
ನವದೆಹಲಿ: 41 ಜನರ ಬಲಿ ಪಡೆದ ಕರೂರು ಕಾಲ್ತುಳಿತದ ಘಟನೆಗೆ ಕಾರಣವೇನು ಎಂದು ತಿಳಿಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎನ್‌ಡಿಎದ 8 ಸಂಸದರ ನಿಯೋಗವೊಂದನ್ನು ರಚಿಸಿದ್ದಾರೆ. ಹೇಮಾಮಾಲಿನಿ ನೇತೃತ್ವದ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್, ಶಿವಸೇನೆಯ ಶ್ರೀಕಾಂತ್ ಶಿಂಧೆ, ಟಿಡಿಪಿಯ ಪುಟ್ಟ ಮಹೇಶ್ ಕುಮಾರ್, ಮಾಜಿ ಐಪಿಎಸ್ ಅಧಿಕಾರಿ ಬ್ರಿಜ್ ಲಾಲ್, ಅಪರಾಜಿತ ಸಾರಂಗಿ, ರೇಖಾ ಶರ್ಮಾ ಇದ್ದಾರೆ.
ಹೆಚ್ಚು ಜನ ಸೇರಿಸಲೆಂದೇ ಕರೂರ್‌ಗೆ ವಿಜಯ್ ತಡವಾಗಿ ಆಗಮನ : ಕೇಸು
ಚೆನ್ನೈ: ಟಿವಿಕೆ ಪಕ್ಷದ ಪ್ರಚಾರ ಸಭೆಗೆ ನಟ ವಿಜಯ್ ಅವರು ಉದ್ದೇಶಪೂರ್ವಕವಾಗಿ ವಿಳಂಬವಾಗಿ ಆಗಮಿಸಿದ್ದು, ಸ್ಥಳಕ್ಕೆ ಬಂದ ನಂತರವೂ ವಾಹನದೊಳಗೇ ಕೆಲ ಹೊತ್ತು ಉಳಿದಿದ್ದು ಕಾಲ್ತುಳಿತಕ್ಕೆ ಕಾರಣ ಎಂದು ಕರೂರು ಪೊಲೀಸರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
41 ಮಂದಿ ಸಾವಿನ ಕುರಿತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಎಫ್‌ಐಆರ್‌ನಲ್ಲಿ ವಿಜಯ್ ಹೆಸರು ದಾಖಲಿಸಿಲ್ಲ. ಬದಲಾಗಿ ಟಿವಿಕೆ ಪಕ್ಷದ ಮೂವರು ಜಿಲ್ಲಾ ಮುಖಂಡರ ಹೆಸರು ಉಲ್ಲೇಖಿಸಲಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ?:
ಸಭೆಗೆ ಹೆಚ್ಚು ಜನರು ಸೇರಬೇಕು. ಈ ಮೂಲಕ ಎದುರಾಳಿಗೆ ಸಂದೇಶ ರವಾನಿಸಬೇಕು ಎಂದು ಟಿವಿಕೆ ಪಕ್ಷದ ಉದ್ದೇಶವಾಗಿತ್ತು. ಹೀಗಾಗಿ ವಿಜಯ್ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಬಳಿಕವೂ ವಾಹನದಿಂದ ಹೊರಬರಲಿಲ್ಲ. ಹೀಗಾಗಿ ಬೆಳಗ್ಗೆಯಿಂದ ಕಾದು ಬಸವಳಿದಿದ್ದ ಕಾರ್ಯಕರ್ತರು, ಅಭಿಮಾನಿಗಳು ನಾಯಕ ನಟನ ನೋಡಲು ಮುಗಿಬಿದ್ದಿದ್ದಾರೆ.
ಕಿರಿದಾದ ರಸ್ತೆಯಿಂದಾಗಿ ತೀವ್ರ ನೂಕುನುಗ್ಗಲು, ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಯಿತು. ಇನ್ನು ಕೆಲವರು ಮರ ಹತ್ತಿಕೂತರೆ, ರಸ್ತೆಪಕ್ಕದ ಬಸ್‌ಸ್ಟ್ಯಾಂಡ್ ಹತ್ತಿ ವಿಜಯ್ ನೋಡಲು ಕೆಲವರು ಮುಂದಾದರು. ಆಗ ಅತಿಯಾದ ಭಾರ ತಾಳಲಾರದೆ ಬಸ್‌ಸ್ಟ್ಯಾಂಡ್ ಕುಸಿದು ಬಿತ್ತು. ಇದರಿಂದಲೂ ನೂಕುನುಗ್ಗಲು ಆಗಿ ಉಸಿರುಗಟ್ಟಿದಂತಾಯಿತು. ಇದೇ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಒಂದು ಹಂತದಲ್ಲಿ ಲಘು ಲಾಠಿ ಚಾರ್ಜ್ ಮಾಡಬೇಕಾಯಿತು. ಜೊತೆಗೆ 10000 ಮಂದಿ ಪ್ರಚಾರ ಸಭೆಗೆ ಪಕ್ಷದ ಜಿಲ್ಲಾ ಮುಖಂಡರು ಅನುಮತಿ ಕೋರಿದ್ದರು. ಆದರೆ, ಸ್ಥಳದಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು ಎಂದು ಆರೋಪಿಸಲಾಗಿದೆ. ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ
ಟಿವಿಕೆ ಕಾರ್ಯದರ್ಶಿ ಬಂಧನ
ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ, ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಕರೂರು ಜಿಲ್ಲಾ ಕಾರ್ಯದರ್ಶಿ ಮಥಿಯಳಗನ್ ಅವರನ್ನು ಬಂಧಿಸಲಾಗಿದೆ. ಇದು ಈ ಪ್ರಕರಣದಲ್ಲಿ ನಡೆದ ಮೊದಲ ಬಂಧನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ