-63 ಮತ್ತು 67-69) ಅತಿ ಹೆಚ್ಚು(10) ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿ 9 ಬಾರಿ ಈ ಕಾರ್ಯ ಮಾಡಿದ ಪಿ. ಚಿದಂಬರಂ ಅವರು ನಿಲ್ಲುತ್ತಾರೆ. ಹಾಲಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ 2026-27ರ ಬಜೆಟ್ ಮಂಡಿಸುವ ಮೂಲಕ ಅವರನ್ನು ಸರಿಗಟ್ಟಲಿದ್ದಾರೆ.
1991ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 18650 ಪದಗಳಿದ್ದ ಬಜೆಟ್ ಮಂಡಿಸಿದ್ದರೆ, 1977ರಲ್ಲಿ ಸಚಿವ ಹೀರು ಭಾಯ್ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಕೇವಲ 800 ಪದಗಳಿದ್ದವು. ಇವುಗಳನ್ನು ಕ್ರಮವಾಗಿ ಈವರೆಗಿನ ಅತಿ ಹೆಚ್ಚು ಹಾಗೂ ಕಡಿಮೆ ಪದಗಳುಳ್ಳ ಬಜೆಟ್ ಎಂದು ಪರಿಗಣಿಸಲಾಗಿದೆ. 2020ರಲ್ಲಿ ಅತಿ ಸುದೀರ್ಘ ಬಜೆಟ್(2 ಗಂಟೆ 42 ನಿಮಿಷ) ಮಂಡಿಸಿದ್ದು ನಿರ್ಮಲಾ.
ಬಜೆಟ್‌ನತ್ತ ದೇಶದ ಚಿತ್ತ ನೆಡುವುದು ಫೆ.1ರಂದಾದರೂ, ಅದರ ತಯಾರಿ ಸುಮಾರು 6 ತಿಂಗಳ(ಆಗಸ್ಟ್-ಸೆಪ್ಟೆಂಬರ್) ಹಿಂದಿನಿಂದಲೇ ಶುರುವಾಗಿರುತ್ತದೆ. ಅದರ ಹಂತಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಹಂತ 1: ಬಜೆಟ್ ಪೂರ್ವ ಸಿದ್ಧತೆ(ಆಗಸ್ಟ್-ಸೆಪ್ಟೆಂಬರ್)
ವಿತ್ತ ಸಚಿವಾಲಯವು ಎಲ್ಲಾ ಸಚಿವಾಲಯ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಅವುಗಳ ವೆಚ್ಚದ ಅಂದಾಜು ಕೇಳಿ ಬಜೆಟ್ ಸುತ್ತೋಲೆ ಹೊರಡಿಸುತ್ತದೆ.
ಹಂತ 2: ಲೆಕ್ಕ ಸಲ್ಲಿಕೆ ಮತ್ತು ಪರಿಶೀಲನೆ(ಅಕ್ಟೋಬರ್-ನವೆಂಬರ್)
ಎಲ್ಲಾ ಸಚಿವಾಲಯಗಳಿಂದ ಆದಾಯ, ಖರ್ಚುಗಳ ಅಂದಾಜನ್ನು ಸಲ್ಲಿಕೆ. ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರ ವಿಭಾಗ ಅದನ್ನು ಪರಿಶೀಲಿಸಿ ಸಭೆ ನಡೆಸಿ ಚರ್ಚಿಸುತ್ತದೆ.
ಹಂತ 3: ಸಂಬಂಧಿತರ ಜತೆ ಸಮಾಲೋಚನೆ (ಡಿಸೆಂಬರ್)
ಸಂಬಂಧಿತರ (ವ್ಯಾಪಾರಿಗಳ ಒಕ್ಕೂಟ, ರೈತರು, ಅರ್ಥಶಾಸ್ತ್ರಜ್ಞರು, ಕಾರ್ಖಾನೆ, ಬ್ಯಾಂಕ್) ಜತೆ ಹಣಕಾಸು ಸಚಿವಾಲಯ ಸಮಾಲೋಚನೆ ನಡೆಸುತ್ತದೆ. ಆದಾಯ ಅಂದಾಜುಗಳು ಅಂತಿಮಗೊಳ್ಳುತ್ತವೆ. ಆದಾಯ-ಖರ್ಚು ನಡುವಿನ ಅಂತರದ ಗುರಿ ನಿಗದಿ.
ಹಂತ 4: ಅಂತಿಮಗೊಳಿಸುವಿಕೆ, ಮುದ್ರಣ(ಜನವರಿ)
ಬಜೆಟ್ ತಯಾರಿ ಪೂರ್ಣಗೊಂಡು, ಪ್ರತಿಗಳ ಮುದ್ರಣ ಆರಂಭದ ಸಂಕೇತವಾಗಿ ಹಲ್ವಾ ಸಮಾರಂಭ ಆಯೋಜಿಸಲಾಗುತ್ತದೆ. ಬಳಿಕ ಬಜೆಟ್ ತಯಾರಿಸಿದ ಅಧಿಕಾರಿಗಳು ಹೊರಜಗತ್ತಿನ ಸಂಪರ್ಕದಿಂದ ದೂರ ಇರುತ್ತಾರೆ.
ಹಂತ 5: ಅಂತಿಮ ಮುದ್ರೆ, ಮಂಡನೆ(ಫೆಬ್ರವರಿ 1)
ಅಂತಿಮಗೊಂಡ ಬಜೆಟ್‌ಗೆ ವಿತ್ತಸಚಿವರು ಪ್ರಧಾನಿ ಮತ್ತು ಸಚಿವ ಸಂಪುಟದ ಒಪ್ಪಿಗೆ ಪಡೆಯುತ್ತಾರೆ. ಬಳಿಕ ರಾಷ್ಟ್ರಪತಿಗಳ ಸಹಿ ಬೀಳುತ್ತದೆ. ನಂತರ ಲೋಕಸಭೆಯಲ್ಲಿ ಮಂಡನೆಯಾಗುತ್ತದೆ.
ಇದು ಬಜೆಟ್ ತಯಾರಿಯ ಕೊನೆಯ ಹಂತ. ಪ್ರಕ್ರಿಯೆಯಲ್ಲಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವ ಸಮಯವಿದು. 2025ರ ಸೆಪ್ಟೆಂಬರ್‌ನಲ್ಲೇ ಕಾರ್ಯನಿಮಿತ್ತ ಕರ್ತವ್ಯ ಭವನಕ್ಕೆ ಸ್ಥಳಾಂತರಗೊಂಡಿದ್ದ ವಿತ್ತ ಸಚಿವರು ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ರೈಸಿನಾ ಹಿಲ್ಸ್‌ನ ಉತ್ತರ ಬ್ಲಾಕ್‌ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಬಜೆಟ್ ಮಂಡನೆಗೆ 5-7 ದಿನವಿರುವಾಗ(ಈ ವರ್ಷ ಜ.27ರಂದು) ಹಲ್ವಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಹಲ್ವಾ ಬಾಣಲೆಯಲ್ಲಿ ಸಾಂಕೇತಿಕವಾಗಿ ಸೌಟು ಆಡಿಸುವ ಮೂಲಕ ವಿತ್ತಸಚಿವರು ಅದನ್ನು ನೆರವೇರಿಸಿ, ಬಳಿಕ ಅಧಿಕಾರಿಗಳಿಗೆ ಸಿಹಿ ವಿತರಿಸಲಾಗುತ್ತದೆ. ನಂತರ ಬಜೆಟ್ ಮಾಹಿತಿ ಸೋರಿಕೆ ತಡೆಯಲು ಎಲ್ಲರನ್ನೂ ಬಾಹ್ಯ ಪ್ರಪಂಚದ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕವಾಗಿ ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲಿ ಇರಿಸಲಾಗುತ್ತದೆ. ಇದನ್ನು ಲಾಕ್-ಇನ್ ಅವಧಿ ಎನ್ನಲಾಗುತ್ತದೆ. ಸಂಸತ್ತಿನಲ್ಲಿ ಬಜೆಟ್ ಭಾಷಣ ಪೂರ್ಣಗೊಳ್ಳುವ ತನಕ ಅವರೆಲ್ಲಾ ಅಲ್ಲೇ ಇರುತ್ತಾರೆ. ಈ ಅವಧಿಯಲ್ಲಿ ಬಜೆಟ್ ಅಂತಿಮಗೊಳಿಸುವಿಕೆ, ಮುದ್ರಣ(ಈಗ ಡಿಜಿಟಲೀಕರಣದ ಕಾರಣ ಕಡಿಮೆ) ಆಗುತ್ತದೆ. ಈ ಪದ್ಧತಿ ಶುರುವಾದುದು 1950ರಲ್ಲಿ ಬಜೆಟ್ ಸೋರಿಕೆಯಾದ ಬಳಿಕ.
-ಆರ್.ಕೆ. ಷಣ್ಮುಖಂ ಚೆಟ್ಟಿ: 1
-ಜಾನ್ ಮಥಾಯ್: 2
-ಸಿ.ಡಿ. ದೇಶಮುಖ್: 7
-ಟಿ.ಟಿ. ಕೃಷ್ಣಮಾಚಾರಿ: 6
-ಜವಾಹರಲಾಲ್ ನೆಹರು: 1
-ಮೊರಾರ್ಜಿ ದೇಸಾಯಿ: 10
-ಇಂದಿರಾ ಗಾಂಧಿ: 1
-ಯಶವಂತ್ ಸಿನ್ಹಾ: 8
-ಪ್ರಣಬ್ ಮುಖರ್ಜಿ: 8
-ಮನಮೋಹನ್ ಸಿಂಗ್: 5
-ಪಿ. ಚಿದಂಬರಂ: 9
-ಅರುಣ್ ಜೇಟ್ಲಿ: 6
-ಪಿಯೂಷ್ ಗೋಯಲ್: 1
-ನಿರ್ಮಲಾ ಸೀತಾರಾಮನ್: 9
-ನಿರ್ಮಲಾ ಸೀತಾರಾಮನ್(ವಿತ್ತಸಚಿವೆ)
-ಪಂಕಜ್ ಚೌಧರಿ(ರಾಜ್ಯ ಸಚಿವ)
-ಅನುರಾಧಾ ಠಾಕೂರ್(ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ)
-ವಿ. ಅನಂತ ನಾಗೇಶ್ವರನ್(ಮುಖ್ಯ ಆರ್ಥಿಕ ಸಲಹೆಗಾರ)
-ಅರವಿಂದ್ ಶ್ರೀವಾಸ್ತವ(ಕಂದಾಯ ಕಾರ್ಯದರ್ಶಿ)
-ವುಮ್ಲುನ್ಮಾಂಗ್ ವುಯಲ್ನಾಮ್(ವೆಚ್ಚ ಕಾರ್ಯದರ್ಶಿ)
-ಅರುಣೀಶ್ ಚಾವ್ಲಾ(ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ(ಡಿಐಪಿಎಎಂ) ಕಾರ್ಯದರ್ಶಿ)
-ಕೆ. ಮೋಸೆಸ್ ಚಲೈ(ಸಾರ್ವಜನಿಕ ಉದ್ಯಮಗಳ ಇಲಾಖೆ(ಡಿಪಿಇ) ಕಾರ್ಯದರ್ಶಿ)
-ಎಂ. ನಾಗರಾಜು(ಹಣಕಾಸು ಸೇವೆಗಳ ಕಾರ್ಯದರ್ಶಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ