South India Rains: ತಿರುಪತಿಯಲ್ಲಿ ಮಹಾಪ್ರವಾಹ, 25 ವರ್ಷಗಳಲ್ಲೇ ಭಾರೀ ಮಳೆ!

By Kannadaprabha NewsFirst Published Nov 20, 2021, 7:41 AM IST
Highlights

* ಬಂಗಾಳಕೊಲ್ಲಿ ವಾಯುಭಾರ ಕುಸಿತ: 25 ವರ್ಷಗಳಲ್ಲೇ ಭಾರೀ ಮಳೆ

* ತಿರುಮಲದಿಂದ ಜಲಪಾತ

* ತೀರ್ಥಕ್ಷೇತ್ರದಲ್ಲಿ ಪ್ರವಾಸಿಗರ ಪರದಾಟ

* ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದಿಂದ ಧುಮ್ಮಿಕ್ಕಿದ ನೀರು

* ತಿರುಪತಿ ಸುತ್ತಮುತ್ತಲಿನ ಅನೇಕ ಜನವಸತಿ ಪ್ರದೇಶಗಳು ಜಲಾವೃತ

* ತಿರುಮಲ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲೂ ಪ್ರವಾಹಸದೃಶ ಪರಿಸ್ಥಿತಿ

- ನೀರಿನ ಸೆಳೆತಕ್ಕೆ ವ್ಯಕ್ತಿ ಕೊಚ್ಚಿ ಹೋದ ಭಯಾನಕ ದೃಶ್ಯಗಳು ವೈರಲ್‌

- ತಿರುಪತಿಯಲ್ಲಿ ದೇವರ ದರ್ಶನ ಸ್ಥಗಿತ. ವಿಮಾನ ಸೇವೆಗಳು ಬಂದ್‌

ತಿರುಪತಿ(ನ. 20): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು (Depression Over Bay Of Bengal) ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ. ವಾಯುಭಾರ ಕುಸಿತದ ಪರಿಣಾಮ ಬುಧವಾರ ರಾತ್ರಿಯಿಂದೀಚೆಗೆ ತಿರುಮಲ (Tirumala), ತಿರುಪತಿ (Tirupati) ಸೇರಿದಂತೆ ಚಿತ್ತೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಗುಲ ನಗರದಲ್ಲಿ ಇಂಥ ಮಳೆ ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ.

ತಿರುಪತಿಯ ಹಲವು ತಗ್ಗುಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಪರಿಸ್ಥಿತಿ (Flood) ನಿರ್ಮಾಣವಾಗಿದೆ. ತಿರುಮಲ ಬೆಟ್ಟಕ್ಕೆ ಹೊಂದಿಕೊಂಡಿರುವ ಎಲ್ಲಾ ನಾಲ್ಕು ಪವಿತ್ರ ಮಾಡಾ ಬೀದಿಗಳು ಮತ್ತು ವೈಕುಂಠ ಕ್ಯೂ ಕಾಂಪ್ಲೆಕ್ಸ್‌ ಕೂಡಾ ಪೂರ್ಣ ಜಲಾವೃತವಾಗಿದೆ. ತಿರುಮಲದ ಜಪಾಲಿ ಆಂಜನೇಯ ದೇಗುಲ ಕೂಡಾ ನೀರಿನಲ್ಲಿ ಮುಳುಗಿದೆ. ಭಾರೀ ಮಳೆಯ ಪರಿಣಾಮ ತಿಮ್ಮಪ್ಪನ ದರ್ಶನವನ್ನು ಗುರುವಾರ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ದೇವರ ದರ್ಶನಕ್ಕೆ ಆಗಮಿಸಿದ್ದ ಸಾಕಷ್ಟು ಜನ ಬೆಟ್ಟದ ಮೇಲೇ ಸಿಕ್ಕಿಬಿದ್ದಿದ್ದಾರೆ.

ತಿರುಪತಿ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಜೊತೆಗೆ ತಿರುಮಲ ಬೆಟ್ಟಕ್ಕೆ ಹತ್ತುವ ರಸ್ತೆ ಮಾರ್ಗದಲ್ಲಿ ಹಲವೆಡೆ ಭೂಕುಸಿತ (Landslide) ಉಂಟಾಗಿದ್ದು, ಮರಗಳು ಬುಡಮೇಲಾಗಿವೆ. ಟಿಟಿಡಿ (TTD)  ವಸತಿಗೃಹಗಳು ಕೂಡಾ ನೀರಿನಲ್ಲಿ ಮುಳುಗಿಹೋಗಿವೆ.

ಇನ್ನು ತಿರುಮಲ ಬೆಟ್ಟದ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು ಜಲಪಾತದ ರೀತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯಗಳು ಮೈ ಜುಮ್ಮೆನಿಸುತ್ತಿವೆ. ಜಾಲತಾಣದಲ್ಲಿ ಹಂಚಿಕೊಳ್ಳಲಾದ ಇನ್ನೊಂದು ವಿಡಿಯೋದಲ್ಲಿ ತಿರುಮಲ ಘಾಟಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಳೆಗೆ ಕೊಚ್ಚಿಹೋದ ದೃಶ್ಯವಿದೆ.

ನಗರದ ಹೊರವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿಯಲ್ಲಿ ನೀರಿನ ಮಟ್ಟಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಪರಿಣಾಮ ಹಲವು ಹಳ್ಳಿಗಳಲ್ಲಿ ಸೊಂಟದ ಮಟ್ಟದವರೆಗೂ ನೀರು ತುಂಬಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ತಿರುಪತಿ ಶ್ರೀ ವೆಂಕಟೇಶ್ವರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಲಾಗಿದೆ. ಮಂದ ಬೆಳಕಿನ ಪರಿಣಾಮ ಬೆಂಗಳೂರು, ಹೈದರಾಬಾದ್‌ನಿಂದ ರೆನುಗುಂಟಾ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನಗಳನ್ನು ವಾಪಸ್‌ ಕಳಿಸಲಾಗಿದೆ. ದಿಲ್ಲಿಯಿಂದ ತಿರುಪತಿಗೆ ಬರಬೇಕಿದ್ದ ವಿಮಾನವನ್ನು ರದ್ದುಪಡಿಸಲಾಗಿದೆ. ಪಾದಯಾತ್ರೆ ಮುಖಾಂತರ ದೇವಸ್ಥಾನಕ್ಕೆ ಹೋಗುವ ಮಾರ್ಗಗಳನ್ನು ಬುಧವಾರದಿಂದಲೇ ಮುಚ್ಚಲಾಗಿತ್ತು

click me!