
ಪಿಟಿಐ ದಿಬ್ರುಗಢ (ಅಸ್ಸಾಂ): ಅಂತಾರಾಷ್ಟ್ರೀಯ ಯೋಗ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜೂ.21ರಂದು ನಡೆಯಲಿರುವ ಈ ಸಲದ ಯೋಗ ದಿನಾಚರಣೆಯಲ್ಲಿ ವಿಶ್ವದಾದ್ಯಂತ 25 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಮುಖ್ಯ ಸಮಾರಂಭ ನ್ಯೂಯಾರ್ಕ್ ವಿಶ್ವಸಂಸ್ಥೆ ಕಚೇರಿಯಲ್ಲಿ ನಡೆಯಲಿದೆ. ಆ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಹಾಜರಾಗಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಭಾರತದ ಮುಖ್ಯ ಸಮಾರಂಭ ಜಬಲ್ಪುರದಲ್ಲಿ (Jabalpura) ನಡೆಯಲಿದೆ. ಅಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ವಸುಧೈವ ಕುಟುಂಬಕಂ’ (ವಿಶ್ವ ಒಂದೇ ಕುಟುಂಬ) ಎಂಬುದೇ ಯೋಗ ದಿನಾಚರಣೆಯ ಮೂಲ ಧ್ಯೇಯವಾಗಿದೆ. ಈ ಸಲ ವಿಶ್ವದ ವಿವಿಧ ಬಂದರುಗಳಲ್ಲಿ ಲಂಗರು ಹಾಕಿರುವ 9 ನೌಕಾಪಡೆ ಹಡಗಿನಲ್ಲಿ ‘ಓಷ್ಯನ್ ರಿಂಗ್ ಆಫ್ ಯೋಗ’ ಎಂಬ ವಿಶೇಷ ಪ್ರದರ್ಶನ ನಡೆಯಲಿದೆ. ‘ಯೋಗ ಭಾರತಮಾಲಾ’ ಪ್ರದರ್ಶನದಲ್ಲಿ ಭಾರತದ ಮೂರೂ ಸೇನಾಪಡೆ ಪಾಲ್ಗೊಳ್ಳಲಿವೆ. ‘ಯೋಗ ಸಾಗರಮಾಲಾ’ ಅಡಿ ಐಎನ್ಎಸ್ ವಿಕ್ರಾಂತ್ (INS Vikranth) ಯುದ್ಧನೌಕೆಯಲ್ಲಿ ಯೋಗ ಏರ್ಪಾಟಾಗಿದೆ. ಉತ್ತರ ಧ್ರುವ (North Pole) ಹಾಗೂ ದಕ್ಷಿಣ ಧ್ರುವದಲ್ಲೂ (South Pole) ಯೋಗ ದಿನ ನಡೆಯಲಿದೆ. ಎಲ್ಲ ಗ್ರಾಮ ಪ್ರಧಾನರಿಗೂ ಪ್ರಧಾನಿ ಮೋದಿ ಪತ್ರ ಬರೆದು ಯೋಗ ದಿನವನ್ನು ಗ್ರಾಮಗಳ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ ಉತ್ತೇಜಿಸಲು ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಮೋದಿಗೆ 180 ದೇಶದ ಜನರ ಸಾಥ್
ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಆಯೋಜನೆಯಾಗಿರುವ ಅಂತಾರಾಷ್ಟ್ರೀಯ ಯೋಗ (International Yoga Day) ದಿನಾಚರಣೆ ಕಾರ್ಯಕ್ರಮದಲ್ಲಿ 180 ದೇಶಗಳ ಜನ ಭಾಗಿಯಾಗಲಿದ್ದಾರೆ. ಇವರಲ್ಲಿ ಅಧಿಕಾರಿಗಳು, ಕಲಾವಿದರು, ವಿದ್ವಾಂಸರು ಮತ್ತು ಉದ್ಯಮಿಗಳು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 180 ವಿವಿಧ ದೇಶಗಳ ಜನ ಇದರಲ್ಲಿ ಭಾಗಿಯಾಗಲಿದ್ದು ಇವರು ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸಲಿದ್ದಾರೆ. ಪ್ರಧಾನಿ ಮೋದಿ ಅವರು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದು, ಜೂ.21ರಂದು ಬೆಳಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಕಾರ್ಯಕ್ರಮ ವಿಶ್ವಸಂಸ್ಥೆಯಲ್ಲಿ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ