ಪಾಕ್ ಆಕ್ರಮಿತ ಕಾಶ್ಮೀರದ ಎಲ್ಲ ಭಯೋತ್ಪಾದಕ ಶಿಬಿರಗಳು ಹಾಗೂ 15 ಉಗ್ರರ ಲಾಂಚ್ ಪ್ಯಾಡ್‌ಗಳು ಸಂಪೂರ್ಣ ಭರ್ತಿ| ಪಾಕಿಸ್ತಾನ ಸೇನೆಯ ಸಹಾಯದೊಂದಿಗೆ ಭಾರತಕ್ಕೆ ನುಸುಳಲು ಉಗ್ರರ ತಯಾರಿ| ಸೇನೆಯ ಉನ್ನತ ಕಮಾಂಡರ್ ಆಗಿರುವ ಕನ್ನಡಿಗ ಲೆಫ್ಟಿನಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು
ಶ್ರೀನಗರ(ಜೂ.01): ‘ಭಾರತದ ಸಾರ್ವಭೌಮತೆ ವಿರುದ್ಧ ಯಾರು ದುರುದ್ದೇಶದಿಂದ ಶಸ್ತ್ರ ಕೈಗೆತ್ತಿಕೊಳ್ಳುತ್ತಾರೋ ಅವರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ. ಇದಕ್ಕೆ ಸೇನೆ ಸಿದ್ಧವಿದೆ’ ಎಂದು ಜಮ್ಮು-ಕಾಶ್ಮೀರದ ಕನ್ನಡಿಗ ಲೆ| ಜ| ಬಿ.ಎಸ್. ರಾಜು ಎಚ್ಚರಿಸಿದ್ದಾರೆ.
ಕಳೆದ ಮಾಚ್‌ರ್ 1ರಂದು ಈ ಪಡೆಯ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದ್ದ ರಾಜು ಪಿಟಿಐ ಸುದ್ದಿಸಂಸ್ಥೆಗೆ ಇ-ಮೇಲ್ ಸಂದರ್ಶನ ನೀಡಿ, ‘ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಅಕ್ಷರಶಃ ಬಗ್ಗುಬಡಿಯಲಾಗಿದೆ. ಇದನ್ನು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಗಡಿ ನಿಯಂತ್ರಣ ರೇಖೆ ಆಚೆಯ 15 ಉಗ್ರರ ಲಾಂಚ್ ಪ್ಯಾಡ್‌ಗಳು ಭರ್ತಿ ಆಗಿದ್ದು, ಒಳನುಸುಳುವಿಕೆಯ ಯತ್ನಗಳು ನಡೆಯುತ್ತಿವೆ. ಪಾಕಿಸ್ತಾನಿ ಸೇನೆಯ ಸಹಾಯದಿಂದ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಪುನಶ್ಚೇತನಕ್ಕೆ ಯತ್ನ ನಡೆದಿವೆ’ ಎಂದಿದ್ದಾರೆ.
‘ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆಯು ಉಗ್ರರ ನುಸುಳುವಿಕೆಗೆ ಸಹಾಯ ಮಾಡುತ್ತಿದೆ. ಆದರೆ ಕದನವಿರಾಮ ಉಲ್ಲಂಘಿಸುವ ಪಾಕ್‌ಗೆ ಭಾರತ ದಿಟ್ಟತಿರುಗೇಟು ನೀಡಿ, ಅದರ ಯತ್ನವನ್ನು ವಿಫಲಗೊಳಿಸಿದೆ’ ಎಂದಿದ್ದಾರೆ.
‘ಚಿನಾರ್ ಕೋರ್’ ಎಂದೇ ಖ್ಯಾತವಾಗಿರುವ ಭಾರತೀಯ ಸೇನೆಯ ‘15 ಕೋರ್’ ಪದಾತಿದಳವು ಕಾಶ್ಮೀರದಲ್ಲಿ ನಡೆಯುವ ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆ ಜವಾಬ್ದಾರಿ ಹೊತ್ತಿದೆ.
ಜನಿಸಿದ್ದು ದಾವಣಗೆರೆ, ಓದಿದ್ದು ವಿಜಯಪುರ:
ಲೆ| ಜ| ಬಿ.ಎಸ್. ರಾಜು ಅವರ ಪೂರ್ಣ ಹೆಸರು ಬಗ್ಗವಳ್ಳಿ ಸೋಮಶೇಖರ ರಾಜು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಬಗ್ಗವಳ್ಳಿಯವರು. ಇವರು ಜನಿಸಿದ್ದು ದಾವಣಗೆರೆಯಲ್ಲಿ. ಕರ್ನಾಟಕದ ವಿಜಯಪುರದ ಸೈನಿಕ ಶಾಲೆಯಲ್ಲಿ ಓದಿದ ಇವರು 1984ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತೇರ್ಗಡೆ ಹೊಂದಿದರು. ಜಮ್ಮು-ಕಾಶ್ಮೀರದ ವಿವಿಧ ಸೇನಾ ಪಡೆಗಳಲ್ಲಿ 5 ಅವಧಿಗೆ ಇವರು ಕೆಲಸ ಮಾಡಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಬ್ರಿಗೇಡ್ ಕಮಾಂಡರ್ ಕೂಡ ಆಗಿದ್ದರು.