
ಛತ್ರಪತಿ ಸಂಭಾಜಿನಗರ: ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.
ಇದರ ನಡುವೆಯೇ, ‘ಆಪರೇಷನ್ ಸಕ್ಸಸ್. ಪೇಷಂಟ್ ಹೆಲ್ದಿ’ (ಸಂಸದರ ಸೆಳೆವ ಕಾರ್ಯಾಚರಣೆ ಯಶಸ್ವಿ ಆಗಿದೆ) ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೂಚ್ಯವಾಗಿ ಹೇಳಿದ್ದಾರೆ. ಶಿಂಧೆ ಶಿವಸೇನೆ ಮುಖ್ಯಸ್ಥ, ಡಿಸಿಎಂ ಏಕನಾಥ ಶಿಂಧೆ ಕೂಡ ಈ ಮಾತು ಅನುಮೋದಿಸಿದ್ದಾರೆ.
ಭಾನುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಷ್ಟಿಕರ್, ‘ಜೂನ್ 18 ರವರೆಗೆ ಪಕ್ಷಾಂತರ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ವಿರುದ್ಧ ಅವಾಚ್ಯ ಬೈಗುಳ ಅಂದು ಕೇಳಿಬಂತು. ಆಗಲೇ ಪಕ್ಷ ಬಿಡಲು ನಿರ್ಧರಿಸಿದೆವು’ ಎಂದರು. ಈ ಮೂಲಕ ತಮ್ಮನ್ನು ‘ಗಾಂ**’ ಎಂದು ಅವಾಚ್ಯ ಶಬ್ದದಿಂದ ಬೈದ ಉದ್ಧವ್ ಠಾಕ್ರೆ ಆಪ್ತ ಸಂಜಯ ರಾವುತ್ ಬಗ್ಗೆ ಕಿಡಿಕಾರಿದರು.
‘ನಾನು ಸಿದ್ಧಾಂತದಲ್ಲಿ ರಾಜಿ ಆಗಿಲ್ಲ/ ಒಂದು ಶಿವಸೇನೆಯಿಂದ ಇನ್ನೊಂದಕ್ಕೆ ಹೋಗುತ್ತಿದ್ದೇನೆ ಅಷ್ಟೆ. ವಿಪಕ್ಷದಲ್ಲಿ ಇದ್ದ ಕಾರಣ 5 ಕೋಟಿ ರು. ಸಂಸದೀಯ ಅನುದಾನ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಶಿಂಧೆ ಬಣದ ಶಿವಸೇನೆ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಈ ನಡುವೆ, 6 ಬಂಡಾಯ ಯುಬಿಟಿ ಶಿವಸೇನೆ ಸಂಸದರಲ್ಲಿದ್ದಾರೆ ಎನ್ನಲಾಗಿದ್ದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಕ್ಷೇತ್ರದ ಜನಸಂಪರ್ಕ ಸಭೆ ಬಳಿಕ ಮಾತಾಡಿ, ಶಿಂಧೆ ಸೇನೆ ಸೇರುವ ಘೋಷಣೆ ಮಾಡಿದರು.
ಬಂಡಾಯ ಸಂಸದರು ಸಂಪರ್ಕದಲ್ಲಿ:
‘ಈ ನಡುವೆ ಅತೃಪ್ತ ಸಂಸದರು ತಮ್ಮ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಹೆದರಿದ್ದಾರೆ. ಇನ್ನೂ ಕೆಲವರು ಶಿವಸೇನೆ ಜತೆಗೆ ಸಂಪರ್ಕದಲ್ಲಿದ್ದಾರೆ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ