158 ತುರ್ತು ಸಾಲ ಆ್ಯಪ್‌ ನಿಷೇಧಕ್ಕೆ ತೆಲಂಗಾಣ ಮೊರೆ!

By Suvarna NewsFirst Published Dec 28, 2020, 11:24 AM IST
Highlights

158 ತುರ್ತು ಸಾಲ ಆ್ಯಪ್‌ ನಿಷೇಧಕ್ಕೆ ತೆಲಂಗಾಣ ಮೊರೆ| ಗೂಗಲ್‌ಗೆ ಪ್ರಸ್ತಾವ ಸಲ್ಲಿಸಿದ ಪೊಲೀಸರು

ಹೈದರಾಬಾದ್(ಡಿ.28)‌: ತುರ್ತು ಸಾಲ ನೀಡಿ ಅದರ ವಸೂಲಾತಿಗೆ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಕೃತ್ಯದಲ್ಲಿ ಭಾಗಿಯಾದ 14 ಮಂದಿಯ ಬಂಧನದ ಬೆನ್ನಲ್ಲೇ, ತುರ್ತು ಸಾಲ ಸೌಲಭ್ಯ ಕಲ್ಪಿಸುವ 158 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಲ್ಲಿ ಬ್ಲಾಕ್‌ ಮಾಡುವಂತೆ ಗೂಗಲ್‌ಗೆ ತೆಲಂಗಾಣ ಪೊಲೀಸರು ಸೂಚನೆ ನೀಡಿದ್ದಾರೆ. ಈ ಕುರಿತ ತಮ್ಮ ಪ್ರಸ್ತಾವನೆಗೆ ಗೂಗಲ್‌ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಎಂದು ಹೈದರಾಬಾದ್‌ ಜಂಟಿ ಪೊಲೀಸ್‌ ಆಯುಕ್ತ ಅವಿನಾಶ್‌ ಮೊಹಂತಿ ಹೇಳಿದ್ದಾರೆ.

ಸುಲಿಗೆ ಕೇಸ್‌ನಲ್ಲಿ ಚೀನಾ ನಾಗರಿಕರ ಪಾತ್ರವೂ ಬಹಿರಂಗವಾದ ಹಿನ್ನೆಲೆ ಈ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ(ಇ.ಡಿ)ವೂ ಪ್ರವೇಶ ಪಡೆದಿದ್ದು, ತೆಲಂಗಾಣ ಪೊಲೀಸರಿಂದ ಈ ಕುರಿತಾದ ಮಾಹಿತಿಗಳನ್ನು ಕ್ರೋಢೀಕರಿಸುತ್ತಿದೆ ಎಂದು ತಿಳಿದುಬಂದಿದೆ.

ಚೀನಾ ಪ್ರಜೆ ಸೇರಿ ಮೂವರ ಸೆರೆ:

ತುರ್ತು ಸಾಲ ನೀಡಿಕೆಯ ಆ್ಯಪ್‌ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ತೆಲಂಗಾಣ ಪೊಲೀಸರು, ತುರ್ತು ಸಾಲದ ವಸೂಲಾತಿಗಾಗಿ ಸಾಲ ಪಡೆದವರಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಪುಣೆ ಮೂಲದ ಕಾಲ್‌ಸೆಂಟರ್‌ ಅನ್ನು ಪತ್ತೆ ಹಚ್ಚಿದ್ದಾಗಿ ಹೇಳಿದ್ದಾರೆ. ಅಲ್ಲದೆ ಭಾನುವಾರದ ಈ ಕಾರಾರ‍ಯಚರಣೆಯಲ್ಲಿ ಚೀನಾದ ಮಹಿಳೆ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ಆ್ಯಪ್‌ಗಳ ಮೂಲಕ ಜನರಿಗೆ ತುರ್ತು ಸಾಲಗಳನ್ನು ನೀಡಿ ಆ ಬಳಿಕ ಅದರ ವಸೂಲಾತಿಗಾಗಿ ಈ ಕಂಪನಿಗಳು ದಬ್ಬಾಳಿಕೆ ಮತ್ತು ಸಾರ್ವಜನಿಕವಾಗಿ ಅವರ ಹೆಸರುಗಳನ್ನು ಸುಸ್ತಿದಾರರೆಂದು ಪ್ರಕಟಿಸಿ ಅವಮಾನಿಸುತ್ತಿದ್ದರು. ಇದರಿಂದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ತನಿಖೆ ವೇಳೆ ಈ 158 ಆ್ಯಪ್‌ಗಳ ಮರ್ಮ ಬಯಲಾಗಿತ್ತು.

click me!