IT Raid: ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಮೇಲೆ ಐಟಿ ದಾಳಿ: 70 ಕೋಟಿ ರು.ಗೂ ಹೆಚ್ಚು ಮೊತ್ತದ ವಂಚನೆ ಹಣ ಜಪ್ತಿ

By Kannadaprabha NewsFirst Published Jan 2, 2022, 2:10 AM IST
Highlights
  • ಮುಂಬೈ ಜಿಎಸ್‌ಟಿ ವಿಚಕ್ಷಣ ದಳದ ಕಾರ್ಯಾಚರಣೆ
  • 70 ಕೋಟಿ ರು.ಗೂ ಹೆಚ್ಚು ಮೊತ್ತದ ವಂಚನೆ ಹಣ ಜಪ್ತಿ

ನವದೆಹಲಿ:(ಜ.02): ಗ್ರಾಹಕರಿಗೆ ಶೇ.18 ಜಿಎಸ್‌ಟಿ ವಿಧಿಸುತ್ತಿದ್ದ ಕಂಪನಿಗಳು ಆ ಹಣವನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದವು. ಅಲ್ಲದೆ, ವಿವಿಧ ಶುಲ್ಕ ವಿಧಿಸುತ್ತಿದ್ದವು. ಮಾರುವ ಹಾಗೂ ಕೊಳ್ಳುವವರಿಂದ ಕಮಿಷನ್‌ ಪಡೆಯುತ್ತಿದ್ದವು. ಇವ್ಯಾವುದಕ್ಕೂ ಜಿಎಸ್‌ಟಿ ಪಾವತಿಸುತ್ತಿರಲಿಲ್ಲ ಎನ್ನಲಾಗಿದೆ. ಕೋಟ್ಯಂತರ ರು. ವಹಿವಾಟು ನಡೆಸುತ್ತಿರುವ ಬಿಟ್‌ಕಾಯಿನ್‌ ಮಾದರಿಯ ಕ್ರಿಪ್ಟೋಕರೆನ್ಸಿಗಳ ವಿನಿಮಯ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸುತ್ತಿರುವುದನ್ನು ಪತ್ತೆಹಚ್ಚಿರುವ ಕೇಂದ್ರ ಸರ್ಕಾರ, 70 ಕೋಟಿ ರು.ಗೂ ಅಧಿಕ ಮೊತ್ತವನ್ನು ಜಪ್ತಿ ಮಾಡಿದೆ.

ಶುಕ್ರವಾರ ವಜೀರ್‌ಎಕ್ಸ್‌ ಎಂಬ ಕ್ರಿಪ್ಟೋಕರೆನ್ಸಿ ಕಂಪನಿ ಜಿಎಸ್‌ಟಿ ವಂಚಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಇನ್ನಿತರ ಕ್ರಿಪ್ಟೋಕರೆನ್ಸಿ ಕಂಪನಿಗಳೂ ತೆರಿಗೆ ವಂಚಿಸುತ್ತಿವೆ ಎಂಬ ಮಾಹಿತಿ ಜಿಎಸ್‌ಟಿ ವಿಚಕ್ಷಣ ದಳಕ್ಕೆ ಬಂದಿತ್ತು. ಆ ಮಾಹಿತಿ ಆಧರಿಸಿ ಶನಿವಾರ ವಿವಿಧ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಜಿಎಸ್‌ಟಿ ವಿಚಕ್ಷಣ ದಳದ ಮುಂಬೈ ವಿಭಾಗದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕ್ರಿಪ್ಟೋಕರೆನ್ಸಿ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸಿದ್ದಾರೆ.

Latest Videos

 

ಮೂಲಗಳ ಪ್ರಕಾರ, ದಾಳಿಯ ನಂತರ ಈ ಕಂಪನಿಗಳು 30 ಕೋಟಿ ರು.ಗಳನ್ನು ಜಿಎಸ್‌ಟಿ ರೂಪದಲ್ಲೂ, 40 ಕೋಟಿ ರು.ಗಳನ್ನು ಬಡ್ಡಿ ಹಾಗೂ ದಂಡದ ರೂಪದಲ್ಲೂ ಪಾವತಿಸಿವೆ.

ಯಾವ್ಯಾವ ಕಂಪನಿಗಳ ಮೇಲೆ ದಾಳಿ:

ವಜೀರ್‌ಎಕ್ಸ್‌, ಕಾಯಿನ್‌ಸ್ವಿಚ್‌ ಕುಬೇರ್‌, ಕಾಯಿನ್‌ಡಿಸಿಎಕ್ಸ್‌, ಬೈಯುಕಾಯಿನ್‌ ಹಾಗೂ ಯುನೋಕಾಯಿನ್‌ ಕ್ರಿಪ್ಟೋಕರೆನ್ಸಿ ಕಂಪನಿಗಳ ಮೇಲೆ ದಾಳಿ ನಡೆದಿದೆ. ಕೇಂದ್ರ ಸರ್ಕಾರದ ನಿಯಮದಂತೆ ಈ ಕಂಪನಿಗಳು ತಮ್ಮಲ್ಲಿ ವಹಿವಾಟು ನಡೆಸುವ ಗ್ರಾಹಕರಿಗೆ 18% ಜಿಎಸ್‌ಟಿ ವಿಧಿಸುತ್ತಿವೆ. ಆದರೆ ಆ ಹಣವನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದವು. ಅಲ್ಲದೆ, ತಮ್ಮಲ್ಲಿ ವಹಿವಾಟು ನಡೆಸುವ ಗ್ರಾಹಕರಿಗೆ ಟ್ರೇಡಿಂಗ್‌ ಫೀ, ಡೆಪಾಸಿಟ್‌ ಫೀ ಮತ್ತು ವಿತ್‌ಡ್ರಾಯಲ್‌ ಫೀ ವಿಧಿಸುತ್ತಿದ್ದವು. ಜೊತೆಗೆ, ಕ್ರಿಪ್ಟೋಕರೆನ್ಸಿ ಖರೀದಿಸುವ ಹಾಗೂ ಮಾರುವ ಇಬ್ಬರೂ ವ್ಯಕ್ತಿಗಳಿಂದ ಕಮಿಷನ್‌ ಪಡೆಯುತ್ತಿದ್ದವು. ಆದರೆ, ಇವ್ಯಾವುದಕ್ಕೂ ಜಿಎಸ್‌ಟಿ ಪಾವತಿಸುತ್ತಿರಲಿಲ್ಲ. ತನ್ಮೂಲಕ ಭಾರಿ ಲಾಭ ಮಾಡಿಕೊಳ್ಳುತ್ತಿದ್ದವು ಎಂದು ಮೂಲಗಳು ಹೇಳಿವೆ.

ಎಗ್ಗಿಲ್ಲದೆ ನಡೆಯುತ್ತಿದೆ ಕ್ರಿಪ್ಟೋ ವ್ಯಾಪಾರ:

ದೇಶದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸಲು ಹಾಗೂ ಜನರು ಅವುಗಳಲ್ಲಿ ಹೂಡಿಕೆ ಮಾಡಲು ಸರ್ಕಾರ ಅನುಮತಿ ನೀಡಿದ ನಂತರ ಈ ಕಂಪನಿಗಳು ಮೊಬೈಲ್‌ ಆ್ಯಪ್‌ ಹಾಗೂ ಇಂಟರ್ನೆಟ್‌ ಮುಖಾಂತರ ಜನರಿಂದ ನೂರಾರು ಕೋಟಿ ರು.ಗಳನ್ನು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿಕೊಳ್ಳುತ್ತಿವೆ. ಆದರೆ, ಅವುಗಳಿಗೆ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ ಎನ್ನಲಾಗಿದೆ.

click me!