* 1ರಿಂದ 10ನೇ ಕ್ಲಾಸ್‌ಗೆ 2ನೇ ಭಾಷೆಯಾಗಿ ಕಲಿಕೆ
* ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಶಾಲೆಗೂ ಅನ್ವಯ
* ತೆಲಂಗಾಣದ ಶಾಲೆಗಳಲ್ಲಿ ತೆಲುಗು ಕಲಿಕೆ ಕಡ್ಡಾಯ
ಹೈದರಾಬಾದ್(ಜೂ.16): ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಸೇರಿದಂತೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಬೋರ್ಡ್‌ಗಳಲ್ಲಿ ನೊಂದಾಯಿತವಾಗಿರುವ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ದ್ವಿತೀಯ ಭಾಷೆಯಾಗಿ ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ತೆಲಂಗಾಣ (ಶಾಲೆಗಳಲ್ಲಿ ಕಡ್ಡಾಯ ತೆಲುಗು ಭಾಷಾ ಶಿಕ್ಷಣ) ಕಾಯ್ದೆ 2018ರ ಅಡಿಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ. ಈ ಕಾಯ್ದೆಯ ಅನ್ವಯ 1ನೇ ತರಗತಿಯಿಂದ 10 ತರಗತಿವರೆಗೆ ತೆಲುಗು ಭಾಷೆಯನ್ನು ಕಲಿಸುವುದು ಕಡ್ಡಾಯವಾಗಿದೆ. ತೆಲುಗು ಭಾಷೆ ಕಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಲು ರಾಜ್ಯ ಶಿಕ್ಷಣ ಇಲಾಖೆ, ತೆಲುಗು ಮಾತೃಭಾಷೆಯಾದ ವಿದ್ಯಾರ್ಥಿಗಳಿಗೆ ಹಾಗೂ ತೆಲುಗು ಮಾತೃಭಾಷೆಯಲ್ಲದ ವಿಧ್ಯಾರ್ಥಿಗಳಿಗೆ 2 ವಿಧದ ಪಠ್ಯಪುಸ್ತಕಗಳನ್ನು ತಯಾರಿಸಿದೆ.