
ನವದೆಹಲಿ: ಮಧ್ಯಪ್ರಾಚ್ಯ ಕದನ ಹಾಗೂ ಜಾಗತಿಕ ಉದ್ವಿಗ್ನತೆಗಳ ನಡುವೆಯೇ, ದೆಹಲಿಯಲ್ಲಿ ಬಹುನಿರೀಕ್ಷಿತ 18ನೇ ಬ್ರಿಕ್ಸ್ ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ವ್ಯಾಪಾರ, ಇಂಧನ ಭದ್ರತೆ ಮತ್ತು ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿರ್ಣಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭಾರತ ಮಂಟಪದಲ್ಲಿ ಶೃಂಗಸಭೆ ನಡೆಯಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ವಿಸ್ತರಿತ ಒಕ್ಕೂಟದ ವಿಶ್ವನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಪೂರೈಕೆ ಸರಪಳಿಯ ವ್ಯತ್ಯಯ ಮತ್ತು ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಈ ಶೃಂಗಸಭೆಯು ಜಾಗತಿಕ ಗಮನ ಸೆಳೆದಿದೆ.
ಶೃಂಗಸಭೆಯ ಮೊದಲ ದಿನವಾದ ಶನಿವಾರ ಮಧ್ಯಾಹ್ನ 2:35ಕ್ಕೆ ‘ಸಮಗ್ರ ಜಾಗತಿಕ ಆಡಳಿತ ಹಾಗೂ ಬಹುಪಕ್ಷೀಯತೆಯ ಬಲವರ್ಧನೆ’ ವಿಷಯದ ಕುರಿತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರ ನಡುವೆ ಮುಚ್ಚಿದ ಬಾಗಿಲಿನ ಸಭೆ ನಡೆಯಲಿದೆ. ತದನಂತರ 4.25ಕ್ಕೆ ನಾಯಕರು ‘ಭಾರತ್ ಇನ್ನೋವೇಟ್ಸ್’ ಪ್ರದರ್ಶನ ವೀಕ್ಷಿಸಲಿದ್ದು, ಅಧಿಕೃತ ಛಾಯಾಚಿತ್ರ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಪ್ರಧಾನಿ ಮೋದಿಯವರು ಆಗಮಿಸಿದ ಎಲ್ಲಾ ವಿಶ್ವನಾಯಕರಿಗೆ ವಿಶೇಷ ಭೋಜನಕೂಟ ಆಯೋಜಿಸಲಿದ್ದಾರೆ.
2ನೇ ದಿನವಾದ ಭಾನುವಾರ ಬೆಳಗ್ಗೆ 9.55ಕ್ಕೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು, ಪಾಲುದಾರ ದೇಶಗಳು ಹಾಗೂ ಆಹ್ವಾನಿತ ಪ್ರತಿನಿಧಿಗಳ ಆಗಮನದೊಂದಿಗೆ ಸಭೆ ಆರಂಭವಾಗಲಿದೆ. ಬೆಳಿಗ್ಗೆ 10:50ಕ್ಕೆ ‘ಸ್ಥಿರತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ: ಸಮಗ್ರ ಜಾಗತಿಕ ಪ್ರಗತಿಯ ಭವಿಷ್ಯ ರೂಪಿಸುವಿಕೆ’ ಎಂಬ ಶೀರ್ಷಿಕೆಯಡಿಯಲ್ಲಿ ಮುಖ್ಯ ಮುಕ್ತ ಅಧಿವೇಶನ ನಡೆಯಲಿದೆ. ಸಭೆಯ ಕೊನೆಯಲ್ಲಿ ಜಾಗತಿಕ ಮಟ್ಟದ ವಿವಿಧ ಒಪ್ಪಂದಗಳು ಮತ್ತು ನಿರ್ಣಯಗಳನ್ನು ಒಳಗೊಂಡ ‘ನವದೆಹಲಿ ಘೋಷಣೆ’ಯನ್ನು ಹೊರಡಿಸುವುದರೊಂದಿಗೆ ಶೃಂಗಸಭೆ ಮುಕ್ತಾಯಗೊಳ್ಳಲಿದೆ.
ಈ ಪ್ರಮುಖ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ಇಂಧನ ಮತ್ತು ಆಹಾರ ಭದ್ರತೆ, ವ್ಯಾಪಾರ, ಹೂಡಿಕೆ ಹಾಗೂ ನಿರ್ಣಾಯಕ ಪೂರೈಕೆ ಸರಪಳಿಗಳ ಬಲವರ್ಧನೆಯ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಇದರೊಂದಿಗೆ ಜಾಗತಿಕ ಮಟ್ಟದ ಪ್ರಾದೇಶಿಕ ಸಂಘರ್ಷಗಳು, ಆರ್ಥಿಕ ಹಿನ್ನಡೆ ಹಾಗೂ ಅಮೆರಿಕನ್ ಡಾಲರ್‌ಗೆ ಪರ್ಯಾಯವಾಗಿ ಪ್ರತ್ಯೇಕ ಕರೆನ್ಸಿ ರೂಪಿಸುವ ವಿಷಯಗಳ ಕುರಿತಾಗಿಯೂ ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ.
ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಈಜಿಪ್ಟ್, ಮಲೇಷ್ಯಾ, ಯುಎಇ, ಇಥಿಯೋಪಿಯಾ ಹಾಗೂ ವಿಯೆಟ್ನಾಂ ದೇಶಗಳ ಪ್ರಧಾನಮಂತ್ರಿಗಳು/ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಮಹಾನಿರ್ದೇಶಕ ಆಂಟೋನಿಯೊ ಗುಟೆರಸ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಎಐಐಬಿ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಪ್ರಸ್ತುತ ಭಾರತ, ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ದೇಶಗಳು ಬ್ರಿಕ್ಸ್ ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.
ಬ್ರಿಕ್ಸ್ ದೇಶಗಳು ಜಾಗತಿಕ ಜನಸಂಖ್ಯೆಯ ಸುಮಾರು ಶೇಕಡಾ 49.5, ಜಾಗತಿಕ ಜಿಡಿಪಿಯ ಶೇ.40 ಮತ್ತು ಜಾಗತಿಕ ವ್ಯಾಪಾರದ ಶೇ.26ರಷ್ಟು ಪಾಲು ಹೊಂದಿವೆ.
ಅರ್ಥಪೂರ್ಣ ಚರ್ಚೆಗೆ ಬ್ರಿಕ್ಸ್ ವೇದಿಕೆ
ಪ್ರಪಂಚದಾದ್ಯಂತದ ನಾಯಕರು ಬ್ರಿಕ್ಸ್ ಶೃಂಗಸಭೆಗೆ ಸೇರುತ್ತಾರೆ. ಜಾಗತಿಕ ಕಲ್ಯಾಣಕ್ಕಾಗಿ ಹಂಚಿಕೆಯ ಆಶಯದೊಂದಿಗೆ ವಿವಿಧ ವಿಷಯಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆಯುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
- ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ