ಅಧಿಕಾರಕ್ಕೆ ಬಂದ ಮಾರನೇ ದಿನವೇ 6 ಗ್ಯಾರಂಟಿಗಳ ಪೈಕಿ 2 ಗ್ಯಾರಂಟಿ ಯೋಜನೆಗಳ ಜಾರಿಗೆ ತೆಲಂಗಾಣದ ಕಾಂಗ್ರೆಸ್‌ನ ರೇವಂತ ರೆಡ್ಡಿ ಸರ್ಕಾರ ನಿರ್ಧರಿಸಿದ್ದು, ಮಹಾಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಯೋಜನೆಯನ್ನು ಶನಿವಾರದಿಂದ ಜಾರಿಗೆ ತಂದಿದೆ.
ಹೈದರಾಬಾದ್ (ಡಿ.10): ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ 6 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಎರಡಕ್ಕೆ ನೂತನ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಶನಿವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜನ್ಮದಿನದಂದು ಚಾಲನೆ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ಮಾಲೀಕತ್ವದ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಆರೋಗ್ಯ ವಿಮೆಯನ್ನು 5 ಲಕ್ಷ ರು.ನಿಂದ 10 ಲಕ್ಷ ರು.ಗೆ ಹೆಚ್ಚಿಸುವ ರಾಜೀವ್ ಆರೋಗ್ಯಶ್ರೀ ಯೋಜನೆಯನ್ನು ರೆಡ್ಡಿ ಉದ್ಘಾಟಿಸಿದರು. ಉಚಿತ ಬಸ್ ಪ್ರಯಾಣಕ್ಕೆ ಎಲ್ಲಾ ಸಂಪುಟ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಸಮ್ಮುಖದಲ್ಲಿ ಮಹಿಳಾ ಸಚಿವೆ ಸೀತಕ್ಕ ಮತ್ತು ಸಂಪುಟ ಸಚಿವೆ ಕೊಂಡಾ ಸುರೇಖ ಹಸಿರು ನಿಶಾನೆ ತೋರಿದರು. ಟಿಎಸ್‌ಆರ್‌ಟಿಸಿಯ ಶೂನ್ಯ ಟಿಕೆಟ್ ಮತ್ತು ರಾಜೀವ್ ಆರೋಗ್ಯಶ್ರೀ ಯೋಜನೆಯ ಹೊಸ ಲಾಂಛನ ಮತ್ತು ಪೋಸ್ಟರ್‌ಗಳನ್ನು ಅನಾವರಣಗೊಳಿಸಿದರು.
ಕರ್ನಾಟಕ ರೀತಿ ತೆಲಂಗಾಣದಲ್ಲೂ ನುಡಿದಂತೆ ನಡೆದಿದ್ದೇವೆ: ಡಿ.ಕೆ.ಶಿವಕುಮಾರ್
ಏನಿವು ಯೋಜನೆ?:
ರಾಜ್ಯದ ಗಡಿಯ ಒಳಗೆ ಬಾಲಕಿಯರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ಇದಕ್ಕಾಗಿ ಅವರು ಯಾವುದೇ ಗುರುತಿನ ಚೀಟಿ ತೋರಿಸಬಹುದು.
ಮಹಾಲಕ್ಷ್ಮೀ ಯೋಜನೆಯಡಿ ತೆಲಂಗಾಣಕ್ಕೆ ಸೇರಿದ ಎಲ್ಲಾ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ‘ಪಲ್ಲೆ ವೆಲುಗು’ (ಹಳ್ಳಿ ಬೆಳಕು) ಮತ್ತು ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದು. ಹಾಗೆಯೇ ಅಂತಾರಾಜ್ಯ ಬಸ್‌ಗಳಲ್ಲೂ ಸಹ ರಾಜ್ಯದ ಗಡಿಯವರೆಗೆ ಉಚಿತ ಪ್ರಯಾಣ ಸೌಕರ್ಯ ಒದಗಿಸಲಾಗಿದೆ.
ಇನ್ನು ರಾಜೀವ್ ಆರೋಗ್ಯಶ್ರೀ ಯೋಜನೆಯಡಿ ನೀಡುವ ಆರೋಗ್ಯ ವಿಮೆ ಆರೋಗ್ಯ ಸಿರಿಯನ್ನು ಬಡತನ ರೇಖೆಗಿಂತ ಕೆಳಗಿನ ವರ್ಗದ ಕುಟುಂಬಗಳಿಗೆ (ಬಿಪಿಎಲ್) ಎರಡು ಪಟ್ಟು ಅಂದರೆ 5ರಿಂದ 10 ಲಕ್ಷ ರು. ಹೆಚ್ಚಿಸಲಾಗುವುದು.
ರೇವಂತ್ ರೆಡ್ಡಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ಸಚಿವನೂ ಇಲ್ಲ: ಬಂದೂಕು ಹಿಡಿದಿದ್ದ ನಕ್ಸಲ್ ಸೀತಕ್ಕ ಈಗ ತೆಲಂಗಾಣ ಸಚಿವೆ
ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಪ್ರಸಕ್ತ ಆರರ ಪೈಕಿ ಎರಡು ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಇನ್ನು 100 ದಿನಗಳಲ್ಲಿ ಆರು ಗ್ಯಾರಂಟಿಗಳನ್ನು ಜಾರಿಗೊಳಿಸಿ ತೆಲಂಗಾಣವನ್ನು ಕಲ್ಯಾಣ ರಾಜ್ಯವನ್ನಾಗಿಸುತ್ತೇವೆ ಎಂದು ರೇವಂತ್ ಹೇಳಿದರು.
ಇನ್ನು ರಾಜ್ಯದಲ್ಲಿ ಮುಂಗಾರು ಸಮಯದಲ್ಲಿ ಉಂಟಾದ ಬೆಳೆನಷ್ಟವನ್ನು ಅಧ್ಯಯನ ಮಾಡಲು ಸೂಚಿಸಲಾಗಿದ್ದು, ಸೂಕ್ತ ಪರಿಹಾರವನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.