ಬಾಲಾಕೋಟಲ್ಲಿ ಮತ್ತೆ ಉಗ್ರರ ಫ್ಯಾಕ್ಟ್ರಿ! ಗುಪ್ತಚರ ದಳ ಎಚ್ಚರಿಕೆ

By Kannadaprabha NewsFirst Published Feb 8, 2020, 7:22 AM IST
Highlights

 ಕಳೆದ ಫೆಬ್ರವರಿಯಲ್ಲಿ ನಾಶಪಡಿಸಿದ್ದ ಪಾಕಿಸ್ತಾನದ ಬಾಲಾಕೋಟ್‌ ಉಗ್ರಗಾಮಿಗಳ ಶಿಬಿರ ವರ್ಷ ತುಂಬುವ ಮೊದಲೇ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಿದೆ. ಅಲ್ಲಿ ಈಗ 27 ಉಗ್ರಗಾಮಿಗಳಿಗೆ ತರಬೇತಿ ನಡೆಯುತ್ತಿದೆ. 

ನವದೆಹಲಿ (ಫೆ.08): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಕಳೆದ ಫೆಬ್ರವರಿಯಲ್ಲಿ ನಾಶಪಡಿಸಿದ್ದ ಪಾಕಿಸ್ತಾನದ ಬಾಲಾಕೋಟ್‌ ಉಗ್ರಗಾಮಿಗಳ ಶಿಬಿರ ವರ್ಷ ತುಂಬುವ ಮೊದಲೇ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಿದೆ. ಅಲ್ಲಿ ಈಗ 27 ಉಗ್ರಗಾಮಿಗಳಿಗೆ ತರಬೇತಿ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ತರಬೇತಿ ಮುಗಿಯಲಿದ್ದು, ಬಳಿಕ ವಿಧ್ವಂಸಕ ಕೃತ್ಯ ಎಸಗಲು ಆ ಉಗ್ರರನ್ನು ಭಾರತಕ್ಕೆ ಅಟ್ಟಲಾಗುತ್ತದೆ ಎಂಬ ಅತ್ಯಂತ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನ ಬಂಧುವಾಗಿರುವ ಯೂಸುಫ್‌ ಅಜರ್‌ ಎಂಬಾತ ಈ ಶಿಬಿರವನ್ನು ಮುನ್ನಡೆಸುತ್ತಿದ್ದಾನೆ.

ಪಾಕ್‌ ಆಕ್ರಮಿತ ಕಾಶ್ಮೀರದ 8 ಮಂದಿ ಸೇರಿದಂತೆ 27 ಉಗ್ರರಿಗೆ ಪಾಕಿಸ್ತಾನದ ಇಬ್ಬರು ಹಾಗೂ ಆಷ್ಘಾನಿಸ್ತಾನದ ಮೂವರು ತರಬೇತಿ ನೀಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ತರಬೇತಿ ಮುಗಿಯಲಿದ್ದು, ಬಳಿಕ ಈ ಉಗ್ರರನ್ನು ಭಾರತದೊಳಕ್ಕೆ ನುಸುಳಿಸಲಾಗುತ್ತದೆ ಎಂದು ಗುಪ್ತಚರ ಹಾಗೂ ಭಯೋತ್ಪಾದನೆ ನಿಗ್ರಹ ಪಡೆಯ ಮೂಲಗಳು ತಿಳಿಸಿವೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಪ್ರಧಾನಿ ಮೋದಿ ಬಳಸಿದ್ದ ಪದ ರಾಜ್ಯಸಭೆ ಕಡತದಿಂದ ಔಟ್...

2019ರ ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರನ್ನು ಹತ್ಯೆಗೈಯಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಫೆ.26ರಂದು ಬಾಲಾಕೋಟ್‌ನಲ್ಲಿನ ಜೈಷ್‌ ಉಗ್ರಗಾಮಿ ಶಿಬಿರಗಳ ಮೇಲೆ ಭಾರತದ ವಿಮಾನಗಳು ದಾಳಿ ನಡೆಸಿದ್ದವು. ಆ ಸಂದರ್ಭದಲ್ಲಿ ಅಲ್ಲಿ 300 ಉಗ್ರರು ತರಬೇತಿ ಪಡೆಯುತ್ತಿದ್ದರು. ಇಡೀ ಶಿಬಿರವನ್ನು ಭಾರತೀಯ ವಿಮಾನಗಳು ನಾಶಗೊಳಿಸಿ ಜೈಷ್‌ ಸಂಘಟನೆಗೆ ಮರ್ಮಾಘಾತ ನೀಡಿದ್ದವು.

click me!