ಸಾವಿನ ಕುಣಿಕೆಯಿಂದ 8 ಮಂದಿ ಪಾರಾಗಿದ್ದು ಹೇಗೆ, ಮೋದಿ-ಧೋವಲ್‌-ಜೈಶಂಕರ್‌ ರೆಡಿ ಮಾಡಿದ್ರು ಪ್ಲ್ಯಾನ್‌ A & B!

By Santosh Naik  |  First Published Feb 12, 2024, 8:28 PM IST

ಕತಾರ್‌ನಲ್ಲಿ ಜೈಲಿನಲ್ಲಿದ್ದ ಎಂಟು ಮಾಜಿ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಎಲ್ಲಾ ಭಾರತೀಯರಿಗೆ ಕತಾರ್ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್ 26 ರಂದು ಮರಣದಂಡನೆ ವಿಧಿಸಿತ್ತು. ಹೀಗಿರುವಾಗ ಅವರನ್ನು ನೇಣು ಕುಣಿಕೆಯಿಂದ ತಪ್ಪಿಸಿದ್ದು ಹೇಗೆ  ಗೊತ್ತಾ?
 


ನವದೆಹಲಿ (ಫೆ.12):ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಎಂಟು ಭಾರತೀಯರಲ್ಲಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, 'ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಕತಾರ್‌ನಲ್ಲಿ ಬಂಧಿತರಾಗಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ' ಎಂದು ಹೇಳಿದೆ.  ಈ ಭಾರತೀಯರನ್ನು ಆಗಸ್ಟ್ 2022 ರಲ್ಲಿ ಕತಾರ್‌ನಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷ, ಕತಾರ್ ನ್ಯಾಯಾಲಯವು ಬೇಹುಗಾರಿಕೆ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಮರಣದಂಡನೆ ವಿಧಿಸಿತ್ತು. ಆ ಬಳಿಕ ಶಿಕ್ಷೆಯನ್ನು ಕಡಿಮೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರಂದು ಕತಾರ್ ರಾಜಧಾನಿ ದೋಹಾಗೆ ಹೋಗುತ್ತಿರುವ ಸಮಯದಲ್ಲಿ ಭಾರತೀಯರ ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ತಮ್ಮ ಯುಎಇ ಪ್ರವಾಸದ ನಂತರ ಕತಾರ್ ತಲುಪಲಿದ್ದಾರೆ.

ಈ ಭಾರತೀಯರು ಯಾರು?: ಕ್ಯಾಪ್ಟನ್ ಸೌರಭ್ ವಶಿಷ್ಠ, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಾಕಲಾ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಕತಾರ್‌ನಲ್ಲಿ ಬಂಧನಕ್ಕೊಳಗಾದ 8 ಮಾಜಿ ನೌಕಾಪಡೆಯ ಅಧಿಕಾರಿಗಳಾಗಿದ್ದಾರೆ. ಈ ಎಲ್ಲಾ ಮಾಜಿ ಅಧಿಕಾರಿಗಳು ಭಾರತೀಯ ನೌಕಾಪಡೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನೌಕಾಪಡೆಯಲ್ಲಿದ್ದಾಗ, ಅವರ ಅಧಿಕಾರಾವಧಿಯು ಯಾವುದೇ ವಿವಾದಗಳಿಲ್ಲದೆ ಕೊನೆಗೊಂಡಿತ್ತು ಮತ್ತು ಅವರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಮಾಂಡರ್ ಪೂರ್ಣೇಂದು ತಿವಾರಿ ಅವರಿಗೆ 2019 ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರವಾಸಿ ಭಾರತೀಯ ಸಮ್ಮಾನ್ ನೀಡಿ ಗೌರವಿಸಿದ್ದರು. ಅದೇ ಸಮಯದಲ್ಲಿ, ಕ್ಯಾಪ್ಟನ್ ನವತೇಜ್ ಗಿಲ್ ಅವರಿಗೆ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ನೀಡಲಾಗಿದೆ. ಇದೀಗ ಕಮಾಂಡರ್ ಪೂರ್ಣೇಂದು ತಿವಾರಿ ಹೊರತುಪಡಿಸಿ ಉಳಿದ ಮಾಜಿ ಅಧಿಕಾರಿಗಳು ಭಾರತಕ್ಕೆ ಮರಳಿದ್ದಾರೆ. ಅವರು ಪ್ರಸ್ತುತ ದೋಹಾದಲ್ಲಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ

ಕಳೆದ ವರ್ಷ ಮರಣದಂಡನೆ ವಿಧಿಸಲಾಗಿತ್ತು: ಈ ಮಾಜಿ ಅಧಿಕಾರಿಗಳನ್ನು ಆಗಸ್ಟ್ 2022 ರಲ್ಲಿ ಬಂಧಿಸಲಾಗಿತ್ತು.  ಆದರೆ ಈ ಸುದ್ದಿ ಅಕ್ಟೋಬರ್ 25 ರಂದು ಬೆಳಕಿಗೆ ಬಂದಿತು, ಕಮಾಂಡರ್ ಪೂರ್ಣೇಂದು ತಿವಾರಿ ಅವರ ಸಹೋದರಿ ಮಿತು ಭಾರ್ಗವ ಅವರು ಎಕ್ಸ್‌ನಲ್ಲಿ ಈ ಕುರಿತಾಗಿ ಪೋಸ್ಟ್‌ ಮಾಡಿದ್ದರು. ಮಿತು ಭಾರ್ಗವ ಅವರು, 'ಕತಾರ್‌ನ ರಾಜಧಾನಿ ದೋಹಾದಲ್ಲಿ 57 ದಿನಗಳ ಕಾಲ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳು ಅಕ್ರಮ ಬಂಧನದಲ್ಲಿದ್ದಾರೆ' ಎಂದು ತಿಳಿಸಿದ್ದರು. ಆ ಬಳಿಕ ಕಳೆದ ವರ್ಷ ಮಾರ್ಚ್ 1 ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು. ಮಾರ್ಚ್ 25 ರಂದು ಚಾರ್ಜ್‌ಶೀಟ್‌ ದಾಖಲಿಸಿ, ಮಾರ್ಚ್ 29 ರಂದು ವಿಚಾರಣೆ ಪ್ರಾರಂಭವಾಯಿತು. ಅಕ್ಟೋಬರ್ 26 ರಂದು ನ್ಯಾಯಾಲಯವು ಎಲ್ಲರಿಗೂ ಮರಣದಂಡನೆ ವಿಧಿಸಿತು.

108 ದಿನಗಳಲ್ಲೇ ಬಿಡುಗಡೆಯ ನಿರ್ಧಾರ: ಅಕ್ಟೋಬರ್ 26 ರಂದು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಲಾದರೆ, ಫೆಬ್ರವರಿ 12 ರ ಬೆಳಿಗ್ಗೆ ಎಲ್ಲರೂ ಭಾರತಕ್ಕೆ ಮರಳಿದರು. ಅಂದರೆ ಮರಣದಂಡನೆಯನ್ನು ಘೋಷಿಸಿದ 108 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ. ಮರಣದಂಡನೆಯ ನಿರ್ಧಾರದ ನಂತರ, ಭಾರತೀಯ ವಿದೇಶಾಂಗ ಸಚಿವಾಲಯವು, 'ಮರಣದಂಡನೆಯ ನಿರ್ಧಾರದಿಂದ ನಮಗೆ ಆಶ್ಚರ್ಯವಾಗಿದೆ. ನಿರ್ಧಾರದ ವಿವರವಾದ ಪ್ರತಿಗಾಗಿ ನಾವು ಕಾಯುತ್ತಿದ್ದೇವೆ. ನಾವು ಕುಟುಂಬ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ನಾಗರಿಕರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ' ಎಂದಿತ್ತು. ಈ ನಿರ್ಧಾರದ ಕೆಲವು ದಿನಗಳ ನಂತರ, ಭಾರತವು ನವೆಂಬರ್ 9 ರಂದು ಮೇಲ್ಮನವಿ ಸಲ್ಲಿಸಿತು. ನವೆಂಬರ್ 23 ರಂದು ನ್ಯಾಯಾಲಯವು ಈ ಮನವಿಯನ್ನು ಸ್ವೀಕಾರ ಮಾಡಿತ್ತು. ಮರಣದಂಡನೆ ತೀರ್ಪಿನ ಒಂದು ತಿಂಗಳೊಳಗೆ ಈ ಮನವಿಯನ್ನು ಅಂಗೀಕರಿಸಿರುವುದು ದೊಡ್ಡ ವಿಜಯವಾಗಿದೆ. ಆದರೆ ಇದೆಲ್ಲದರ ನಡುವೆ ಡಿಸೆಂಬರ್ 28 ರಂದು ಕತಾರ್ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ಕಡಿತಗೊಳಿಸಿದಾಗ ದೊಡ್ಡ ನೆಮ್ಮದಿ ಸಿಕ್ಕಿತ್ತು. ನ್ಯಾಯಾಲಯ ಇವರಿಗೆ ಮೂರರಿಂದ 25 ವರ್ಷಗಳ ಜೈಲು ಶಿಕ್ಷೆ ವಿಧಿಸುವ ತೀರ್ಮಾನ ಮಾಡಿತ್ತು. ಅಲ್ಲದೆ ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ಕೂಡ ನೀಡಿತ್ತು. 

Tap to resize

Latest Videos

ಕತಾರ್ ಎಮಿರ್ ಜೊತೆ ಪ್ರಧಾನಿ ಮೋದಿ ಭೇಟಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಒಪಿ 28ರಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ದುಬೈಗೆ ತೆರಳಿದ್ದರು. ಈ ಶೃಂಗಸಭೆಯ ನಡುವೆ, ಅವರು ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಭೇಟಿಯಾಗಿದ್ದರು. ಕತಾರ್ ಜೈಲಿನಲ್ಲಿ ಭಾರತೀಯರನ್ನು ಇರಿಸಲಾಗಿರುವ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಕತಾರ್ ಎಮಿರ್ ನಡುವಿನ ಈ ಸಭೆ ನಡೆಯಿತು. ಈ ಸಭೆಯಲ್ಲಿ ಭಾರತೀಯರ ಬಿಡುಗಡೆಯ ಬಗ್ಗೆಯೂ ಚರ್ಚಿಸಲಾಗಿತ್ತು.ಆದರೆ, ಎರಡೂ ದೇಶಗಳು ಇದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ. ಆಗ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಇಬ್ಬರ ನಡುವೆ ಉತ್ತಮ ಮಾತುಕತೆ ನಡೆದಿದೆ ಎಂದು ಹೇಳಿದ್ದರು .ಈ ವಿಷಯದ ಬೆಳವಣಿಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅಂದು ತಿಳಿಸಿದ್ದರು.

ಕತಾರ್‌ನಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದ ನೇವಿ ಮಾಜಿ ಅಧಿಕಾರಿಗಳ ಪ್ರತಿಕ್ರಿಯೆ ಹೇಗಿತ್ತು?

ಜೈಶಂಕರ್ ಮುಂದೆ, ದೋವಲ್ ಹಿಂದೆ: ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕತಾರ್ ಜೈಲಿನಲ್ಲಿರುವ ಭಾರತೀಯರ ಬಿಡುಗಡೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಜೈಶಂಕರ್ ಮುಂಭಾಗದಲ್ಲಿ ಕಾಣಿಸಿಕೊಂಡರೆ, ದೋವಲ್ ಇಡೀ ಕೆಲಸವನ್ನು ತೆರೆಮರೆಯಲ್ಲಿ ನಿರ್ವಹಿಸುತ್ತಿದ್ದರು. ರಾಜತಾಂತ್ರಿಕತೆಗೆ ಸಂಬಂಧಿಸಿದ ಪ್ರಮುಖ ಉಸ್ತುವಾರಿಯನ್ನು ಜೈಶಂಕರ್ ವಹಿಸಿಕೊಂಡಿದ್ದರು. ಜೈಶಂಕರ್ ಈ ಎಂಟು ಭಾರತೀಯರ ಕುಟುಂಬಗಳನ್ನೂ ಭೇಟಿ ಮಾಡಿದ್ದರು. ಇದೇ ವೇಳೆ ಭಾರತೀಯರ ಬಿಡುಗಡೆಗೆ ಕತಾರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಂಪೂರ್ಣ ಜವಾಬ್ದಾರಿ ಧೋವಲ್‌  ಮೇಲಿತ್ತು. ಪ್ರಧಾನಿ ಮೋದಿಯವರ ಸಲಹೆಯ ಮೇರೆಗೆ ಎನ್‌ಎಸ್‌ಎ ದೋವಲ್ ಕತಾರ್ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಮರಣದಂಡನೆ ತೀರ್ಪಿನ ನಂತರ ದೋವಲ್ ಎರಡು ಮೂರು ಬಾರಿ ದೋಹಾಗೆ ಹೋಗಿದ್ದರು.

ಭಾರತದ ರಾಜತಾಂತ್ರಿಕತೆಗೆ ದೊಡ್ಡ ಗೆಲುವು: ಗಲ್ಲುಶಿಕ್ಷೆ ಘೋಷಿಸಲ್ಪಟ್ಟಿದ್ದನೌಕಾಪಡೆಯ 8 ಮಾಜಿ ಅಧಿಕಾರಿಗಳ ಬಿಡುಗಡೆಗೊಳಿಸಿದ ಕತಾರ್

ರೆಡಿ ಇತ್ತು ಪ್ಲಾನ್-ಬಿ: ಭಾರತೀಯರನ್ನು ಬಿಡುಗಡೆ ಮಾಡುವಂತೆ ಮೋದಿ ಸರ್ಕಾರದ ಮೇಲೆ ನಿರಂತರ ಒತ್ತಡವಿತ್ತು. ವಿರೋಧ ಪಕ್ಷಗಳೂ ಈ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದವು. ಇದೇ ವೇಳೆ ಸರ್ಕಾರ ಪ್ಲಾನ್-ಬಿಯನ್ನೂ ಸಿದ್ಧಪಡಿಸಿತ್ತು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಮೋದಿ ಸರ್ಕಾರವು 2015 ರಲ್ಲಿ ಕತಾರ್‌ನೊಂದಿಗೆ ಸಹಿ ಮಾಡಿದ ಒಪ್ಪಂದದ ನಿಬಂಧನೆಗಳನ್ನು ಜಾರಿಗೆ ತರಲು ಚಿಂತನೆ ಮಾಡಿತ್ತು. ಈ ಒಪ್ಪಂದವು ಕೈದಿಗಳ ವಿನಿಮಯಕ್ಕೆ ಸಂಬಂಧಿಸಿದ್ದಾಗಿತ್ತು. ಈ ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ಕತಾರ್ ಎರಡೂ ಪರಸ್ಪರರ ಜೈಲುಗಳಲ್ಲಿ ಇರುವ ನಾಗರಿಕರನ್ನು ಅವರ ಉಳಿದ ಶಿಕ್ಷೆಯನ್ನು ಅನುಭವಿಸಲು ತಮ್ಮ ದೇಶಕ್ಕೆ ಕಳುಹಿಸಬಹುದು. ಈ ಒಪ್ಪಂದದ ಮೂಲಕ, ಭಾರತವು ಕತಾರ್‌ನಲ್ಲಿ ಸೆರೆಯಲ್ಲಿರುವ ತನ್ನ ಎಂಟು ನಾಗರಿಕರನ್ನು ಮರಳಿ ಕರೆತರಬಹುದಾಗಿತ್ತು. ಆದರೆ, ಪ್ಲ್ಯಾನ್‌ ಬಿ ಜಾರಿಗೆ ಅವಕಾಶ ಸಿಗಲಿಲ್ಲ.
 

click me!