ಹಳೇ ಸರ್ಕಾರದ ತಪ್ಪು ತಿದ್ದಿದ್ದೇವೆ: ಯುಪಿಎಗೆ ಮೋದಿ ಟಾಂಗ್‌

By Suvarna NewsFirst Published Aug 12, 2021, 3:58 PM IST
Highlights

* ಆರ್ಥಿಕತೆ ವೇಗದ ಹಾದಿ, ಉದ್ದಿಮೆ ಧೈರ‍್ಯದಿಂದ ಮುನ್ನುಗ್ಗಬೇಕು

* ಪೂರ್ವಾನ್ವಯ ತೆರಿಗೆ ರದ್ದು ಪ್ರಸ್ತಾಪಿಸಿದ ಪ್ರಧಾನಿ

ನವದೆಹಲಿ(ಆ.12): ಕೋವಿಡ್‌ನಿಂದ ಸಂಕಷ್ಟಕ್ಕೆ ಈಡಾಗಿದ್ದ ದೇಶದ ಆರ್ಥಿಕತೆ ಮತ್ತೆ ಪ್ರಗತಿಯ ಹಾದಿಯಲ್ಲಿದ್ದು, ದೇಶೀಯ ಕೈಗಾರಿಕೆಗಳು ಧೈರ್ಯವಾಗಿ ಮುನ್ನುಗ್ಗುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶೀಯ ಉದ್ಯಮ ಸಮೂಹಕ್ಕೆ ಕರೆ ನೀಡಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೆಂದ್ರ ಮೋದಿ, ‘ಪೂರ್ವಾನ್ವಯ ತೆರಿಗೆ ರದ್ದುಪಡಿಸುವ ಮೂಲಕ ನಾವು ಹಳೆಯ ತಪ್ಪನ್ನು ತಿದ್ದಿದ್ದೇವೆ. ಇದು ಕೈಗಾರಿಕೆ ಮತ್ತು ಸರ್ಕಾರದ ನಡುವಣ ವಿಶ್ವಾಸ ಹೆಚ್ಚಿಸಲಿದೆ. ಈ ವಿಷಯದಲ್ಲಿ ಉದ್ಯಮ ಸಮೂಹದಿಂದ ವ್ಯಕ್ತವಾದ ಅಭಿಪ್ರಾಯ ಮತ್ತು ಮೆಚ್ಚುಗೆ ಅಭಿನಂದನಾರ್ಹ ಎಂದು ಹೇಳಿದರು. ಈ ಮೂಲಕ ಹಿಂದಿನ ಉದ್ಯಮ ವಲಯದಿಂದ ತೀವ್ರ ಟೀಕೆಗೆ ಒಳಗಾಗಿದ್ದ ಯುಪಿಎ ಸರ್ಕಾರದ ಅವಧಿಯ ಪೂರ್ವಾನ್ವಯ ತೆರಿಗೆ ರದ್ದುಪಡಿಸಿದ್ದನ್ನು ಪ್ರಸ್ತಾಪಿಸಿದರು.

ಕಳೆದ ಕೆಲ ವರ್ಷಗಳಿಂದ ನಾವು ಹಲವು ದಿಟ್ಟನಿರ್ಧಾರಗಳನ್ನು ಕೈಗೊಂಡಿದ್ದೇವೆ. ಕೋವಿಡ್‌ ಸಾಂಕ್ರಾಮಿಕ ಕಾಲದಲ್ಲೂ ಅದು ಮುಂದುವರೆಯಿತು. ನಾವು ಇಂಥ ಸುಧಾರಣೆಗಳನ್ನು ಬಲವಂತವಾಗಿ ಮಾಡುತ್ತಿಲ್ಲ ಬದಲಾಗಿ ಬದ್ಧತೆಯಿಂತ ಮಾಡುತ್ತಿದ್ದೇವೆ. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ನಾವು ಎಲ್ಲಾ ಅಪಾಯಗಳನ್ನೂ ಎದುರಿಸಲು ಸಿದ್ಧ. ಈ ಕಾರಣಕ್ಕಾಗಿಯೇ ದೇಶಕ್ಕೆ ದಾಖಲೆಯ ಪ್ರಮಾಣದ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ, ಭಾರತೀಯರು ಇದೀಗ ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಲ್ಲಿ ನಂಬಿಕೆ ಇಡಲು ಆರಂಭಿಸಿದ್ದಾರೆ. ವಿದೇಶಿ ಉತ್ಪನ್ನಗಳು ಮಾತ್ರವೇ ಉತ್ತಮ ಎಂಬ ಮನೋಭಾವ ಬದಲಾಗಿದೆ. ಸ್ಟಾರ್ಟಪ್‌ಗಳು ಆತ್ಮವಿಶ್ವಾಸದಲ್ಲಿವೆ. ಹಲವು ಯುನಿಕಾರ್ನ್‌ಗಳು ದೇಶದ ಚಿತ್ರಣವಾಗಿ ಹೊರಹೊಮ್ಮಿವೆ. 7-8 ವರ್ಷಗಳ ಹಿಂದೆ ದೇಶದಲ್ಲಿ ಕೇವಲ 3-4 ಯುನಿಕಾರ್ನ್‌ಗಳಿದ್ದವು. ಅವುಗಳ ಸಂಖ್ಯೆ ಇದೀಗ 60ಕ್ಕೆ ಏರಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

click me!