
ನವದೆಹಲಿ: ಕೇರಳಕ್ಕೆ ಮುಂಗಾರು ಜೂ.4ರಂದು ಆಗಮಿಸದೇ ವಿಳಂಬವಾಗಿರುವ ನಡುವೆಯೇ, ಇದು ಮುನ್ನುಗ್ಗಲು ಮತ್ತೊಂದು ಅಡ್ಡಿ ಎದುರಾಗಿದೆ. ನೈಋುತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಗೋಚರವಾಗಿದ್ದು, ಇದು ಮುಂಗಾರು ಮಾರುತಗಳು ಕೇರಳದತ್ತ ನುಗ್ಗಲು ಅಡ್ಡಿ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಹೇಳಿದೆ. ಇದರಿಂದಾಗಿ ದೇಶದಲ್ಲಿ ಮಳೆಗಾಲ ಆರಂಭ ಇನ್ನಷ್ಟು ತಡ ಆಗುವ ಸಾಧ್ಯತೆ ಹೆಚ್ಚಿದೆ.
ನೈಋುತ್ಯ ಅರಬ್ಬಿ ಸಮುದ್ರದಲ್ಲಿ ಸುಮಾರು 2.1 ಕಿ.ಮೀ. ಎತ್ತರದವರೆಗೆ ಮಾರುತಗಳು ಬೀಸುತ್ತಿವೆ. ಇವು ಉತ್ತರ ದಿಕ್ಕಿನತ್ತ ಸಾಗಿ 24 ತಾಸಿನಲ್ಲಿ ಕಡಿಮೆ ಒತ್ತಡ ವಾತಾವರಣ ಸೃಷ್ಟಿಸಲಿವೆ. ಇವು ಮುಂಗಾರು ಮಾರುತಗಳು ಕೇರಳದತ್ತ ನುಗ್ಗುವ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅದು ಹೇಳಿದೆ. ಆದರೆ, ಮುಂಗಾರು ಯಾವಾಗ ಕೇರಳವನ್ನು ಪ್ರವೇಶಿಸಬಹುದು ಎಂಬುದರ ಬಗ್ಗೆ ನಿಖರವಾದ ದಿನಾಂಕವನ್ನು ಇಲಾಖೆ ಸ್ಪಷ್ಟಪಡಿಸಿಲ್ಲ. ಈ ಮೊದಲು ಜೂ.4ರಂದು ಮುಂಗಾರು (Monsoon) ಕೇರಳ (Kerala) ಪ್ರವೇಶಿಸಬಹುದು ಎಂದಿತ್ತು. ಬಳಿಕ ಇದು 4 ದಿನ ತಡವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿತ್ತು.
ವರುಣನ ಕೃಪೆಗಾಗಿ ಬಾನಿನತ್ತ ಸುರಪುರ ತಾಲೂಕಿನ ಅನ್ನದಾತರ ಚಿತ್ತ
2018ರಲ್ಲಿ ಮುಂಗಾರು ಮೇ 29ರಂದು ಕೇರಳವನ್ನು ಪ್ರವೇಶಿಸಿತ್ತು. ಬಳಿಕ 2019ರಲ್ಲಿ ಜೂ.8, 2020ರಲ್ಲಿ ಜೂ.1, 2021ರಲ್ಲಿ ಜೂ.3, 2022ರಲ್ಲಿ ಮೇ 29ರಂದು ಕೇರಳ ಪ್ರವೇಶಿಸಿತ್ತು.
ಮುಂಗಾರುಪೂರ್ವ ಮಳೆ ಕೊರತೆ; 79 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ!
ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ79.72 ಅಡಿಗೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಕಳೆದ 5 ವರ್ಷಗಳಿಂದ ಅಣೆಕಟ್ಟೆಯ ನೀರಿನ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿತ್ತು. ಆದರೆ, ಈ ವರ್ಷ ಅತಿ ಕಡಿಮೆ ಪ್ರಮಾಣದ ನೀರು ಸಂಗ್ರಹವಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಭೀತಿ ಎದುರಾಗಿದೆ.
ಪ್ರಸ್ತುತ ಜಲಾಶಯಕ್ಕೆ 344 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ 2991 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನದಿಗೆ 280 ಕ್ಯುಸೆಕ್, ವಿಶ್ವೇಶ್ವರಯ್ಯ ನಾಲೆಗೆ 2503 ಕ್ಯುಸೆಕ್, ಆರ್‌ಬಿಎಲ್‌ಎಲ್ ನಾಲೆಗೆ 100 ಕ್ಯುಸೆಕ್, ಎಲ್‌ಬಿಎಲ್‌ಎಲ್ ನಾಲೆಗೆ 58 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಅಣೆಕಟ್ಟೆಯಲ್ಲಿ ಕೇವಲ 10.663 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 105.12 ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 3361 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 3142 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಜಲಾಶಯದಲ್ಲಿ 27.095 ಟಿಎಂಸಿ ಅಡಿಯಷ್ಟುನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಮುಂಗಾರು ಪೂರ್ವ ಮಳೆ ವ್ಯಾಪಕವಾಗಿ ಸುರಿದ ಪರಿಣಾಮ ಬೇಸಿಗೆಯಲ್ಲೇ ಕೆಆರ್‌ಎಸ್‌ಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯದಲ್ಲಿ ಸುಮಾರು 5 ಅಡಿಗಳಷ್ಟುನೀರು ಏರಿಕೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ