
ಮುಂಬೈ (ಅ.1): ತಮ್ಮ ಅತ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆಗಳಿಂದಲೇ ಸದಾ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ಐಎಎಸ್ ಅಧಿಕಾರಿ ತುಕಾರಾಮ್ ಮುಂಧೆ, ಈ ಬಾರಿ ತಂಬಾಕು, ಪಾನ್-ಮಸಾಲಾ ಹಾಗೂ ಗುಟ್ಕಾ ಮಾದರಿಯ ಬ್ರ್ಯಾಂಡ್‌ಗಳ ಜಾಹೀರಾತು ಮಾಡುವ ಬಾಲಿವುಡ್ ನಟರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಲ್ಲಿನ ಅಶುಚಿತ್ವ ಹಾಗೂ ನಕಲಿ ಪನ್ನೀರ್ ತಯಾರಕರ ವಿರುದ್ಧ ಸರಣಿ ದಾಳಿ ನಡೆಸಿ ಮಹಾರಾಷ್ಟ್ರ ಮಾತ್ರವಲ್ಲದೆ ಇಡೀ ದೇಶಾದ್ಯಂತ ಸದ್ದು ಮಾಡಿದ್ದ ತುಕಾರಾಮ್ ಮುಂಧೆ, ಇತ್ತೀಚೆಗೆ ಬಾಲಿವುಡ್‌ನ ಸ್ಟಾರ್ ನಟರ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು.
ತಂಬಾಕು ಮತ್ತು ಪಾನ್ ಮಸಾಲಾಗಳಿಗೆ ಹೋಲುವ ಉತ್ಪನ್ನಗಳ (Surrogate Advertising) ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರ ನೇತೃತ್ವದ ಎಫ್‌ಡಿಎ ಇಲಾಖೆಯು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್ (Tiger Shroff) ಅವರಿಗೆ ಈಗಾಗಲೇ ಕಾರಣ ಕೇಳಿ ನೋಟೀಸ್ (Show Cause Notice) ಜಾರಿಗೊಳಿಸಿದೆ. ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಇಡೀ ಬಾಲಿವುಡ್ ವಲಯದಲ್ಲಿ ತಲ್ಲಣ ಉಂಟಾಗಿದೆ. ಅಲ್ಲದೆ, ಈ ನೋಟೀಸ್‌ಗೆ ನಟರು ಸರಿಯಾದ ಉತ್ತರ ನೀಡದಿದ್ದರೆ ಅವರ ವಿರುದ್ಧ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಫ್‌ಡಿಎ ಎಚ್ಚರಿಕೆ ನೀಡಿದೆ.
ಎನ್‌ಡಿಟಿವಿ (NDTV) ಆಯೋಜಿಸಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಧೆ, ಪಾನ್ ಮಸಾಲಾ ಮತ್ತು ಗುಟ್ಕಾ ಜಾಹೀರಾತುಗಳಲ್ಲಿ ನಟಿಸುವ ನಟರ ದ್ವಿಮುಖ ನೀತಿಯನ್ನು ಕಟು ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
"ನನಗೆ ದ್ವಿಮುಖ ನೀತಿಯನ್ನು ಅನುಸರಿಸುವ ಜನರ ಬಗ್ಗೆ ತೀವ್ರ ಆಕ್ಷೇಪವಿದೆ. ನನಗೆ ಅವರನ್ನು ವಿರೋಧ ಮಾಡುವುದು ಇಷ್ಟವಿಲ್ಲ. ಆದರೆ, ದ್ವಿಮುಖ ನಡವಳಿಕೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಏಕೆಂದರೆ ಅಂತಹ ಚಾರಿತ್ರ್ಯವನ್ನು ನಾನು ಮೂಲತಃ ಇಷ್ಟಪಡುವುದಿಲ್ಲ. ನೀವು ಮಾಡುವ ಕೆಲಸ, ನೀವು ಮಾತನಾಡುವ ಮಾತು ಮತ್ತು ನಿಮ್ಮ ನಡವಳಿಕೆಯಲ್ಲಿ ನೀವು ಪ್ರಾಮಾಣಿಕವಾಗಿರದಿದ್ದರೆ, ನೀವು ನಿಜವಾದ ಮನುಷ್ಯರೇ ಅಲ್ಲ ಎಂದರ್ಥ. ನೀವು ಜನರೆದುರು ಒಂದು ಮುಖ ತೋರಿಸಿ, ಹಿನ್ನೆಲೆಯಲ್ಲಿ ಇನ್ನೊಂದು ಮುಖವನ್ನು ಇಟ್ಟುಕೊಂಡಿರುತ್ತೀರಿ..." ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.
ನಟರ ಜಾಹೀರಾತು ಪ್ರವೃತ್ತಿಯನ್ನು ಪ್ರಶ್ನಿಸಿದ ಮುಂಧೆ "ನೀವು ಪ್ರಚಾರ ಮಾಡುತ್ತಿರುವ ಉತ್ಪನ್ನ ನಿಜವಾಗಿಯೂ ಉತ್ತಮ ಗುಣಮಟ್ಟದ್ದಾಗಿದ್ದರೆ, ಮೊದಲು ಅದನ್ನು ನೀವೇ ಬಳಸಲು ಪ್ರಾರಂಭಿಸಿ. ಜಾಹೀರಾತು ನೀಡುವ ವ್ಯಕ್ತಿ ಆ ವಸ್ತುವನ್ನು ಸ್ವತಃ ಬಳಸಬೇಕು. ಜನರನ್ನು ಅದನ್ನು ಅನುಸರಿಸಬೇಕೆಂದು ಯಾಕಾಗಿ ಹೇಳಬೇಕು? ಮೊದಲ ಹೆಜ್ಜೆಯನ್ನು ನೀವೇ ಇಡಿ. ನೀವು ಪಾನ್ ಅಥವಾ ಗುಟ್ಕಾ ಜಾಹೀರಾತು ಮಾಡುತ್ತಿದ್ದರೆ, ಮೊದಲು ನೀವೇ ಅದನ್ನು ತಿಂದು ನೋಡಿ. ನಂತರ ಅದನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ಅವರಿಗೂ ಅದನ್ನು ತಿನ್ನುವ ಅಭ್ಯಾಸ ಮಾಡಿಸಿ" ಎಂದು ಖಡಕ್ ಆಗಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, "ಆ ಪಾನ್ ಮಸಾಲಾದಲ್ಲಿ 'ಕೇಸರಿ' ಇದೆ ಎಂದು ನೀವು ಪ್ರಚಾರ ಮಾಡುತ್ತೀರಿ. ಹಾಗಿದ್ದ ಮೇಲೆ ಅದನ್ನು ನೀವು ಏಕೆ ತಿನ್ನಬಾರದು? ಮೊದಲು ನೀವೇ ಅದನ್ನು ಸೇವಿಸಬಹುದಲ್ಲ. ನಿಮ್ಮ ಸ್ವಂತ ಕುಟುಂಬಕ್ಕೆ ತಿನ್ನಿಸಬಹುದಲ್ಲ. ಆ ನಂತರ ದೇಶದ ಇತರ ಜನರಿಗೆ ಅದನ್ನು ತಿನ್ನಲು ಸಲಹೆ ನೀಡಿ... ನಿಯಮಗಳನ್ನು ಉಲ್ಲಂಘಿಸಿ ಇಂತಹ ಅಪಾಯಕಾರಿ ಉತ್ಪನ್ನಗಳ ಜಾಹೀರಾತು ನೀಡುವುದು ಕೇವಲ ಅನೈತಿಕ ಮಾತ್ರವಲ್ಲ, ಇದು ಸಂಪೂರ್ಣವಾಗಿ ಕಾನೂನುಬಾಹಿರವೂ ಆಗಿದೆ" ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ