
ರಾಯ್‌ಪುರ (ಏ.03): ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಒಟ್ಟು 10 ನಕ್ಸಲರು ಹತರಾಗಿದ್ದಾರೆ. ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಮದ್ದು ಗುಂಡು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ನಕ್ಸಲರ ಪ್ರಮುಖ ತಾಣವಾದ ಬಸ್ತರ್ ಅರಣ್ಯ ಪ್ರದೇಶವು ಬಸ್ತ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಅಲ್ಲಿ ಏ.19ರಂದು ಚುನಾವಣೆ ನಿಗದಿಯಾಗಿದೆ. ಅದಕ್ಕೂ ಮುನ್ನ ಈ ಘಟನೆ ನಡೆದಿದೆ. ಗಂಗಲೂರು ಪೊಲೀಸ್ ಠಾಣಾ ಬಳಿ ವ್ಯಾಪ್ತಿಯ ಲೆಂಡ್ರಾ ಗ್ರಾಮದ ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ನಕ್ಸಲರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಲಘು ಮೆಷಿನ್ ಗನ್, ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಸಂಭವಿಸಿದ ಸಾವೂ ಸೇರಿದಂತೆ ಈ ವರ್ಷ ರಾಜ್ಯದಲ್ಲಿ ಒಟ್ಟು 43 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ.
6 ಮಂದಿ ನಕ್ಸಲರ ಹತ್ಯೆ: ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ನಕ್ಸಲರನ್ನು ಭದ್ರತಾ ಪಡೆಗಳು ಸಂಹರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಬಾಸಾಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಚಿಪುರಭಟ್ಟಿ ಗ್ರಾಮದ ಬಳಿಯ ತಲಪೇರು ನದಿ ತೀರದ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್, ಕೇಂದ್ರೀಯ ಮೀಸಲು ಪಡೆ ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ನಕ್ಸಲರು ಮೃತಪಟ್ಟಿದ್ದು, ಸ್ಥಳದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈಶಾನ್ಯ ಭಾರತದಲ್ಲಿ ‘ಇಂಡಿಯಾ’ಗಿಂತ ಎನ್‌ಡಿಎ ಮುಂಚೂಣಿ?
ಗುಂಡಿನ ದಾಳಿಗೆ 5 ನಕ್ಸಲರ ಸಾವು: ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಚಕಮಕಿ ವೇಳೆ 5 ನಕ್ಸಲರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಗೆ ತೆಲಂಗಾಣದಿಂದ ಕೆಲ ನಕ್ಸಲರು ಪ್ರವೇಶ ಮಾಡಿದ್ದಾರೆ ಎಂಬ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ದಾಳಿ ನಡೆಸಿದ ವೇಳೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ನಾಲ್ಕು ನಕ್ಸಲರು ಸಾವನ್ನಪ್ಪಿದ್ದಾರೆ. ಇವರ ಮಾಹಿತಿ ನೀಡಿದವರಿಗೆ ಒಟ್ಟಾರೆ 36 ಲಕ್ಷ ರು.ಬಹುಮಾನದ ಘೋಷಣೆ ಮಾಡಲಾಗಿತ್ತು. ಘಟನಾ ಸ್ಥಳದಿಂದ ಸಾಕಷ್ಟು ಪ್ರಮಾಣದ ಮದ್ದುಗುಂಡು, ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಛತ್ತೀಸ್‌ಗಢದ ದಂತೇವಾಡಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ವೇಳೆ ಓರ್ವ ನಕ್ಸಲ್ ಮೃತಪಟ್ಟಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ