ಸಾಮಾನ್ಯವಾಗಿ ಎಲ್ಲಿಗಾದರೂ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅದನ್ನು ಅಪಶಕುನ ಎಂದು ಕರೆಯುವುದು ನಮ್ಮಲ್ಲಿ ರೂಢಿ. ಆದರೆ ಇಲ್ಲಿ ಬೆಕ್ಕು ಅಡ್ಡ ಬಂದಿದ್ದರಿಂದ ನಡೆದ ಘಟನೆ 10 ಮಹಿಳಾ ಕೂಲಿ ಕಾರ್ಮಿಕರ ಜೀವವನ್ನೇ ಸಂಕಷ್ಟಕ್ಕೆ ದೂಡಿದೆ. ಬೆಕ್ಕನ್ನು ಉಳಿಸಲು ಹೋಗಿ ಚಾಲಕ ಬ್ರೇಕ್ ಹಾಕಿದ್ದರಿಂದ ಆಟೋ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯ ವೇಂಸೂರು ಮಂಡಲದ ಎರ್ನಗುಂಟಪಾಡು ಶಿವಾರಿನಲ್ಲಿ ಈ ಘಟನೆ ನಡೆದಿದೆ. ಅಂಬೇಡ್ಕರ್ ನಗರದ 10 ಮಂದಿ ಮಹಿಳಾ ಕೂಲಿ ಕಾರ್ಮಿಕರು ಮೆಣಸಿನಕಾಯಿ ಸಸಿಗಳನ್ನು ನೆಡುವ ಕೆಲಸಕ್ಕಾಗಿ ರಾಯುಡುಪಾಲೆಂ ಕಡೆಗೆ ಆಟೋದಲ್ಲಿ ಹೊರಟಿದ್ದರು. ಆಟೋ ವೇಗವಾಗಿ ಚಲಿಸುತ್ತಿದ್ದಾಗ ಹಠಾತ್ತಾಗಿ ಬೆಕ್ಕೊಂದು ರಸ್ತೆಗೆ ಅಡ್ಡ ಬಂದಿದೆ. ರಸ್ತೆಗೆ ಅಡ್ಡ ಬಂದ ಬೆಕ್ಕನ್ನು ಕಂಡು ಗಾಬರಿಯಾದ ಆಟೋ ಚಾಲಕ, ಅದನ್ನು ಉಳಿಸಲು ಹಠಾತ್ತಾಗಿ ಸಡನ್ ಬ್ರೇಕ್ ಹಾಕಿದ್ದಾನೆ. ಪರಿಣಾಮವಾಗಿ ವೇಗವಾಗಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಹತ್ತು ಮಹಿಳೆಯರೂ ಗಾಯಗೊಂಡಿದ್ದಾರೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಸತ್ತುಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಮ್ಮಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ