
ಹೈದರಾಬಾದ್: ತೆಲಂಗಾಣ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ಲೀಲೆಗಳು ಬಟಾ ಬಯಲಾಗಿದೆ, ಇಡೀ ರಾಜ್ಯದ ಪೊಲೀಸ್ ಇಲಾಖೆಯೇ ಈ ಅಧಿಕಾರಿಯ ಆಸ್ತಿ ಬಗ್ಗೆ ಬೆಚ್ಚಿಬೀಳುವಂತಾಗಿದೆ. ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸೇವೆಗಳ (PCS) ವಿಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸಂಕಿರೆಡ್ಡಿ ಭೀಮ್ ರೆಡ್ಡಿ ಎಂಬುವವರು ತಮ್ಮ ಅಧಿಕೃತ ಆದಾಯಕ್ಕಿಂತ ನೂರಾರು ಪಟ್ಟು ಹೆಚ್ಚು ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದಾರೆ
ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ಎಸಿಬಿ ಅಧಿಕಾರಿಗಳು, ಡಿಎಸ್‌ಪಿ ಭೀಮ್ ರೆಡ್ಡಿ ಅವರ ನಿವಾಸ ಸೇರಿದಂತೆ ಅವರ ಸಂಬಂಧಿಕರು, ಸ್ನೇಹಿತರು ಹಾಗೂ ಬೇನಾಮಿಗಳಿಗೆ ಸೇರಿದ ತೆಲಂಗಾಣ ಮತ್ತು ಕರ್ನಾಟಕದ ಒಟ್ಟು 16 ಜಾಗಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ವಶಪಡಿಸಿಕೊಳ್ಳಲಾದ ಆಸ್ತಿಗಳ ಒಟ್ಟು ಮೌಲ್ಯ 200 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜು ಮಾಡಲಾಗಿದೆ.
ಎಸಿಬಿ ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯದಲ್ಲಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿವೆ. ಡಿಎಸ್‌ಪಿ ನಿವಾಸದಿಂದ 3.6 ಲಕ್ಷ ರೂ. ಹಾಗೂ ಅವರ ಪ್ರಮುಖ ಬೇನಾಮಿದಾರನ ನಿವಾಸದಿಂದ ಬರೋಬ್ಬರಿ 40 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು 2 ಕೆಜಿ ಚಿನ್ನದ ಆಭರಣಗಳು ಮತ್ತು 20 ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿದ್ದ 19.91 ಲಕ್ಷ ರೂಪಾಯಿಗಳ ಠೇವಣಿಯನ್ನು ಫ್ರೀಜ್ ಮಾಡಲಾಗಿದೆ. ಶೋಧದ ಸಮಯದಲ್ಲಿ ನಿಯಮ ಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 23 ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಹೀಗಾಗಿ ಮುಂದಿನ ಕ್ರಮಕ್ಕಾಗಿ ಅಬಕಾರಿ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.
ಡಿಎಸ್‌ಪಿ ಭೀಮ್ ರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ರಿಯಲ್ ಎಸ್ಟೇಟ್ ಹಾಗೂ ಕೃಷಿ ಭೂಮಿಯ ಮೇಲೆ ಭಾರಿ ಪ್ರಮಾಣದ ಹೂಡಿಕೆ ಮಾಡಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ಇಬ್ರಾಹಿಂಬಾಗ್‌ನಲ್ಲಿರುವ ವೆಸ್ಸೆಲ್ಲಾ ಮೆಡೋಸ್‌ನ ಅತ್ಯಾಧುನಿಕ ಐಷಾರಾಮಿ ವಿಲ್ಲಾ, ಟೆಲಿಕಾಂ ನಗರದಲ್ಲಿ ಪೆಂಟ್‌ಹೌಸ್ ಹೊಂದಿರುವ ಎರಡು ಅಂತಸ್ತಿನ ಸುಸಜ್ಜಿತ ಮನೆ. ಗಚಿಬೌಲಿ ಮತ್ತು ಟೆಲಿಕಾಂ ನಗರದಲ್ಲಿ ತಲಾ ಒಂದು ಫ್ಲಾಟ್ ಹಾಗೂ ತೆಲ್ಲಾಪುರದಲ್ಲಿ ಎರಡು ಅಪಾರ್ಟ್‌ಮೆಂಟ್ ಫ್ಲಾಟ್‌ಗಳು. ಮಣಿಕೊಂಡದ ಲ್ಯಾಂಕೊ ಹಿಲ್ಸ್ ರಸ್ತೆಯಲ್ಲಿರುವ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಭಾರಿ ಪಾಲು (Share) ಹೊಂದಿದ್ದಾನೆ. ಇದರ ಜೊತೆಗೆ ಮಣಿಕೊಂಡ ಮಾರಿಚೆಟ್ಟು ಜಂಕ್ಷನ್ ಬಳಿ ಇರುವ 3,000 ಚದರ ಅಡಿಯ ವಾಣಿಜ್ಯ ಜಾಗವಿದೆ.
ಪ್ರಗತಿ ರೆಸಾರ್ಟ್ಸ್‌ನಲ್ಲಿ 500 ಚದರ ಗಜ, ನಾಗೋಲ್‌ನಲ್ಲಿ 200 ಚದರ ಗಜ, ಪತಂಚೇರುದಲ್ಲಿ 400 ಮತ್ತು 200 ಚದರ ಗಜ ಹಾಗೂ ಮೋಮಿನ್‌ಪೇಟೆಯಲ್ಲಿ 1,000 ಚದರ ಗಜಗಳಷ್ಟು ಅಳತೆಯ ತೆರೆದ ನಿವೇಶನಗಳು (Plots). ಕರ್ನಾಟಕದಲ್ಲಿ ಬರೋಬ್ಬರಿ 46 ಎಕರೆ ಕೃಷಿ ಭೂಮಿ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 1 ಎಕರೆ ಬೆಲೆಬಾಳುವ ಭೂಮಿ. ತೆಲಂಗಾಣದ ಮೋಮಿನ್‌ಪೇಟೆಯಲ್ಲಿ 2 ಎಕರೆ ಮತ್ತು ಮುಚ್ಚಿಂತಲ ಗ್ರಾಮದಲ್ಲಿ 4.2 ಎಕರೆ ಭೂಮಿ. 'ಶ್ರೀ ರಾಘವೇಂದ್ರ ರಾಕ್ ಸ್ಯಾಂಡ್ ಮಿನರಲ್ಸ್' ಎಂಬ ಉದ್ಯಮದ ಮೇಲೆ 75 ಲಕ್ಷ ರೂ.ಗಳ ಹೂಡಿಕೆ ಮಾಡಲಾಗಿದೆ
ಈ ಹಿಂದೆ ಜೆಡ್ಚೆರ್ಲಾ ಇನ್ಸ್‌ಪೆಕ್ಟರ್ (CI) ಆಗಿ ಹಾಗೂ ಪತಂಚೇರು ಡಿಎಸ್‌ಪಿಯಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದ ಭೀಮ್ ರೆಡ್ಡಿ, ಕಪ್ಪು ಹಣವನ್ನು ಬಿಳುಪು ಮಾಡಲು ಬೇನಾಮಿಗಳನ್ನು ಬಳಸಿಕೊಂಡಿದ್ದರು. ದಾಳಿಯ ವೇಳೆ ಎಸಿಬಿ ಅಧಿಕಾರಿಗಳಿಗೆ ಸುಮಾರು 15 ಬೇನಾಮಿದಾರರ ಹೆಸರು ಮತ್ತು ಆಸ್ತಿ ವಿವರಗಳಿರುವ ರಹಸ್ಯ ಡೈರಿ ಸಿಕ್ಕಿದ್ದು, ತನಿಖೆಗೆ ದೊಡ್ಡ ಸುಳಿವು ನೀಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಸೆಕ್ಷನ್ 13(1)(b) ಮತ್ತು 13(2) ರ ಅಡಿಯಲ್ಲಿ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. "ಇನ್ನೂ ಹಲವು ಬ್ಯಾಂಕ್ ಲಾಕರ್‌ಗಳು ಹಾಗೂ ಗುಪ್ತ ಆಸ್ತಿಗಳ ಪರಿಶೀಲನೆ ಬಾಕಿ ಇರುವುದರಿಂದ, ಈ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ," ಎಂದು ಎಸಿಬಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ