
ನವದೆಹಲಿ: ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ಸರ್ಕಾರ ಸಜ್ಜಾಗಿರುವಾಗಲೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾರತಮ್ಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂಬುದು ರಾಜಕೀಯ ಪ್ರೇರಿತ ಆರೋಪ. ಅದನ್ನು ಹೇಳಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಂತೋಷವಿದೆ ಎಂದು ಚಾಟಿ ಬೀಸಿದ್ದಾರೆ.
ಕೇಂದ್ರ ಸರ್ಕಾರ ತನಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಆರೋಪಿಸುತ್ತಿದೆ ಎಂದು ಲೋಕಸಭೆಯ ಶೂನ್ಯವೇಳೆಯಲ್ಲಿ ಸೋಮವಾರ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, ಆ ರೀತಿ ಆಗಲು ಸಾಧ್ಯವೇ ಇಲ್ಲ. ಏಕೆಂದರೆ, ವ್ಯವಸ್ಥೆ ಅತ್ಯುತ್ತಮವಾಗಿದೆ. ಹಣಕಾಸು ಆಯೋಗದ ವರದಿಯನುಸಾರ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಚರ್ಚೆಯಾದ ಕರ್ನಾಟಕದ 73 ಸಾವಿರ ಕೋಟಿ ಅನುದಾನ ಬಾಕಿ!
‘ನನಗೆ ಈ ರಾಜ್ಯ ಇಷ್ಟವಿಲ್ಲ, ಅನುದಾನ ನಿಲ್ಲಿಸಿಬಿಡಿ’ ಎಂದು ಯಾವುದೇ ಹಣಕಾಸು ಸಚಿವರು ಕೂಡ ಮಧ್ಯಪ್ರವೇಶಿಸಿ ಸೂಚನೆ ನೀಡಲು ಆಗದು. ಆ ರೀತಿ ಆಗಲು ಅವಕಾಶವೇ ಇಲ್ಲ. ಏಕೆಂದರೆ ವ್ಯವಸ್ಥೆ ಅತ್ಯುತ್ತಮವಾಗಿದೆ. ನನ್ನ ಮನಸ್ಸಿಗೆ ತೋಚಿದಂತೆ ನಿಯಮಗಳನ್ನು ಬದಲಾವಣೆ ಮಾಡಲು ಆಗುವುದಿಲ್ಲ. ನಾನು ಶೇ.100ರಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದನ್ನೇ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಎಲ್ಲ ಹಣಕಾಸು ಸಚಿವರೂ ಅದನ್ನೇ ಮಾಡುತ್ತಾರೆ. ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.
ಯಾರಿಗಾದರೂ ನಾನು ಅನುದಾನ ತಡೆ ಹಿಡಿದಿದ್ದೇನೆ ಎಂದು ಅನ್ನಿಸಿದರೆ, ಅಂಥವರು ಹಣಕಾಸು ಆಯೋಗದ ಜತೆ ಮಾತನಾಡಿ. ಬೇಡಿಕೆಗಳು, ಅವಶ್ಯಕತೆಗಳು ಹಾಗೂ ಸ್ಥಿತಿಗತಿಯನ್ನು ಹೇಳಿಕೊಳ್ಳಿ. ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗವೇ ನಿರ್ಧಾರ ಕೈಗೊಳ್ಳಲಿ. ಕರ್ನಾಟಕದ ಉಪಮುಖ್ಯಮಂತ್ರಿಗಳು ತಮ್ಮನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅವರಿಗೆ ವಾಸ್ತವ ತಿಳಿಸಿದ್ದೇನೆ ಎಂದು ವಿವರಿಸಿದರು.
ದಕ್ಷಿಣದಲ್ಲಿ ನಮ್ಮ ಕೆಲಸದ ಬಗ್ಗೆ ತಪ್ಪುಕಲ್ಪನೆ: ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಆಯೋಗ ಹೇಳಿದ್ದನ್ನು ಬಿಟ್ಟು ನಾನು ಬೇರೆ ಏನೂ ಮಾಡಲು ಆಗುವುದಿಲ್ಲ. ಹಣಕಾಸು ಆಯೋಗ ಇಂಥದ್ದು ಮಾಡು ಎಂದರೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ. ಹಣಕಾಸು ಆಯೋಗದ ಶಿಫಾಸುಗಳ ವಿಚಾರದಲ್ಲಿ ನನಗೆ ನನ್ನದೇ ಆದ ವಿವೇಚನೆ ಇದೆ ಎಂದು ಕಲ್ಪಿಸಿಕೊಳ್ಳಬೇಡಿ. ದಯವಿಟ್ಟು ಹಣಕಾಸು ಆಯೋಗದ ಜತೆ ಮಾತನಾಡಿ ಎಂದರು.
ಗ್ಯಾರಂಟಿ ಸ್ಕೀಂಗಳಿಗೂ ಚಾಟಿ:
ಆರು ತಿಂಗಳ ಹಿಂದೆ ಎಲ್ಲವೂ ಸರಿ ಇತ್ತು. ಈಗ ಏನಾಗಿದೆ? ನಿಗದಿತ ಉದ್ದೇಶಗಳಿಗೆ ಹಣವನ್ನು ಖರ್ಚು ಮಾಡಲಾಗಿದೆಯೇ? ನಾನು ಇದನ್ನು ಪ್ರಶ್ನಿಸುತ್ತಿಲ್ಲ. ನೀವು ಖರ್ಚು ಮಾಡಿ. ಆದರೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ. ಕೇಂದ್ರ ಸರ್ಕಾರ ನಿಯಮಗಳ ಪ್ರಕಾರ ನಡೆದುಕೊಳ್ಳುತ್ತದೆ. ಅದರ ಮೇಲೂ ಆರೋಪ ಮಾಡಬೇಡಿ. ನಿಮ್ಮ ಬಜೆಟ್‌ಗಿಂತ ಮೀರಿದ ವೆಚ್ಚಗಳಿಗೆ ನಾನು ಉತ್ತರದಾಯಿ ಅಲ್ಲ ಎಂದು ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ