* ಉಕ್ರೇನ್ ರಷ್ಯಾ ಯುದ್ಧಕ್ಕೆ ಕರ್ನಾಟಕದ ವಿದ್ಯಾರ್ಥಿ ಸಾವು
* ನವೀನ್ ಸಾವನ್ನಪ್ಪಿರುವುದನ್ನು ದೃಢಪಡಿಸಿದ ವಿದೇಶಾಂಗ ಇಲಾಖೆ
* ಮೃತದೇಹ ಸದ್ಯಕ್ಕೆ ತಾಯ್ನಾಡಿಗೆ ತರೋದು ಅನುಮಾನ
ಬೆಂಗಳೂರು(ಮಾ.01): ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ದಿನೇ ದಿನೇ ಮತ್ತಷ್ಟು ಉಗ್ರವಾಗುತ್ತಿದೆ. ಅಪಾರ ಸಾವು ನೋವು ಸಂಭವಿಸಿದ್ದರೂ ಈ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗ ಮಂಗಳವಾರ, ಖಾರ್ಕಿವ್‌ನಲ್ಲಿ, ರಷ್ಯಾ ವಾಯುದಾಳಿ ನಡೆಸಿ, ಖಾರ್ಕಿವ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸಿದೆ. ಈ ವೇಳೆ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ಮೂಲದ, ಕರ್ನಾಟಕದ ಹಾವಚೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಬಲಿಯಾಗಿದ್ದಾರೆ.
ಹೌದು ಹಾವೇರಿ ಜಿಲ್ಲೆಯ, ರಾಣೆಬೆನ್ನೂರು ತಾಲೂಕಿನ ಚಲಗೇರಿಯ 20 ವರ್ಷದ ಯುವಕ ನವೀನ್ ಶೇಕರಪ್ಪ ಜ್ಞಾನಗೌಡರ್ ಸಾವಿನ ಸುದ್ದಿ ಆತನ ಕುಟುಂಬಕ್ಕೆ ಆಘಾತ ಕೊಟ್ಟಿದೆ. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದ ನವೀನ್ ಕಳೆದ ಮೂರು ದಿನಗಳ ಹಿಂದಷ್ಟೇ ಕುಟುಂಬದ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಹೀಗಿರುವಾಗ ತಾನು ಶೀಘ್ರದಲ್ಲೇ ಸೇಫಾಗಿ ಮನೆಗೆ ಬರುವುದಾಗಿ ತಿಳಿಸಿದ್ದರು.
ಇನ್ನು ನವೀನ್ ಸಾವಿನ ಸುದ್ದಿ ಲಭಿಸಿದ ಬೆನ್ನಲ್ಲೇ ಕುಟುಂಬ ಸದಸ್ಯರು ವಿದೇಶಾಂಗ ಸಚಿವಾಲಕ್ಕೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ನವೀನ್ ಸಾವನ್ನಪ್ಪಿರುವ ಮಾಹಿತಿ ದೃಢಪಡಿಸಿದ ಸಚಿವಾಲಯದ ಅಧಿಕಾರಿ, ದಿನಸಿ ಖರೀದಿಗೆ ತೆರಳುದಾಗ ನಡೆದ ಕ್ಷಿಪಣಿ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮೃತ ವಿದ್ಯಾರ್ಥಿ ನವೀನ್ ಎಂಬುವುದನ್ನು ಆತನ ಗೆಳೆಯರೂ ಖಚಿತಪಡಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಇನ್ನು ಇದೇ ವೇಳೆ ನವೀನ್ ಮೃತದೇಹ ಯಾವಾಗ ತರುತ್ತೀರು ಎಂದು ಕೆಳಲಾಗಿದ್ದು, ಇದಕ್ಕೆ ಉತ್ತರಿಸಿದ ಅಧಿಕಾರಿ ದಯವಿಟ್ಟು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ ಎಂಬುವುದನ್ನು ಅರಿತುಕೊಳ್ಳಿ. ಅಲ್ಲಿಂದ ಮೃತದೇಹ ತರುವುದು ಕಷ್ಟ. ಸದ್ಯಕ್ಕೀಗ ನವೀನ್ ಮೃತದೇಹವನ್ನು ಶವಾಗಾರದಲ್ಲಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ನವೀನ್ ತಂದೆ ಜೊತೆ ಸಿಎಂ ಬೊಮ್ಮಾಯಿ ಮಾತು
ಇದೇ ಸಂದರ್ಭದಲ್ಲಿ ಮೃತ ನವೀನ್ ತಂದೆ ಶೇಖರಗೌಡ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ. ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ. ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸಿಎಂ ಸಾಂತ್ವನ ಹೇಳಿದ್ದಾರೆ..
ಇದೇ ವೇಳೆ ಮಗನ ಬಗ್ಗೆ ದುಃಖದಿಂದ ಮಾತನಾಡಿದ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದ್ದಾರೆ.
1 ಗಂಟೆಗೆ ಶೆಲ್ ದಾಳಿ
ಉಕ್ರೇನ್ ಯುದ್ಧಕ್ಕೆ ಮಗನನ್ನು ಕಳೆದುಕೊಂಡ ನವೀನ್ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ದಾಳಿ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ರಾಣಿಬೆನ್ನೂರು ತಾಲೂಕಿನ ಚಳಗೇರಿಯ ನವೀನ್ ಮನೆಯಲ್ಲಿ ನೂರಾರು ಜನರು ಸೇರಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ತಕ್ಷಣವೇ ಕೀವ್ ತೊರೆಯುವಂತೆ ಆದೇಶ
ಮುಂದುವರಿದ ದಾಳಿಗಳ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಭಾರತೀಯ ವಿದ್ಯಾರ್ಥಿಗಳಿಗೆ ಕೀವ್‌ನಿಂದ ತಕ್ಷಣ ತೊರೆಯುವಂತೆ ಸೂಚಿಸಿದೆ. ಏತನ್ಮಧ್ಯೆ, ಖಾರ್ಕಿವ್‌ನಲ್ಲಿಯೂ ಭಾರೀ ಗುಂಡಿನ ದಾಳಿ ಪ್ರಾರಂಭವಾಗಿದೆ. ರಷ್ಯಾ ಖಾರ್ಕಿವ್ ಪ್ರಧಾನ ಕಛೇರಿಯ ಮೇಲೆ ಕ್ಷಿಪಣಿ ದಾಳಿ ಮಾಡಿತು. ಈ ದಾಳಿಯಲ್ಲಿ ಕಟ್ಟಡಗಳೆಲ್ಲ ಧ್ವಂಸಗೊಂಡಿವೆ. ಖಾರ್ಕಿವ್ ನಗರವನ್ನು ರಷ್ಯಾ ಭಾನುವಾರ ವಶಪಡಿಸಿಕೊಂಡಿದೆ. ಕೀವ್ ಅನ್ನು ನಿಯಂತ್ರಿಸಲು ರಷ್ಯಾ ಅತಿದೊಡ್ಡ ಮಿಲಿಟರಿ ತಂಡವನ್ನು ಕಳುಹಿಸಿದೆ.
ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಮೋದಿ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ
ಕಳೆದ ಆರು ದಿನಗಳಿಂದ ರಷ್ಯಾದ ಉಕ್ರೇನ್ ಮೇಲಿನ ದಾಳಿಗಳ ನಡುವೆ, ಸಿಲುಕಿರುವ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ವೇಗವಾಗಿ ಕೆಲಸ ಮಾಡುತ್ತಿದೆ. ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ಮೋದಿ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಆಪರೇಷನ್ ಗಂಗಾ ನಡೆಸುತ್ತಿರುವ ಬಗ್ಗೆ ಅವರು ಮಾಹಿತಿ ನೀಡಿದರು. ಸೋಮವಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರಂಭಿಕ ಸಲಹೆಯನ್ನು ನೀಡಿದ ನಂತರ ಭಾರತವು 8,000 ಕ್ಕೂ ಹೆಚ್ಚು ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವರದಿ ಮಾಡಿದೆ.
ವಿದ್ಯಾರ್ಥಿಗಳನ್ನು ಕರೆದೊಯ್ಯಲು ವಾಯುಪಡೆಯ ವಿಮಾನಗಳು
ಭಾರತದ ಸುಮಾರು 16 ಸಾವಿರ ಜನರು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಮರಳಿ ಕರೆತರಲು, ಆಪರೇಷನ್ ಗಂಗಾ ಮೂಲಕ, ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನ ಗಡಿ ದೇಶಗಳಾದ ಹಂಗೇರಿ, ಪೋಲೆಂಡ್ ಮತ್ತು ರೊಮೇನಿಯಾದ ವಿದ್ಯಾರ್ಥಿಗಳನ್ನು ಸರ್ಕಾರವು ಏರ್‌ಲಿಫ್ಟ್ ಮಾಡುತ್ತಿದೆ. ಆದರೆ ಪ್ರತಿದಿನ ಬರಲು ಸಾಧ್ಯವಾಗುವುದು 250 ಮಂದಿ ಮಾತ್ರ. ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಕಾರ್ಯಾಚರಣೆಗೆ ಕೈಜೋಡಿಸುವಂತೆ ವಾಯುಸೇನೆಗೂ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಇಂದು ವಾಯುಪಡೆಯ ವಿಮಾನಗಳು ಮಾತ್ರ ಕಾರ್ಯಾಚರಣೆಗೆ ಸೇರಬಹುದು ಎಂದು ಹೇಳಲಾಗುತ್ತಿದೆ.