ಟ್ರಿಪಲ್‌ ಮ್ಯುಟೆಂಟ್‌: ಭಾರತಕ್ಕೆ ಹೊಸ ಗಂಡಾಂತರ, ಪ್ರತಿಕಾಯಕ್ಕೂ ಬಗ್ಗಲ್ಲ!

Published : Apr 22, 2021, 07:13 AM IST
ಟ್ರಿಪಲ್‌ ಮ್ಯುಟೆಂಟ್‌: ಭಾರತಕ್ಕೆ ಹೊಸ ಗಂಡಾಂತರ, ಪ್ರತಿಕಾಯಕ್ಕೂ ಬಗ್ಗಲ್ಲ!

ಸಾರಾಂಶ

ಟ್ರಿಪಲ್‌ ಮ್ಯುಟೆಂಟ್‌: ಭಾರತಕ್ಕೆ ಹೊಸ ಗಂಡಾಂತರ!| ಅವಳಿ ರೂಪಾಂತರಿ ನಂತರ ಈಗ ತ್ರಿವಳಿ ರೂಪಾಂತರಿ ವೈರಸ್‌| ಪ.ಬಂಗಾಳ, ದಿಲ್ಲಿ, ಛತ್ತೀಸ್‌ಗಢ, ಮಹಾರಾಷ್ಟ್ರದಲ್ಲಿ ಪತ್ತೆ| ದೇಶದಲ್ಲಿ ಕೋವಿಡ್‌ ಭಾರಿ ಏರಿಕೆಗೆ ಇದೇ ಕಾರಣ? ವಿಜ್ಞಾನಿಗಳ ಅಧ್ಯಯನ| ಪ್ರತಿಕಾಯಕ್ಕೂ ಬಗ್ಗುವುದಿಲ್ಲ ಈ ವೈರಸ್‌?

ನವದೆಹಲಿ(ಏ.22): ದೇಶದಲ್ಲಿ ಕೊರೋನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವ್ಯಾಪಿಸುತ್ತಿರುವಾಗಲೇ, ‘ಬಿ.1.618’ ಎಂಬ ಹೊಸ ‘ಟ್ರಿಪಲ್‌ ಮ್ಯುಟೆಂಟ್‌’ ರೂಪಾಂತರಿ ಮಾದರಿಯೊಂದು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಡಬಲ್‌ ಮ್ಯುಟೆಂಟ್‌ ಕಾರಣದಿಂದ ಸೋಂಕಿನ 2ನೇ ಅಲೆ ಎದ್ದಿದ್ದು, ಈಗ ‘ಟ್ರಿಪಲ್‌ ಮ್ಯುಟೆಂಟ್‌’ ಇನ್ನಷ್ಟುಅಪಾಯ ತಂದೊಡ್ಡಬಹುದು ಎಂಬ ಭೀತಿ ಸೃಷ್ಟಿಯಾಗಿದೆ.

ಈ ಹೊಸ ಮಾದರಿಯ ವೈರಾಣುವಿನಲ್ಲಿ ‘ಇ484ಕೆ’ ಎಂಬ ಬದಲಾವಣೆ ಇದೆ. ಬ್ರೆಜಿಲ್‌ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೋನಾದಲ್ಲೂ ಇದೇ ಬದಲಾವಣೆ ಕಾಣಿಸಿಕೊಂಡಿತ್ತು. ಲಸಿಕೆಯಿಂದ ದೇಹ ಉತ್ಪಾದಿಸುವ ಅಥವಾ ಹಿಂದೆ ಕಾಣಿಸಿಕೊಂಡ ಸೋಂಕಿನಿಂದ ವೃದ್ಧಿಯಾಗಿರುವ ಪ್ರತಿಕಾಯ ಶಕ್ತಿಗೆ ಪ್ರತಿರೋಧ ತೋರುವ ಗುಣಲಕ್ಷಣಗಳ ಜತೆ ಇದು ನಂಟು ಹೊಂದಿದೆ. ಹೊಸ ಮಾದರಿಯ ಸೋಂಕು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಬಳಿಕ ಛತ್ತೀಸ್‌ಗಢ, ದಿಲ್ಲಿ ಹಾಗೂ ಮಹಾರಾಷ್ಟ್ರದಲ್ಲೂ ಇದು ಕಾಣಸಿಕ್ಕಿದೆ ಎಂದು ವರದಿಗಳು ತಿಳಿಸಿವೆ.

ಕೆಲ ದಿನಗಳ ಹಿಂದಷ್ಟೇ ದೇಶದಲ್ಲಿ ‘ಬಿ.1.617’ ಎಂಬ ಹೊಸ ರೂಪಾಂತರಿ ಕೊರೋನಾ ಪತ್ತೆಯಾಗಿತ್ತು. ಅದನ್ನು ‘ಡಬಲ್‌ ಮ್ಯುಟೆಂಟ್‌’ ಎಂದು ಬಣ್ಣಿಸಲಾಗಿತ್ತು. ಅದಾದ ಬೆನ್ನಲ್ಲೇ ವೈರಸ್‌ ಮತ್ತೊಂದು ರೂಪಾಂತರ ಪಡೆದಿದೆ. ಈ ಎರಡೂ ಮಾದರಿಗಳು ಕೊರೋನಾ ಸೋಂಕನ್ನು ಭಾರಿ ಪ್ರಮಾಣದಲ್ಲಿ ಹಬ್ಬಿಸುತ್ತವೆಯೇ? ಇವು ಮಾರಣಾಂತಿಕವೇ? ಅಥವಾ ಇವು ಹೆಚ್ಚು ಪ್ರತಿರೋಧ ಶಕ್ತಿ ಹೊಂದಿವೆಯೇ ಎಂಬುದರ ಕುರಿತು ವಿಜ್ಞಾನಿಗಳು 10 ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹೆಚ್ಚಳಕ್ಕೆ ಈ ರೂಪಾಂತರಿಗಳೇ ಕಾರಣವೇ ಎಂಬುದಕ್ಕೆ ಇದರಿಂದ ಉತ್ತರ ಸಿಗುವ ನಿರೀಕ್ಷೆ ಇದೆ.

ಏನಿದು ಟ್ರಿಪಲ್‌ ಮ್ಯುಟೆಂಟ್‌?

ಎರಡು ತಳಿಯ ಕೊರೋನಾ ವೈರೆಸ್‌ ಸಂಗಮಗೊಂಡು ಉದ್ಭವಿಸಿದ್ದ ಹೊಸ ತಳಿಗೆ ‘ಡಬಲ್‌ ಮ್ಯುಟೆಂಟ್‌’ ಎನ್ನಲಾಗಿತ್ತು. ಈಗ ಇದು ಮೂರು ವೈರಸ್‌ಗಳ ಸಂಗಮವಾಗಿದೆ. ಅದಕ್ಕೇ ‘ಟ್ರಿಪಲ್‌ ಮ್ಯುಟೆಂಟ್‌’ ಎಂಬ ಹೆಸರಿದೆ. ಇದಕ್ಕೆ ದೇಹದಲ್ಲಿನ ಪ್ರತಿಕಾಯ ಶಕ್ತಿಯನ್ನೂ ಮಣಿಸುವ ಲಕ್ಷಣ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ರೂಪಾಂತರಿ ಮಾರಕವೇ?

ವೈರಾಣು ಹರಡಿದಂತೆ ಅದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಈಗಾಗಲೇ ಭಾರತದಲ್ಲಿ 2ನೇ ಅಲೆ ಹೆಚ್ಚಲು ಡಬಲ್‌ ಮ್ಯುಟೆಂಟ್‌ ವೈರಸ್‌ ಕಾರಣ. ವೈರಾಣು ಪ್ರಬಲ ಆಗಿರುವ ಕಾರಣ ಮಕ್ಕಳಲ್ಲೂ ಹರಡುತ್ತಿದೆ ಎಂದು ಹೇಳಲಾಗಿದೆ. ಹೀಗಿದ್ದಾಗ ಟ್ರಿಪಲ್‌ ಮ್ಯೂಟೆಂಟ್‌ ಹೆಚ್ಚು ಮಾರಕವಾಗಬಹುದು ಎಂಬ ಭೀತಿ ಎದುರಾಗಿದೆ. ಇದಕ್ಕೆಂದೇ ಟ್ರಿಪಲ್‌ ಮ್ಯುಟೆಂಟ್‌ ಎಷ್ಟುಮಾರಕ ಎಂಬ ಅಧ್ಯಯನವನ್ನು 10 ಲ್ಯಾಬ್‌ಗಳಲ್ಲಿ ಅದರ ತಳಿ ಅಧ್ಯಯನ ಮಾಡುವ ಮೂಲಕ ನಡೆಸಲಾಗುತ್ತಿದೆ.

ಇದು ಹೆಚ್ಚು ಸೋಂಕುಕಾರಕ ರೂಪಾಂತರಿ ಕೊರೋನಾ ವೈರಸ್‌. ಇದು ಬಲುಬೇಗ ಜನರಿಗೆ ಸೋಂಕು ಹರಡಿಸುತ್ತದೆ. ಹೀಗಾಗಿ ವೈರಾಣುವಿನ ಸ್ವರೂಪ ಬದಲಾದಂತೆ ಲಸಿಕೆಗಳಲ್ಲೂ ಸುಧಾರಣೆ ತಂದು ಬದಲಾಯಿಸಬೇಕು. ಇದಕ್ಕೆ ವೈರಸ್‌ನ ಅಧ್ಯಯನ ಮಾಡಿ ಅದರ ಗುಣಲಕ್ಷಣ ಅರಿಯುವುದು ಅಗತ್ಯ. ಯುದ್ಧೋಪಾದಿಯಲ್ಲಿ ಅಧ್ಯಯನ ನಡೆಸಬೇಕು. ತಡ ಮಾಡಿದಷ್ಟೂಸೋಂಕಿನ ಸ್ಫೋಟ ಹೆಚ್ಚುತ್ತದೆ.

- ಮಧುಕರ ಪೈ, ಮೆಕ್‌ಗಿಲ್‌ ವಿವಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?