ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನದ 2.25 ಲಕ್ಷ ಟಿಕೆಟ್‌ ಕೇವಲ 20 ನಿಮಿಷದಲ್ಲಿ ಸೋಲ್ಡ್‌ಔಟ್‌!

Published : Nov 12, 2023, 05:01 PM IST
ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನದ 2.25 ಲಕ್ಷ ಟಿಕೆಟ್‌ ಕೇವಲ 20 ನಿಮಿಷದಲ್ಲಿ ಸೋಲ್ಡ್‌ಔಟ್‌!

ಸಾರಾಂಶ

ಡಿಸೆಂಬರ್‌ 23 ರಿಂದ 10 ದಿನಗಳ ವೈಕುಂಠ ಏಕಾದಶಿ ದ್ವಾರ ದರ್ಶನಕ್ಕಾಗಿ ಟಿಟಿಡಿ ಬಿಡುಗಡೆ ಮಾಡಿದ್ದ 2.25 ಲಕ್ಷ ವಿಶೇಷ ದರ್ಶನದ ಟಿಕೆಟ್‌ಗಳು ಕೇವಲ 20 ನಿಮಿಷದಲ್ಲಿ ಸೋಲ್ಡ್‌ಔಟ್‌ ಆಗಿವೆ.

ಬೆಂಗಳೂರು (ನ.12):  ದಕ್ಷಿಣ ಭಾರತದ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನವೂ ಒಂದಾಗಿದೆ. ಡಿಸೆಂಬರ್‌ 23 ರಿಂದ 10 ದಿನಗಳ ಕಾಲ ವೈಕುಂಠ ಏಕಾದಶಿ ದ್ವಾರ ದರ್ಶನಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ವತಿಯಿಂದ ಆನ್‌ಲೈನ್‌ನಲ್ಲಿ 300 ರೂ. ಮೊತ್ತದ ವಿಶೇಷ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. ಆನ್‌ಲೈನ್‌ ಟಿಕೆಟ್‌ ಬಿಡುಗಡೆ ಮಾಡಿದ ಕೇವಲ 21 ನಿಮಿಷಗಳಲ್ಲಿ 2.25 ಲಕ್ಷ ಟಿಕೆಟ್‌ಗಳು ಕೂಡ ಬುಕಿಂಗ್‌ ಆಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಟಿಕೆಟ್‌ ಬುಕಿಂಗ್‌ ಆಗಿರುವ ದಾಖಲೆ ನಿರ್ಮಾಣವಾಗಿದೆ.

ಡಿ.23ರಿಂದ ಆರಂಭವಾಗುವ ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ನ.10ರ ಶುಕ್ರವಾರದಂದು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್‌ ಮಾಡಲು ಭಕ್ತರಿಗೆ ಆಹ್ವಾನ ನೀಡಲಾಗಿತ್ತು. ಈ ವೇಳೆ ಟಿಕೆಟ್‌ ಬುಕಿಂಗ್‌ ಮಾಡಲು ಬಂದ ಭಕ್ತರಿಗೆ 8 ನಿಮಿಷಗಳ ಕಾಲ ವೇಟಿಂಗ್‌ ಸಮಯ ನಿಗದಿ ಮಾಡಲಾಗಿತ್ತು. ಇನ್ನು ವೇಟಿಂಗ್‌ ಸಮಯದ ನಂತರ ಲಾಗಿನ್‌ ಆಗಿ ಬುಕಿಂಗ್‌ ಮಾಡಲಾಗಿದ್ದು, ಒಂದೊಂದು ಸ್ಲಾಟ್‌ನ ಟಿಕೆಟ್‌ಗಳು 2 ನಿಮಿಷಕ್ಕೆ ಮುಕ್ತಾಯ ಆಗುತ್ತಿತ್ತು. ಹೀಗೆ ಆಧಾರ್‌ಕಾರ್ಡ್‌ ಸಂಖ್ಯೆ ದಾಖಲು ಮಾಡುವಷ್ಟರಲ್ಲಿ ಬುಕಿಂಗ್‌ ಸ್ಲಾಟ್‌ ಮುಗಿದು ಹೋಗುತ್ತಿತ್ತು. ಇದರ ನಡುವೆಯೂ ಬರೋಬ್ಬರು 2.25 ಲಕ್ಷ ಜನರು ಮುಗಿಬಿದ್ಡು ವಿಶೇಷ ದರ್ಶನದ ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ. 

ದೀಪಾವಳಿ ಪಟಾಕಿ ಸಿಡಿಸಲು ಮುಂಜಾಗ್ರತಾ ಕ್ರಮಗಳು: ಅವಘಡಕ್ಕೆ ಸಹಾಯವಾಣಿ ಆರಂಭಿಸಿದ ಸರ್ಕಾರ

ಇನ್ನು ವೈಕುಂಠ ಏಕಾದಶಿ ದಿನದ ಟಿಕೆಟ್‌ಗಳನ್ನು ಒಂದೂವರೆ ತಿಂಗಳ ಮುಂಚಿತವಾಗಿಯೇ ಮಾರಾಟಕ್ಕಿಡಲಾಗಿದೆ. ಅದರಲ್ಲಿ ಒಟ್ಟು 2.25 ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಭಕ್ತರ ವಿಶೇಷ ದರ್ಶನಕ್ಕೆ ಮೀಸಲಿಡಲಾಗಿತ್ತು. ಪ್ರತಿ ವಿಶೇಷ ದರ್ಶನದ ಟಿಕೆಟ್‌ ಬೆಲೆ 300 ರೂಪಾಯಿ ನಿಗದಿಪಡಿಸಲಾಗಿತ್ತು. ಟಿಕೆಟ್‌ ಮಾರಾಟ ಆರಂಭವಾದ ಕೇವಲ 21 ನಿಮಿಷದಲ್ಲಿ ಎಲ್ಲ ಟಿಕೆಟ್‌ಗಳು ಮಾರಾಟವಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಟಿಕೆಟ್‌ಗಳು ಖಾಲಿಯಾಗುವ ಮೂಲಕ ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಇನ್ನು ಟಿಟಿಡಿಯ ವಿಶೇಷ ದರ್ಶನದ ಟಿಕೆಟ್‌ ಬುಕಿಂಗ್‌ನಿಂದ ದೇವಸ್ಥಾನ ಆಡಳಿತ ಮಂಡಳಿಗೆ ಕೇವಲ 20 ನಿಮಿಷದಲ್ಲಿ ಭರ್ಜರಿ 6.75 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. 

ವಿಶೇಷ ದರ್ಶನದ ಟಿಕೆಟ್‌ ಬುಕಿಂಗ್‌ ನಂತರ ವಾಸ್ತವ್ಯಕ್ಕೆ (Accommodation) ಆನ್‌ಲೈನ್‌ ಮೂಲಕ ರೂಮ್‌ ಬುಕಿಂಗ್‌ಗೆ ಶನಿವಾರ (ನ.11ರಂದು) ಬೆಳಗ್ಗೆ 10 ಗಂಟೆಗೆ ಅವಕಾಶ ನೀಡಲಾಗಿತ್ತು. ಈ ವೇಳೆ ತಿರುಪತಿ, ತಿರುಮಲ ಹಾಗೂ ತಲಕೋನದಲ್ಲಿ ರೂಮುಗಳನ್ನು ಬುಕಿಂಗ್‌ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ತಿರುಮಲದ ಎಲ್ಲ ವಾಸ್ತವ್ಯ ಕೊಠಡಿಗಳ ಆನ್‌ಲೈನ್‌ ಬುಕಿಂಗ್‌ 30 ನಿಮಿಷದಲ್ಲಿ ಪೂರ್ಣಗೊಂಡಿತ್ತು. ಇದಾದ ನಂತರ ತಿರುಪತಿಯ ಕೊಠಡಿಗಳು ಬುಕಿಂಗ್‌ ಆದವು. ಇದಾದ ನಂತರ ಎಸಿ ವ್ಯವಸ್ಥೆಯ 1,000 ರೂ. ಬೆಲೆಯ ಕೊಠಡಿಗಳು ಮಧ್ಯಾಹ್ನದ ವೇಳೆಗೆ ಬುಕಿಂಗ್‌ ಪೂರ್ಣಗೊಂಡವು. 

ಸಾಮಾನ್ಯ ದಿನದ ವಿಶೇಷ ದರ್ಶನದ ಟಿಕೆಟ್‌ಗಳೂ ಸೋಲ್ಡ್‌ಔಟ್‌: ಇನ್ನು ಸಾಮಾನ್ಯ ದಿನಗಳಲ್ಲಿ ತಿರುಪತಿ ದೇವಸ್ಥಾನದ ವಿಶೇಷ ದರ್ಶನದ ಟಿಕೆಟ್‌ಗಳು ಕೂಡ ಈಗಾಗಲೇ ಬುಕಿಂಗ್‌ ಪೂರ್ಣಗೊಂಡಿವೆ. 2024ರ ಜನವರಿ 31ರವರೆಗೆ ತಿರುಮಲ ತಿರುಪತಿ ದೇವಸ್ಥಾನದ ಎಲ್ಲ ವಿಶೇಷ ದರ್ಶನದ ಟಿಕೆಟ್‌ಗಳು ಕೂಡ ಸೋಲ್ಡ್‌ಔಟ್‌ ಆಗಿವೆ. ಹೀಗಾಗಿ, ಸದ್ಯಕ್ಕೆ ವಿಶೇಷ ದರ್ಶನದ ಆನ್‌ಲೈನ್‌ ಬುಕಿಂಗ್‌ ಕೋಟಾ ತೆರೆಯುವ ಸಾಧ್ಯತೆ ತೀರಾ ಕಡಿಮೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಭಕ್ತರು ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್‌ ದಿನಾಂಕವನ್ನು ನೋಡಿಕೊಂಡು ಬುಕಿಂಗ್‌ ಮಾಡಬೇಕು. 

ಬೆಂಗಳೂರು ವಾಯು ವಿಹಾರಿಗಳ ಮೇಲೆ ಹರಿದ ಕಾರು: ವೃದ್ಧೆ ಹಾಗೂ ಬಾಲಕಿಗೆ ಗಂಭೀರ ಗಾಯ

ನೇರವಾಗಿ ದರ್ಶನಕ್ಕೆ ಹೋಗುವವರಿಗೂ ಅವಕಾಶ: ಇನ್ನು ನಮಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ ಎನ್ನುವವರು ವೈಕುಂಠ ಏಕಾದಶಿ, ಗ್ರಹಣ ಸೇರಿದಂತೆ ಕೆಲವು ವಿಶೇಷ ದಿನಗಳನ್ನು ಹೊರತುಪಡಿಸಿ ನೇರ ದರ್ಶನಕ್ಕೆ ಹೋಗಬಹುದು. ನಿಮ್ಮ ಸ್ಥಳದಿಂದ ನೇರವಾಗಿ ತಿರುಪತಿಗೆ ತೆರಳಿ ಅಲ್ಲಿರುವ ಕೆಲವು ವಿಶೇಷ ಕೌಂಟರ್‌ಗಳಲ್ಲಿ ಧರ್ಮದರ್ಶನದ ಟಿಕೆಟ್‌ಗಳನ್ನು ಮಾಡಿಸಿಕೊಂಡು ತಿರುಮಲಕ್ಕೆ ಹೋಗಬೇಕು. ತಿರುಮಲದಲ್ಲಿ ನಿಮಗೆ ನೀಡಲಾಗಿರುವ ದೇವಸ್ಥಾನದ ಗೇಟ್‌ನಲ್ಲಿ ನಿಂತುಕೊಂಡು ಸರತಿ ಸಾಲಿನಲ್ಲಿ ಹೋಗಿ ದರ್ಶನ ಮಾಡಿಕೊಂಡು ಬರಬಹುದು. ತಿರುಮಲದ ದೇವಸ್ಥಾನದಲ್ಲಿ ಧರ್ಮ ದರ್ಶನದ ಅವಧಿ ಸುಮಾರು 2-3 ಗಂಟೆ ಆಗಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?